ADVERTISEMENT

ಜಿಲ್ಲಾಡಳಿತದ ಯಶಸ್ಸಿಗೆ ನೌಕರರ ಕಾರ್ಯದಕ್ಷತೆ ಅಗತ್ಯ: ವೆಂಕಟ್‌ರಾಜಾ ಕಿವಿಮಾತು

ಒತ್ತಡಕ್ಕೆ ಮಣಿಯಬೇಡಿ: ನೌಕರರಿಗೆ ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 13 ಮೇ 2022, 15:25 IST
Last Updated 13 ಮೇ 2022, 15:25 IST
ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಜಿಲ್ಲಾಧಿಕಾರಿ ವೆಂಕಟ್‍ರಾಜಾ, ಎಸ್‌ಪಿ ಡಿ.ದೇವರಾಜ್ ಮತ್ತು ಜಿ.ಪಂ ಸಿಇಒ ಯುಕೇಶ್‍ಕುಮಾರ್ ಕೋಲಾರದಲ್ಲಿ ಶುಕ್ರವಾರ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿದರು
ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಜಿಲ್ಲಾಧಿಕಾರಿ ವೆಂಕಟ್‍ರಾಜಾ, ಎಸ್‌ಪಿ ಡಿ.ದೇವರಾಜ್ ಮತ್ತು ಜಿ.ಪಂ ಸಿಇಒ ಯುಕೇಶ್‍ಕುಮಾರ್ ಕೋಲಾರದಲ್ಲಿ ಶುಕ್ರವಾರ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿದರು   

ಕೋಲಾರ: ‘ಜಿಲ್ಲಾಡಳಿತದ ಯಶಸ್ಸು ಹಾಗೂ ಜಿಲ್ಲೆಯ ಅಭಿವೃದ್ಧಿಗೆ ನೌಕರರು ಕಾರ್ಯದಕ್ಷತೆ ಮತ್ತು ಶ್ರದ್ಧೆಯಿಂದ ತಂಡೋಪಾದಿಯಲ್ಲಿ ಕೆಲಸ ಮಾಡಿದರೆ ಯಶಸ್ಸು ಖಚಿತ. ಹುದ್ದೆ ಯಾವುದೇ ಇರಲಿ ಕೆಲಸದಲ್ಲಿ ತಲ್ಲೀನತೆ ಮುಖ್ಯ’ ಎಂದು ಜಿಲ್ಲಾಧಿಕಾರಿ ವೆಂಕಟ್‍ರಾಜಾ ಕಿವಿಮಾತು ಹೇಳಿದರು.

ಇಲ್ಲಿ ಶುಕ್ರವಾರ ನಡೆದ ಸರ್ಕಾರಿ ನೌಕರರ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ‘ನಾವು ಒಳ್ಳೆಯ ಕೆಲಸ ಮಾಡುತ್ತೇವೆ. ಜನಸೇವೆ ಮೂಲಕ ಜಿಲ್ಲಾಡಳಿತಕ್ಕೆ ಗೌರವ ತರುತ್ತೇವೆ ಎಂಬ ಸಂಕಲ್ಪದೊಂದಿಗೆ ಕರ್ತವ್ಯ ನಿರ್ವಹಿಸಿರಿ. ನಿಮ್ಮೊಂದಿಗೆ ನಾನು ಸದಾ ಇರುತ್ತೇನೆ’ ಎಂದು ತಿಳಿಸಿದರು.

‘ಕೋಲಾರವು ಸೂಕ್ಷ್ಮ ಜಿಲ್ಲೆ. ಆದರೂ ಹಳೆಯ ಜಿಲ್ಲೆ. ಬಂಗಾರ ಕೊಟ್ಟ ಇಲ್ಲಿನ ನೌಕರರು ಜನಪರವಾಗಿ ಕೆಲಸ ಮಾಡುವ ಮೂಲಕ ಬಡವರಿಂದ ಗೌರವ ಪಡೆದುಕೊಳ್ಳಬೇಕು. ವೃತ್ತಿ ಗೌರವಕ್ಕೆ ದಕ್ಕೆಯಾಗದಂತೆ ಎಚ್ಚರ ವಹಿಸಿ. ಯಾವುದೇ ಒತ್ತಡಕ್ಕೆ ಮಣಿಯದೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ’ ಎಂದು ಸಲಹೆ ನೀಡಿದರು.

ADVERTISEMENT

‘ಕಾಲಮಿತಿ ಸೇವೆಯ ಮೂಲಕ ಜನರಿಗೆ ಹತ್ತಿರವಾದರೆ ಎಂತಹ ಒತ್ತಡ ಬಂದರೂ ಆತ್ಮಬಲ ಇರುತ್ತದೆ. ನೊಂದು ಬಂದವರ ನೋವು ನೀಗಿಸುವ ಕೆಲಸವನ್ನು ವೃತ್ತಿ ಜೀವನದಲ್ಲಿ ಪಾಲಿಸಿ. ನೌಕರರಿಗೆ ಹಕ್ಕು ಮತ್ತು ಕರ್ತವ್ಯಗಳು ಇವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್ ಹೇಳಿದರು.‌

‘ಸರ್ಕಾರಿ ನೌಕರರು ಸದಾ ಒತ್ತಡದಲ್ಲೇ ಕೆಲಸ ಮಾಡಬೇಕಾಗಿದೆ. ಆದರೆ, ಹೆದರಬೇಡಿ. ಸರ್ಕಾರಿ ಅಧಿಕಾರಿಗಳು ಅಥವಾ ನೌಕರರ ಮೇಲೆ ಮೇಲಾಧಿಕಾರಿಯ ಅನುಮತಿ ಇಲ್ಲದೆ ಕ್ರಿಮಿನಲ್ ಕೇಸ್ ಹಾಕುವಂತಿಲ್ಲ ಎಂಬುದನ್ನು ನನ್ನ ಪ್ರಕರಣದಲ್ಲೇ ಸುಪ್ರೀಂ ಕೋರ್ಟ್‌ ಐತಿಹಾಸಿಕ ತೀರ್ಪು ನೀಡಿದೆ’ ಎಂದರು.

ಬೆದರಿಕೆಗೆ ಹೆದರದಿರಿ: ‘ಸರ್ಕಾರಿ ನೌಕರರು ಪ್ರತಿಭಟನೆ, ತನಿಖಾ ಸಂಸ್ಥೆಗಳಿಗೆ ದೂರು ನೀಡಿಕೆ, ದಮ್ಕಿ ಇವೆಲ್ಲವನ್ನು ಮೆಟ್ಟಿ ನಿಂತು ಕೆಲಸ ಮಾಡಲೇಬೇಕಾದ ಅನಿವಾರ್ಯತೆ ಇದೆ. ಒತ್ತಡ ಅಥವಾ ಗುಂಪುಗಳ ಬೆದರಿಕೆಗೆ ಹೆದರದಿರಿ. ಕ್ಲಿಷ್ಟ ಪರಿಸ್ಥಿತಿಯಲ್ಲಿ ಪೊಲೀಸ್ ಇಲಾಖೆ ಸದಾ ನಿಮ್ಮೊಂದಿಗೆ ಇರುತ್ತದೆ. ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಜಾಮೀನುರಹಿತ ಪ್ರಕರಣ’ ಎಂದು ಹೇಳಿದರು.

‘ಸರ್ಕಾರಿ ನೌಕರರ ಸಂಘಕ್ಕೆ ಸ್ವಲ್ಪವೇ ಕಾಲಾವಕಾಶ ನೀಡಿದರೂ ಕಾರ್ಯಕ್ರಮಗಳನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸುತ್ತದೆ ಎಂಬುದನ್ನು ಸಾಕ್ಷೀಕರಿಸಿದೆ. ಜಿಲ್ಲೆಯಲ್ಲಿ ನೌಕರರಿಗೆ ಒತ್ತಡವೂ ಹೆಚ್ಚು, ಜನರ ನಿರೀಕ್ಷೆಯೂ ಹೆಚ್ಚಿದೆ. ಶೇ 100ರ ಸಾಧನೆ ಅಥವಾ ವೈಫಲ್ಯಕ್ಕೆ ನೌಕರರ ಪರಿಶ್ರಮವೇ ಆಧಾರ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯುಕೇಶ್‍ಕುಮಾರ್ ಅಭಿಪ್ರಾಯಪಟ್ಟರು.

‘ನೌಕರರ ಸಂಘ ಸದಾ ಜಿಲ್ಲಾಡಳಿತದ ಜತೆ ಇರುತ್ತದೆ. ಜಿಲ್ಲೆಯ ಅಭಿವೃದ್ಧಿಯ ಸಂಕಲ್ಪದೊಂದಿಗೆ ಕೆಲಸ ಮಾಡುತ್ತೇವೆ. ಇತಿಹಾಸದಲ್ಲೇ ಮೊದಲ ಬಾರಿಗೆ ನೌಕರರ ಕ್ರೀಡಾಕೂಟಕ್ಕೆ ಪೊಲೀಸ್ ಬ್ಯಾಂಡ್‍ಸೆಟ್ ಒದಗಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಧನ್ಯವಾದ’ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‍ಬಾಬು ಹೇಳಿದರು.

ವಿವಿಧ ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಗೆಲುವು ಸಾಧಿಸಿದ ನೌಕರರಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು. ಮಾಲೂರಿನ ರಂಗವಿಜಯ ಕಲಾ ತಂಡದ ‍ಪ್ರದರ್ಶನ ಹಾಗೂ ಬಾಲಾಜಿ ನೇತೃತ್ವದ ಡೊಳ್ಳು ಕುಣಿತವು ನೋಡುಗರ ಮನಸೂರೆಗೊಂಡಿತು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ, ಖಜಾಂಚಿ ವಿಜಯ್, ಗೌರವಾಧ್ಯಕ್ಷ ರವಿಚಂದ್ರ, ಉಪಾಧ್ಯಕ್ಷರಾದ ಅಜಯ್‍ಕುಮಾರ್, ಮುನಿಯಪ್ಪ, ಮಂಜುನಾಥ್, ನಂದೀಶ್‍ಕುಮಾರ್ ಹಾಗೂ ಪದಾಧಿಕಾರಿಗಳು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.