ADVERTISEMENT

ನಕಲಿ ಬಿತ್ತನೆ ಬೀಜ ಮಾರಾಟ: ಪ್ರತಿಭಟನೆ

ಬಹುರಾಷ್ಟ್ರೀಯ ಕಂಪನಿಗಳಿಂದ ರೈತರಿಗೆ ವಂಚನೆ: ರೈತ ಸಂಘ ಸದಸ್ಯರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2021, 16:16 IST
Last Updated 14 ಆಗಸ್ಟ್ 2021, 16:16 IST
ನಕಲಿ ಟೊಮೆಟೊ ಬಿತ್ತನೆ ಬೀಜ ಮಾರಾಟ ಮಾಡಿ ರೈತರಿಗೆ ನಷ್ಟ ಉಂಟು ಮಾಡಿರುವ ಇಂಡೋ ಅಮೆರಿಕನ್ ಕಂಪನಿಯನ್ನು ರಾಜ್ಯದಿಂದ ಬಹಿಷ್ಕರಿಸುವಂತೆ ಒತ್ತಾಯಿಸಿ ಸಾಮೂಹಿಕ ನಾಯಕತ್ವ ರೈತ ಸಂಘದ ಸದಸ್ಯರು ಕೋಲಾರದಲ್ಲಿ ಶನಿವಾರ ಪ್ರತಿಭಟನೆ ಮಾಡಿದರು
ನಕಲಿ ಟೊಮೆಟೊ ಬಿತ್ತನೆ ಬೀಜ ಮಾರಾಟ ಮಾಡಿ ರೈತರಿಗೆ ನಷ್ಟ ಉಂಟು ಮಾಡಿರುವ ಇಂಡೋ ಅಮೆರಿಕನ್ ಕಂಪನಿಯನ್ನು ರಾಜ್ಯದಿಂದ ಬಹಿಷ್ಕರಿಸುವಂತೆ ಒತ್ತಾಯಿಸಿ ಸಾಮೂಹಿಕ ನಾಯಕತ್ವ ರೈತ ಸಂಘದ ಸದಸ್ಯರು ಕೋಲಾರದಲ್ಲಿ ಶನಿವಾರ ಪ್ರತಿಭಟನೆ ಮಾಡಿದರು   

ಕೋಲಾರ: ನಕಲಿ ಟೊಮೆಟೊ ಬಿತ್ತನೆ ಬೀಜ ಮಾರಾಟ ಮಾಡಿ ಜಿಲ್ಲೆಯ ರೈತರಿಗೆ ನಷ್ಟ ಉಂಟು ಮಾಡಿರುವ ಇಂಡೋ ಅಮೆರಿಕನ್ ಕಂಪನಿಯನ್ನು ರಾಜ್ಯದಿಂದ ಬಹಿಷ್ಕರಿಸುವಂತೆ ಒತ್ತಾಯಿಸಿ ಸಾಮೂಹಿಕ ನಾಯಕತ್ವ ರೈತ ಸಂಘದ ಸದಸ್ಯರು ಇಲ್ಲಿ ಶನಿವಾರ ಪ್ರತಿಭಟನೆ ಮಾಡಿದರು.

ಪ್ರತಿಭಟನಾಕಾರರು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ವೃತ್ತದಲ್ಲಿ ಇಂಡೋ ಅಮೆರಿಕನ್ ಕಂಪನಿಯ ಟೊಮೆಟೊ ಬಿತ್ತನೆ ಬೀಜದ ಪ್ಯಾಕೆಟ್‌ಗಳನ್ನು ಸುಟ್ಟು ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ದೇಶಕ್ಕೆ ಸ್ವಾತಂತ್ರ್ಯ ಬಂದು 7 ದಶಕ ಕಳೆದರೂ ರೈತರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಬಹುರಾಷ್ಟ್ರೀಯ ಕಂಪನಿಗಳ ಕೈಗೊಂಬೆಯಾಗಿರುವ ಸರ್ಕಾರಗಳು ಕೃಷಿ ಕ್ಷೇತ್ರ ಸರ್ವನಾಶ ಮಾಡಿ ರೈತರನ್ನು ಬೀದಿಪಾಲು ಮಾಡುತ್ತಿವೆ. ಆಳುವ ಸರ್ಕಾರಗಳಿಗೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ’ ಎಂದು ರೈತ ಸಂಘ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಆರೋಪಿಸಿದರು.

ADVERTISEMENT

‘ಪ್ರಾಕೃತಿಕ ವಿಕೋಪ, ಬೆಲೆ ಕುಸಿತದಿಂದ ರೈತರು ತತ್ತರಿಸಿದ್ದಾರೆ. ಮತ್ತೊಂದೆಡೆ ಕೋವಿಡ್‌ ಮತ್ತು ಲಾಕ್‌ಡೌನ್‌ ರೈತರಿಗೆ ಆರ್ಥಿಕವಾಗಿ ದೊಡ್ಡ ಪೆಟ್ಟು ಕೊಟ್ಟಿದೆ. ಬಡ್ಡಿ ಸಾಲ ಮಾಡಿ ಬೆಳೆ ಬೆಳೆದ ರೈತರು ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಸೃಷ್ಟಿಯಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬಹುರಾಷ್ಟ್ರೀಯ ಕಂಪನಿಗಳು ರೈತರಿಗೆ ನಕಲಿ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಮಾರಾಟ ಮಾಡಿ ವಂಚಿಸುತ್ತಿವೆ’ ಎಂದು ದೂರಿದರು.

ಕಂಪನಿ ಹಿಂದೇಟು: ‘ಇಂಡೋ ಅಮೆರಿಕನ್ ಕಂಪನಿಯ 1320 ತಳಿ ಬಿತ್ತನೆ ಬೀಜದ ಗುಣಮಟ್ಟ ಕಳಪೆಯಾಗಿದೆ. ಜಿಲ್ಲೆಯ ರೈತರು ಈ ತಳಿಯ ಬಿತ್ತನೆ ಬೀಜ ಖರೀದಿಸಿ ವಂಚನೆಗೆ ಒಳಗಾಗಿದ್ದಾರೆ. 1320 ತಳಿಯ ಟೊಮೆಟೊ ಬೆಳೆ ಸಂಪೂರ್ಣ ನಾಶವಾಗಿದೆ. ಬೆಳೆ ಕಳೆದುಕೊಂಡಿರುವ ರೈತರಿಗೆ ದಿಕ್ಕು ತೋಚದಂತಾಗಿದ್ದು, ಬೆಳೆ ಪರಿಹಾರ ಕೊಡಲು ಕಂಪನಿ ಹಿಂದೇಟು ಹಾಕುತ್ತಿದೆ’ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

‘ನಕಲಿ ಬಿತ್ತನೆ ಬೀಜ ಮತ್ತು ಗೊಬ್ಬರ ಮಾರಾಟ ದಂದೆಗೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕಡಿವಾಣ ಹಾಕಬೇಕು. ಆದರೆ, ಅಧಿಕಾರಿಗಳೇ ಈ ದಂದೆಕೋರರ ಜತೆ ಕೈಜೋಡಿಸಿದ್ದಾರೆ. ಜಿಲ್ಲೆಯಲ್ಲಿ ನಕಲಿ ಬಿತ್ತನೆ ಬೀಜ ಮಾರಾಟ ಜಾಲ ಸಕ್ರಿಯವಾಗಿದ್ದು, ರೈತರ ಸಮಸ್ಯೆ ಕೇಳುವವರಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ರೈತರನ್ನು ವಂಚಿಸಿರುವ ಇಂಡೋ ಅಮೆರಿಕನ್ ಕಂಪನಿ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು. ಬೆಳೆ ಕಳೆದುಕೊಂಡಿರುವ ರೈತರಿಗೆ ಜಿಲ್ಲಾಡಳಿತ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್‌, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿಗೌಡ, ತಾಲ್ಲೂಕು ಘಟಕದ ಅಧ್ಯಕ್ಷ ಇ.ಮಂಜುನಾಥ್‌, ಸದಸ್ಯರಾದ ನಾಗೇಶ್, ತಿಮ್ಮಣ್ಣ, ವೆಂಕಟೇಶಪ್ಪ, ಪ್ರಸನ್ನ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.