ADVERTISEMENT

ಸರ್ಕಾರದಿಂದ ಜಮೀನು ಮಂಜೂರು: ತೋಟಗಾರಿಕೆ ಸಚಿವ ಶಂಕರ್‌ ಭರವಸೆ

ಮಾವು ಸಂಸ್ಕರಣಾ ಘಟಕ: ಶೈತ್ಯಾಗಾರ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2021, 13:39 IST
Last Updated 15 ಜೂನ್ 2021, 13:39 IST
ತೋಟಗಾರಿಕೆ ಸಚಿವ ಆರ್‌.ಶಂಕರ್‌ ಶ್ರೀನಿವಾಸಪುರ ತಾಲ್ಲೂಕಿನ ಹೊಗಳಗೆರೆಯ ಮಾವು ಉತ್ಕೃಷ್ಟ ಮತ್ತು ಅಭಿವೃದ್ಧಿ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ಮಾಡಿದರು
ತೋಟಗಾರಿಕೆ ಸಚಿವ ಆರ್‌.ಶಂಕರ್‌ ಶ್ರೀನಿವಾಸಪುರ ತಾಲ್ಲೂಕಿನ ಹೊಗಳಗೆರೆಯ ಮಾವು ಉತ್ಕೃಷ್ಟ ಮತ್ತು ಅಭಿವೃದ್ಧಿ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ಮಾಡಿದರು   

ಕೋಲಾರ: ‘ಜಿಲ್ಲೆಯ ಮಾವು ಬೆಳೆಗಾರರಿಗೆ ಬೆಲೆ ನಷ್ಟ ಆಗದಂತೆ ಸರ್ಕಾರದಿಂದ ಶೇ 50ರ ಅನುದಾನದೊಂದಿಗೆ ಸ್ಥಳೀಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಾವು ಸಂಸ್ಕರಣಾ ಘಟಕ ಮತ್ತು ಶೈತ್ಯಾಗಾರ ಸ್ಥಾಪಿಸಲಾಗುತ್ತದೆ’ ಎಂದು ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಸಚಿವ ಆರ್‌.ಶಂಕರ್‌ ಭರವಸೆ ನೀಡಿದರು.

ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಸನ್‌ಸಿಪ್ ಮಾವು ಸಂಸ್ಕರಣಾ ಘಟಕಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿ, ‘ಜಿಲ್ಲೆಯು ರಾಜ್ಯದಲ್ಲಿ ಅತಿ ಹೆಚ್ಚು ಮಾವು ಬೆಳೆಯುವ ಜಿಲ್ಲೆಗಳ ಪೈಕಿ ಮೊದಲ ಸ್ಥಾನದಲ್ಲಿದೆ. ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಅತಿ ಹೆಚ್ಚು ಮಾವು ಬೆಳೆಗಾರರಿದ್ದಾರೆ’ ಎಂದರು.

‘ಜಿಲ್ಲೆಯಲ್ಲಿ ಮಾವು ಸಂಸ್ಕರಣಾ ಘಟಕ ಮತ್ತು ಶೈತ್ಯಾಗಾರಗಳು ಆರಂಭವಾದರೆ ಬೆಲೆ ಕುಸಿತದ ಸಂದರ್ಭದಲ್ಲಿ ಮಾವನ್ನು ಕೆಡದಂತೆ ದೀರ್ಘ ಕಾಲದವರೆಗೆ ದಾಸ್ತಾನು ಮಾಡಬಹುದು. ಜತೆಗೆ ಮಾವಿನ ಮೌಲ್ಯವರ್ಧಿತ ಉತ್ಪನ್ನಗಳನ್ನು ಉತ್ಪಾದಿಸಿ ರೈತರು ಹೆಚ್ಚಿನ ಲಾಭ ಗಳಿಸಬಹುದು. ಬೆಲೆ ಕುಸಿತದ ಸಂಕಷ್ಟದ ಪಾರಾಗಲು ಮಾವು ಸಂಸ್ಕರಣಾ ಘಟಕ ಮತ್ತು ಶೈತ್ಯಾಗಾರಗಳು ರೈತರಿಗೆ ಸಹಕಾರಿಯಾಗಿವೆ’ ಎಂದು ಅಭಿಪ್ರಾಯಪಟ್ಟರು.

‘ಈ ವರ್ಷ ಕೋವಿಡ್‌ ಮತ್ತು ಲಾಕ್‌ಡೌನ್‌ ಸಂಕಷ್ಟದಿಂದ ಮಾವು ಬೆಲೆ ಕುಸಿದಿದೆ. ವಿಶೇಷವಾಗಿ ತೋತಾಪುರಿ ಮಾವಿನ ಕಾಯಿಗೆ ಸೂಕ್ತ ಬೆಲೆ ಸಿಗದೆ ರೈತರಿಗೆ ತೊಂದರೆಯಾಗಿದೆ. ಕೋವಿಡ್‌ ಕಾರಣಕ್ಕೆ ಹೊರ ರಾಜ್ಯ ಮತ್ತು ವಿದೇಶಕ್ಕೆ ಮಾವು ರಫ್ತಾಗುತ್ತಿಲ್ಲ. ಇದರಿಂದ ಮಾವಿನ ಹಣ್ಣಿಗೆ ಹೆಚ್ಚಿನ ಬೇಡಿಕೆ ಇಲ್ಲವಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಶ್ರೀನಿವಾಸಪುರ ತಾಲ್ಲೂಕಿನ ಸಾವಿರಾರು ರೈತರು ಸೇರಿ ಮಾವು ಮೌಲ್ಯವರ್ಧಿತ ಉತ್ಪನ್ನ ಸಂಸ್ಥೆ ಸ್ಥಾಪಿಸಿದ್ದಾರೆ. ಈ ಸಂಸ್ಥೆ ಮೂಲಕ ಸರ್ಕಾರದ ಸೌಲಭ್ಯಗಳನ್ನು ರೈತರು ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸಂಸ್ಥೆಯವರಿಗೆ ಮಾವು ಸಂಸ್ಕರಣಾ ಘಟಕ ಸ್ಥಾಪಿಸಲು ಅಗತ್ಯವಿರುವ ಜಮೀನನ್ನು ಸರ್ಕಾರದಿಂದ ಮಂಜೂರು ಮಾಡಿಸುತ್ತೇವೆ. ಈ ಸಂಸ್ಥೆಯಿಂದ ಸ್ಥಳೀಯ ಸ್ಥಳೀಯವಾಗಿ ಬೆಳೆದ ಮಾವನ್ನು ರೈತರೇ ಸಂಸ್ಕರಣೆ ಮಾಡಿ ಮಾರಾಟ ಮಾಡಬಹುದು’ ಎಂದು ತಿಳಿಸಿದರು.

ಶೇ 90 ಸಬ್ಸಿಡಿ: ‘ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ 1,800 ಅಡಿ ಆಳಕ್ಕೆ ಕುಸಿದಿರುವುದರಿಂದ ರೈತರಿಗೆ ಕೃಷಿ ನಿರ್ವಹಣೆಯು ದೊಡ್ಡ ಸವಾಲಾಗಿದೆ. ಮತ್ತೊಂದೆಡೆ ಕೊಳವೆ ಬಾವಿಗಳಲ್ಲಿ ಜೀವಸೆಲೆ ಬತ್ತುತ್ತಿದೆ. ನೀರಿನ ಸಮಸ್ಯೆಯ ಕಾರಣಕ್ಕೆ ಸಾಕಷ್ಟು ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯನ್ನು ವಿಶೇಷ ಪ್ರಕರಣವಾಗಿ ಪರಿಗಣಿಸಿ ಹನಿ ನೀರಾವರಿ ಪದ್ಧತಿ ಅಳವಡಿಕೆಗೆ ಶೇ 90ರಷ್ಟು ಸಬ್ಸಿಡಿ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ’ ಎಂದು ವಿವರಿಸಿದರು.

ಯದರೂರು ಗ್ರಾಮದ ರೈತರೊಬ್ಬರ ಪಾಲಿಹೌಸ್‌ ಮತ್ತು ಸಮುದಾಯ ಕೃಷಿ ಹೊಂಡ, ಹೊಸಹಳ್ಳಿಯಲ್ಲಿರುವ ಮಾವು ಮಾಗಿಸುವ ಘಟಕ, ಹೊಗಳಗೆರೆಯ ಮಾವು ಉತ್ಕೃಷ್ಟ ಮತ್ತು ಅಭಿವೃದ್ಧಿ ಕೇಂದ್ರಕ್ಕೆ ಸಚಿವರು ಭೇಟಿ ನೀಡಿದರು. ಕೋವಿಡ್‌ ಮತ್ತು ಲಾಕ್‌ಡೌನ್‌ ಬೆಳೆ ನಷ್ಟ ಅನುಭವಿಸಿ ಪರಿಹಾರ ಪಡೆದ ಕೊಳತ್ತೂರಿನ ರೈತರೊಂದಿಗೆ ಚರ್ಚೆ ನಡೆಸಿದರು.

ರಾಜ್ಯ ಮಾವು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜ್, ವ್ಯವಸ್ಥಾಪಕ ನಿರ್ದೇಶಕ ನಾಗರಾಜ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ (ಹನಿ ನೀರಾವರಿ) ಕದಿರೇಗೌಡ, ಬೆಂಗಳೂರು ವಿಭಾಗೀಯ ತೋಟಗಾರಿಕೆ ಜಂಟಿ ನಿರ್ದೇಶಕ ಎಂ.ವಿಶ್ವನಾಥ್, ರೇಷ್ಮೆ ಇಲಾಖೆ ಹೆಚ್ಚುವರಿ ನಿರ್ದೇಶಕ ಬಿ.ಆರ್.ನಾಗಭೂಷಣ್, ಬೆಂಗಳೂರು ವಿಭಾಗೀಯ ರೇಷ್ಮೆ ಜಂಟಿ ನಿರ್ದೇಶಕ ಟಿ.ಎಚ್.ಬೈರಪ್ಪ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಗಾಯತ್ರಿ, ಶ್ರೀನಿವಾಸಪುರ ತಹಶೀಲ್ದಾರ್‌ ಎಸ್.ಎನ್.ಶ್ರೀನಿವಾಸ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.