ಕೋಲಾರ: ‘ಪೋಷಕರ ಆಶಯಕ್ಕೆ ತಕ್ಕಂತೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಜಿಲ್ಲೆಯ 24 ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭವಾಗುತ್ತಿದ್ದು, ಮಕ್ಕಳ ದಾಖಲಾತಿ ಹೆಚ್ಚಿಸಲು ಶಿಕ್ಷಕರು ಬದ್ಧತೆಯಿಂದ ಕಾರ್ಯ ನಿರ್ವಹಿಸಬೇಕು’ ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಪ್ರಾಂಶುಪಾಲ ವಿಕ್ಟರ್ ಹೇಳಿದರು.
ಆಂಗ್ಲ ಮಾಧ್ಯಮ ಶಿಕ್ಷಣ ಆರಂಭವಾಗುತ್ತಿರುವ ಶಾಲೆಗಳ ಶಿಕ್ಷಕರಿಗೆ ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ‘ಸರ್ಕಾರವು ಸಮಾನ ಶಿಕ್ಷಣದ ಧ್ಯೇಯದೊಂದಿಗೆ ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಮಾತೃ ಭಾಷೆಗೆ ಧಕ್ಕೆಯಾಗದಂತೆ ಆಂಗ್ಲ ಮಾಧ್ಯಮದ ಶಿಕ್ಷಣಕ್ಕೆ ಅವಕಾಶ ನೀಡಲು ಮುಂದಾಗಿದೆ’ ಎಂದರು.
‘ಮೊದಲ ಹಂತದಲ್ಲಿ ಜಿಲ್ಲೆಯ 24 ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತೆರೆಯಲು ಅನುಮತಿ ನೀಡಲಾಗಿದೆ. ಈ ಶಾಲೆಗಳು ಮಾದರಿ ಶಾಲೆಗಳಾಗಿ ಮಕ್ಕಳ ದಾಖಲಾತಿ ಹೆಚ್ಚಳದೊಂದಿಗೆ ಪರೀಕ್ಷಾ ಫಲಿತಾಂಶದಲ್ಲಿ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯಬೇಕು’ ಎಂದು ಸಲಹೆ ನೀಡಿದರು.
‘ಈಗಾಗಲೇ ನವೋದಯ, ಅದರ್ಶ, ಮೊರಾರ್ಜಿ ದೇಸಾಯಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಸಿಗುತ್ತಿದೆ. ಈ ಶಾಲೆಗಳು 6ನೇ ತರಗತಿಯಿಂದ ಆರಂಭಗೊಳ್ಳುತ್ತವೆ. ಇದೀಗ ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿಯಿಂದಲೇ ಆಂಗ್ಲ ಮಾಧ್ಯಮ ತರಗತಿ ಆರಂಭಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆ’ ಎಂದು ಅಭಿಪ್ರಾಯಪಟ್ಟರು.
ಆತಂಕ ದೂರ ಮಾಡಿ: ‘ಶಿಕ್ಷಕರು ತರಬೇತಿಯಲ್ಲಿನ ಗೊಂದಲ ಪರಿಹರಿಸಿಕೊಂಡು ಆಂಗ್ಲ ಮಾಧ್ಯಮದಲ್ಲಿ ಪರಿಣಾಮಕಾರಿಯಾಗಿ ಪಠ್ಯ ಬೋಧಿಸುವ ಸಾಮರ್ಥ್ಯ ಪಡೆದುಕೊಳ್ಳಬೇಕು. ಕಲಿಕಾ ತಂತ್ರ ಬಳಸಿಕೊಂಡು ಬೋಧನೆ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು’ ಎಂದು ಕಿವಿಮಾತು ಹೇಳಿದರು.
‘ಖಾಸಗಿ ಶಾಲೆಗಳ ಪೈಪೋಟಿಯಲ್ಲಿ ಸರ್ಕಾರಿ ಶಾಲೆಗಳಿಗೆ ಉಳಿಗಾಲವಿಲ್ಲ ಎಂಬ ಆತಂಕವಿದೆ. ಈ ಆತಂಕ ದೂರ ಮಾಡಿ. ಸರ್ಕಾರಿ ಶಾಲೆಗಳಲ್ಲೂ ಪೋಷಕರ ಆಶಯಕ್ಕೆ ತಕ್ಕಂತೆ ಬೋಧನೆ ಸಿಕ್ಕರೆ ಅವರೇ ನಮ್ಮತ್ತ ಬರುತ್ತಾರೆ’ ಎಂದು ತಿಳಿಸಿದರು.
ಸರ್ಕಾರಿ ಶಾಲೆ ಉಳಿಸಿ: ‘ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸುವುದು ಶಿಕ್ಷಕರ ಜವಾಬ್ದಾರಿ. ಸರ್ಕಾರಿ ಶಾಲೆಗಳನ್ನು ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ. ಸರ್ಕಾರಿ ಶಾಲೆ ಮುಚ್ಚಿದರೆ ಸಮಾಜದಲ್ಲಿ ಸಮಾನ ಶಿಕ್ಷಣಕ್ಕೆ ಬೆಲೆ ಇಲ್ಲವಾಗುತ್ತದೆ’ ಎಂದು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ವಿ.ಜಗನ್ನಾಥ್ ಹೇಳಿದರು.
‘ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ದಿಗೆ ಸರ್ಕಾರದ ಅನುದಾನದ ಜತೆಗೆ ದಾನಿಗಳು, ಕಾರ್ಪೊರೇಟ್ ಕಂಪನಿಗಳ ಸಹಕಾರ ಪಡೆಯಬೇಕು. ಖಾಸಗಿ ಶಾಲೆಯಲ್ಲಿ ಸಿಗುವ ಎಲ್ಲಾ ಸೌಲಭ್ಯಗಳು ಸರ್ಕಾರಿ ಶಾಲೆಯಲ್ಲೂ ಸಿಗುವಂತೆ ಮಾಡಿ ಪೋಷಕರ ಮನವೊಲಿಸಿ ಮಕ್ಕಳ ದಾಖಲಾತಿ ಹೆಚ್ಚಿಸಬೇಕು’ ಎಂದು ಶಿಕ್ಷಣ ಸಂಯೋಜಕ ಆರ್.ಶ್ರೀನಿವಾಸನ್ ಸಲಹೆ ನೀಡಿದರು.
ಡಯಟ್ ಉಪನ್ಯಾಸಕರಾದ ನಾಗವೇಣಿ, ಸದಾನಂದಮೂರ್ತಿ, ಸೈಯದ್ ಸಮೀವುಲ್ಲಾ, ಸಂಪನ್ಮೂಲ ವ್ಯಕ್ತಿಗಳಾದ ಅನುಪಮಾ, ಸೋಫಿಯಾ, ವಿ.ಸುಬ್ರಮಣಿ, ಬೈರೇಗೌಡ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.