ADVERTISEMENT

ಅಭಿವೃದ್ಧಿ ನೆಪದಲ್ಲಿ ಪರಿಸರ ಹಾಳು

ವಿಎಸ್‌ಟಿ ಪ್ರತಿಷ್ಠಾನದ ಸದಸ್ಯ ಶಿವು ಕಳವಳ

​ಪ್ರಜಾವಾಣಿ ವಾರ್ತೆ
Published 16 ಜುಲೈ 2020, 17:21 IST
Last Updated 16 ಜುಲೈ 2020, 17:21 IST
ವಿಎಸ್‌ಟಿ ಪ್ರತಿಷ್ಠಾನದ ಸದಸ್ಯರು ಕೋಲಾರದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಿದರು.
ವಿಎಸ್‌ಟಿ ಪ್ರತಿಷ್ಠಾನದ ಸದಸ್ಯರು ಕೋಲಾರದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಿದರು.   

ಕೋಲಾರ: ‘ಅಭಿವೃದ್ಧಿ ಹಾಗೂ ಕೈಗಾರಿಕೀಕರಣದ ನೆಪದಲ್ಲಿ ಪರಿಸರ ಹಾಳು ಮಾಡುತ್ತಿದ್ದೇವೆ. ಇದರಿಂದ ಭವಿಷ್ಯದಲ್ಲಿ ಮನುಕುಲಕ್ಕೆ ಕಂಟಕ ಎದುರಾಗುತ್ತದೆ’ ಎಂದು ವಿಎಸ್‌ಟಿ ಪ್ರತಿಷ್ಠಾನದ ಸದಸ್ಯ ಶಿವು ಕಳವಳ ವ್ಯಕ್ತಪಡಿಸಿದರು.

ಸ್ಕೌಟ್ಸ್‌ ಮತ್ತು ಗೈಡ್ಸ್‌, ಅರಣ್ಯ ಇಲಾಖೆ ಹಾಗೂ ಪ್ರತಿಷ್ಠಾನದ ವತಿಯಿಂದ ಇಲ್ಲಿನ ದೋಬಿ ಘಾಟ್‌ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ‘ಇತ್ತೀಚಿನ ವರ್ಷಗಳಲ್ಲಿ ಮನುಷ್ಯನ ದುರಾಸೆಗೆ ಪರಿಸರ ನಾಶವಾಗಿದ್ದು, ಅನೇಕ ಸಮಸ್ಯೆ ಎದುರಾಗಿವೆ. ಪರಿಸರ ಉಳಿದರೆ ಮಾತ್ರ ಮನುಕುಲ ಉಳಿಯುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಭೂಮಿ ಸರ್ವ ಜೀವಿಗಳ ಮನೆ. ಕೇವಲ ಮಾನವನ ಆಸ್ತಿಯಲ್ಲ. ಮನುಷ್ಯನ ಸ್ವಾರ್ಥಕ್ಕಾಗಿ ಭೂಮಿ ಕಲುಷಿತ ಮಾಡುತ್ತಾ ಹೋದರೆ ಭವಿಷ್ಯ ಸಂಪೂರ್ಣವಾಗಿ ವಿಷಮಯವಾಗುತ್ತದೆ. ನೈಸರ್ಗಿಕ ಸಂಪನ್ಮೂಲಗಳ ನಾಶ ಹಾಗೂ ಅತಿಯಾದ ಮಾಲಿನ್ಯ ಪ್ರಭಾವದಿಂದಾಗಿ ಭೂಮಿಯಲ್ಲಿ ತಾಪಮಾನ ಏರಿಕೆಯಾಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

‘ಇಂದಿನ ವೈಜ್ಞಾನಿಕ ಯುಗದಲ್ಲಿ ಪ್ರತಿನಿತ್ಯ ಪರಿಸರ ನಾಶವಾಗುತ್ತಿರುವುದನ್ನು ಕಂಡು ನಗರವಾಸಿಗಳು ಗ್ರಾಮೀಣ ಭಾಗದತ್ತ ವಲಸೆ ಬರುತ್ತಿದ್ದಾರೆ. ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚುತ್ತಿರುವುದರಿದ ವಾಯು ಮಾಲಿನ್ಯವಾಗಿ ಜನ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಜತೆಗೆ ಪರಿಸರವೂ ನಾಶವಾಗುತ್ತಿದೆ’ ಎಂದು ಹೇಳಿದರು.

ಪರಿಸರ ಸಮತೋಲನ: ‘ಭೂಮಿಯ ಮೇಲೆ ಸಕಲ ಜೀವ ರಾಶಿಗಳಿಗೆ ಬದುಕುವ ಹಕ್ಕಿದೆ. ಆದರೆ, ಮಾನವನ ದುರಾಸೆಯಿಂದ ಗಿಡ ಮರ ನಾಶವಾಗುತ್ತಿವೆ. ಗಿಡ ಮರ ಬೆಳೆಸುವ ಮೂಲಕ ಪರಿಸರ ಸಮತೋಲನ ಕಾಪಾಡಲು ಮುಂದಾಗಬೇಕು. ಪ್ಲಾಸ್ಟಿಕ್‌ ಬಳಕೆ ನಿರ್ಬಂಧ ಕಾರ್ಯಗತಗೊಳಿಸುವುದು ಪ್ರತಿಯೊಬ್ಬರ ಜವಾಬ್ದಾರಿ’ ಎಂದು ಸ್ಕೌಟ್ಸ್ ಮತ್ತು ಗೈಡ್ಸ್‌ ಜಿಲ್ಲಾ ಸಂಘಟನಾ ಆಯುಕ್ತ ವಿ.ಬಾಬು ಕಿವಿಮಾತು ಹೇಳಿದರು.

‘ಅರಣ್ಯದಲ್ಲಿನ ಮರಗಳ ನಾಶದಿಂದ ಹಸಿರು ಮನೆ ಪರಿಣಾಮ ಎದುರಾಗಿದೆ. ಮತ್ತೊಂದೆಡೆ ಅನಾವೃಷ್ಟಿ ಸಮಸ್ಯೆ ಎದುರಾಗಿದೆ. ಅರಣ್ಯ ನಾಶದಿಂದ ಮಳೆ ಪ್ರಮಾಣ ಕಡಿಮೆಯಾಗಿ ಕೆರೆ ಕುಂಟೆಗಳಲ್ಲಿ ಜೀವಸೆಲೆ ಬತ್ತಿದೆ. ಜನ ಹಾಗೂ ಜಾನುವಾರು ನೀರಿಗೆ ಪರಿತಪಿಸುವ ಪರಿಸ್ಥಿತಿ ಇದೆ. ಹಸಿರು ಕ್ರಾಂತಿ ಆಗದಿದ್ದರೆ ಭವಿಷ್ಯದಲ್ಲಿ ಮನಕುಲ ತೀವ್ರ ಸಂಕಷ್ಟ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಕೈಜೋಡಿಸಬೇಕು: ‘ಮಳೆ ಬೆಳೆ ಇಲ್ಲದೆ ರೈತರು ಕೃಷಿ ಚಟುವಟಿಕೆಗಳಿಂದ ದೂರ ಸರಿಯುತ್ತಿದ್ದಾರೆ. ಭೂಗಳ್ಳರು ಅರಣ್ಯ ಪ್ರದೇಶ ಅತಿಕ್ರಮಿಸಿಕೊಳ್ಳುತ್ತಿದ್ದಾರೆ. ಸಸಿ ನೆಡುವ ಕಾರ್ಯವು ದೊಡ್ಡ ಜನಾಂದೋಲನದ ಮಾದರಿಯಲ್ಲಿ ನಡೆಯಬೇಕು. ಇದಕ್ಕೆ ಸಂಘ ಸಂಸ್ಥೆಗಳು, ಸಾರ್ವಜನಿಕರು ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

ಪ್ರತಿಷ್ಠಾನದ ರಾಜ್ಯ ಘಟಕದ ಕಾರ್ಯದರ್ಶಿ ಸುರೇಂದ್ರಬಾಬು, ಸಂಘಟನಾ ಕಾರ್ಯದರ್ಶಿ ಅನುಷಾ, ನಿರ್ದೇಶಕರಾದ ,ಮಹೇಂದ್ರ, ಸಂದೀಪ್, ದಿವಾಕರ್,ಲಕ್ಷ್ಮೀ, ಸುಜಾತಾ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.