ADVERTISEMENT

ಶಾಲೆ ಸಬಲೀಕರಣ–ಸುಧಾರಣೆಗೆ ಒತ್ತು ನೀಡಿ: ನಾಗಾರಾಜಗೌಡ

ಶಾಲಾ ಸಿದ್ಧಿ ತರಬೇತಿ ಕಾರ್ಯಾಗಾರದಲ್ಲಿ ಬಿಇಒ ನಾಗಾರಾಜಗೌಡ ಸಲಹೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2021, 15:52 IST
Last Updated 9 ಏಪ್ರಿಲ್ 2021, 15:52 IST

ಕೋಲಾರ: ‘ಶಾಲಾ ಸಿದ್ಧಿ ಕಾರ್ಯಕ್ರಮದಿಂದ ಸಹಭಾಗಿ ಸಂಸ್ಕೃತಿ ಬೆಳೆಸುವ ಮೂಲಕ ಶಾಲೆಗಳ ಸಬಲೀಕರಣಕ್ಕೆ ಮತ್ತು ಸುಧಾರಣೆಗೆ ಒತ್ತು ನೀಡಿ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ಸಲಹೆ ನೀಡಿದರು.

ಶಾಲಾ ಸಿದ್ಧಿ ಕಾರ್ಯಕ್ರಮ ಕುರಿತು ತಾಲ್ಲೂಕಿನ ಪ್ರೌಢ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ‘ಶಾಲೆಗಳ ಮೌಲ್ಯಮಾಪನವನ್ನು ಸಾಧನವಾಗಿ ಪರಿಗಣಿಸಿ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತರುವುದು ಈ ಕಾರ್ಯಕ್ರಮದ ಉದ್ದೇಶ’ ಎಂದರು.

‘ಸಮಗ್ರ ಶಿಕ್ಷಣ ಕರ್ನಾಟಕ, ಪದವಿ ಪೂರ್ವ ಶಿಕ್ಷಣ ಇಲಾಖೆ, ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ ವತಿಯಿಂದ ಶಾಲಾ ಕಾಲೇಜುಗಳ ಮೌಲ್ಯಮಾಪನಕ್ಕಾಗಿ ರಾಷ್ಟ್ರೀಯ ಶೈಕ್ಷಣಿಕ ಯೋಜನೆ ಮತ್ತು ಆಡಳಿತ ಸಂಸ್ಥೆ ಮಾರ್ಗದರ್ಶನದಲ್ಲಿ ಶಾಲಾ ಸಿದ್ಧಿ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತದೆ’ ಎಂದು ವಿವರಿಸಿದರು.

ADVERTISEMENT

‘ಶಾಲೆಗಳಲ್ಲಿನ ವಿಶೇಷ ಸಾಮರ್ಥ್ಯ ಮತ್ತು ಅಭಿವೃದ್ಧಿಯಾಗದ ಕ್ಷೇತ್ರಗಳನ್ನು ಗುರುತಿಸುವ ಕಾರ್ಯ ನಡೆಯಲಿದೆ. ಯೋಜಿತ ಕಾರ್ಯಕ್ರಮಗಳ ಮೂಲಕ ಶಾಲೆಗಳ ಸಬಲೀಕರಣ, ಸಮಗ್ರ ಸುಧಾರಣೆಗಾಗಿ ಸಮುದಾಯದ ಸಹಭಾಗಿತ್ವ ಸಂಸ್ಕೃತಿ ಬೆಳೆಸುವುದು, ಶಾಲೆಗಳ ಸಮಸ್ಯೆಗಳನ್ನು ಗುರುತಿಸಿ ಹಂತ ಹಂತವಾಗಿ ಪ್ರಗತಿ ಸಾಧಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ಸ್ವಯಂ ಮತ್ತು ಬಾಹ್ಯ ರೀತಿಯ ಮೌಲ್ಯಮಾಪನ ನಡೆಯಲಿದೆ. ಶಾಲೆಗಳಲ್ಲಿ ಏನಿದೆ, ಏನು ಸಮಸ್ಯೆಗಳಿವೆ ಎಂಬುದನ್ನು 7 ಕಾರ್ಯಕ್ಷೇತ್ರಗಳ ಅಡಿ ಗುರುತಿಸಿ ನಂತರ ಅಗತ್ಯ ಅಂಶಗಳ ಅನುಷ್ಠಾನಕ್ಕೆ ಕ್ರಿಯಾಯೋಜನೆ ರೂಪಿಸಲಾಗುತ್ತದೆ’ ಎಂದು ತಿಳಿಸಿದರು.

ಶಾಲೆ ಸುಂದರಗೊಳಿಸಿ: ‘ಶಾಲೆಗಳಲ್ಲಿ ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಯ ಜತೆಗೆ ಇಡೀ ಶಾಲಾ ಆವರಣ ಸುಂದರಗೊಳಿಸಬೇಕು. ಶಾಲೆಗಳ ಸುಂದರ ಪರಿಸರಕ್ಕಾಗಿ ಗಿಡ ಮರ ಬೆಳೆಸಬೇಕು ಮತ್ತು ಗಿಡಗಳಿಗೆ ಪಾತಿ ಮಾಡಿ ಗೊಬ್ಬರ ಹಾಕಿಸಬೇಕು. ಈ ಕಾರ್ಯಕ್ಕೆ ಎಸ್‌ಡಿಎಂಸಿಯಲ್ಲಿನ ಹಣ ಬಳಸಿಕೊಳ್ಳಲ ಸಮಿತಿಯ ಅನುಮತಿ ಪಡೆಯಿಸಿ’ ಎಂದು ಸೂಚನೆ ನೀಡಿದರು.

‘ಶಾಲೆಗಳಲ್ಲಿ ಉತ್ತಮ ಚಿತ್ರಣ ಮತ್ತು ವಸ್ತುಸ್ಥಿತಿ ರೂಪಿಸಲು ಶಾಲಾ ಸಿದ್ಧಿ ಪೋರ್ಟಲ್ ಅತ್ಯುತ್ತಮ ವೇದಿಕೆಯಾಗಿದೆ’ ಎಂದು ಮುಖ್ಯ ಶಿಕ್ಷಕರು ಅಭಿಪ್ರಾಯಪಟ್ಟರು. ಬಿಆರ್‌ಸಿ ರಾಮಕೃಷ್ಣಪ್ಪ, ಮುಖ್ಯ ಶಿಕ್ಷಕ ಸಿ.ಎನ್.ಪ್ರದೀಪ್‌ಕುಮಾರ್, ಇಸಿಒ ಆರ್.ಶ್ರೀನಿವಾಸನ್ ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.