ADVERTISEMENT

ಅನ್ನ ಕೊಡುವ ರೈತರು ದೇಶದ ಬೆನ್ನೆಲುಬು

ಕಾಲುಬಾಯಿ ಜ್ವರ ನಿಯಂತ್ರಣ ಲಸಿಕೆ ಅಭಿಯಾನದಲ್ಲಿ ಸಂಸದ ಮುನಿಸ್ವಾಮಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2019, 13:26 IST
Last Updated 11 ಸೆಪ್ಟೆಂಬರ್ 2019, 13:26 IST
ಸಂಸದ ಎಸ್‌.ಮುನಿಸ್ವಾಮಿ ಕೋಲಾರದಲ್ಲಿ ಬುಧವಾರ ಜಾನುವಾರಿಗೆ ಲಸಿಕೆ ಹಾಕುವ ಮೂಲಕ ರಾಷ್ಟ್ರೀಯ ಕಾಲುಬಾಯಿ ಜ್ವರ ನಿಯಂತ್ರಣ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದರು.
ಸಂಸದ ಎಸ್‌.ಮುನಿಸ್ವಾಮಿ ಕೋಲಾರದಲ್ಲಿ ಬುಧವಾರ ಜಾನುವಾರಿಗೆ ಲಸಿಕೆ ಹಾಕುವ ಮೂಲಕ ರಾಷ್ಟ್ರೀಯ ಕಾಲುಬಾಯಿ ಜ್ವರ ನಿಯಂತ್ರಣ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದರು.   

ಕೋಲಾರ: ‘ಜಿಲ್ಲೆಯ ರೈತರು ಹೈನೋದ್ಯಮ ಅವಲಂಬಿಸಿ ಜೀವನ ರೂಪಿಸಿಕೊಂಡಿದ್ದು, ಅಧಿಕಾರಿಗಳು ಕೇಂದ್ರ ಸರ್ಕಾರದ ಯೋಜನೆಗಳನ್ನು ರೈತರಿಗೆ ತಲುಪಿಸಬೇಕು’ ಎಂದು ಸಂಸದ ಎಸ್.ಮುನಿಸ್ವಾಮಿ ಸೂಚಿಸಿದರು.

ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯು ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕಾಲುಬಾಯಿ ಜ್ವರ ನಿಯಂತ್ರಣ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ‘ರೈತರು ದೇಶದ ಬೆನ್ನೆಲುಬು. ಇಡೀ ದೇಶಕ್ಕೆ ಅನ್ನ ಕೊಡುವ ರೈತರು ಅವಲಂಬಿಸಿರುವ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸುವುದು ಸರ್ಕಾರ ಹಾಗೂ ಇಲಾಖೆಗಳ ಜವಾಬ್ದಾರಿ’ ಎಂದು ಹೇಳಿದರು.

‘ಈ ಹಿಂದೆ ಜಾನುವಾರುಗಳಿಗೆ ಕಾಯಿಲೆ ಬಂದರೆ ಇಡೀ ಗ್ರಾಮದ ಜಾನುವಾರುಗಳಿಗೆ ಸೋಂಕು ತಗುಲಿ ಮೃತಪಡುತ್ತಿದ್ದವು. ರೋಗ ನಿಯಂತ್ರಣಕ್ಕೆ ಹಂತ ಹಂತವಾಗಿ ಅನೇಕ ಮಾರ್ಗ ಕಂಡು ಹಿಡಿದಿದ್ದು, ಪ್ರತಿ ಕಾಯಿಲೆಗೂ ಲಸಿಕೆ ಅಭಿಯಾನ ನಡೆಸಲಾಗುತ್ತಿದೆ. ರೈತರು ಯಾವುದೇ ವದಂತಿಗೆ ಕಿವಿಗೊಡದೆ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

‘ದೇಶದಲ್ಲಿ 13 ಕೋಟಿಗೂ ಹೆಚ್ಚು ಜಾನುವಾರುಗಳಿವೆ. ಜಾನುವಾರುಗಳಿಗೆ ಬರುವ ರೋಗಗಳನ್ನು ಏಕಕಾಲಕ್ಕೆ ನಿಯಂತ್ರಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮ ಜಾರಿಗೊಳಿಸಿದ್ದಾರೆ. ವರ್ಷದಲ್ಲಿ 2 ಬಾರಿ ನಡೆಯುವ ಕಾಲುಬಾಯಿ ಜ್ವರ ಲಸಿಕೆ ಅಭಿಯಾನದ ಗುರಿ ಶೇ 100ರಷ್ಟು ಸಾಧನೆಯಾದಾಗ ಮಾತ್ರ ರೋಗ ನಿಯಂತ್ರಣಕ್ಕೆ ಬರುತ್ತದೆ’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಬರ ಪರಿಸ್ಥಿತಿ ನಡುವೆಯೂ ಹಾಲು ಉತ್ಪಾದನೆ ಹೆಚ್ಚಿದೆ. ಜಾನುವಾರುಗಳಿಗೆ ಬರುವ ರೋಗಗಳನ್ನು ಸಂಪೂರ್ಣವಾಗಿ ನಿಯಂತ್ರಿಸಿದರೆ ಹಾಲು ಉತ್ಪಾದನೆ ಇನ್ನು ಶೇ 20ರಷ್ಟು ಹೆಚ್ಚುತ್ತದೆ. ರೈತರು ಸರ್ಕಾರದ ಯೋಜನೆಗಳ ಪ್ರಯೋಜನ ಪಡೆದು ಸ್ವಾವಲಂಬಿಗಳಾಗಬೇಕು’ ಎಂದು ಸಲಹೆ ನೀಡಿದರು.

2 ಬಾರಿ ಲಸಿಕೆ: ‘ಕಾಲುಬಾಯಿ ಜ್ವರ ನಿಯಂತ್ರಣಕ್ಕಾಗಿ ಜಾನುವಾರುಗಳಿಗೆ ವರ್ಷದಲ್ಲಿ 2 ಬಾರಿ ಲಸಿಕೆ ಹಾಕಲಾಗುತ್ತಿದೆ. ದೇಶದೆಲ್ಲೆಡೆ ಏಕಕಾಲದಲ್ಲಿ ಅಭಿಯಾನ ನಡೆಸಬೇಕು ಎಂಬುದು ಕೇಂದ್ರದ ಉದ್ದೇಶವಾಗಿದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ವಿವರಿಸಿದರು.

‘ಚಿಕ್ಕಬಳ್ಳಾಪುರ ಜಿಲ್ಲೆಯ ಎಚ್.ಕ್ರಾಸ್, ಚಿಂತಾಮಣಿ ಹಾಗೂ ಕೋಲಾರ ತಾಲ್ಲೂಕಿನ ರೋಜೊರನಹಳ್ಳಿಯಲ್ಲಿ ಜಾನುವಾರು, ಕುರಿ, ಮೇಕೆ, ಹಂದಿಗಳ ವ್ಯಾಪಾರ ನಡೆಯುತ್ತದೆ. ಈ ಭಾಗದಲ್ಲಿ ಕಾಲುಬಾಯಿ ಜ್ವರ ನಿಯಂತ್ರಣವಾಗಿದ್ದರೂ ಹೊರ ರಾಜ್ಯಗಳಿಂದ ಬರುವ ಪ್ರಾಣಿಗಳಲ್ಲಿ ಸೋಂಕು ಇದ್ದರೆ ಕಾಯಿಲೆ ಮತ್ತೆ ಹರಡುತ್ತದೆ. ಹೀಗಾಗಿ ಈ ಸೋಂಕು ನಿಯಂತ್ರಿಸುವ ಅಗತ್ಯವಿದೆ’ ಎಂದು ತಿಳಿಸಿದರು.

‘ದೇಶದಲ್ಲಿ 700ಕ್ಕೂ ಹೆಚ್ಚು ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಅಭಿಯಾನ ಕುರಿತು ತರಬೇತಿ ನೀಡಲಾಗುತ್ತಿದ್ದು, ರೈತರು ತರಬೇತಿ ಪಡೆದು ರೋಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.

ಪ್ರಕರಣ ಪತ್ತೆಯಾಗಿಲ್ಲ: ‘ಜಿಲ್ಲೆಯಲ್ಲಿ ಈವರೆಗೆ 15 ಸುತ್ತು ಕಾಲುಬಾಯಿ ಜ್ವರ ನಿಯಂತ್ರಣ ಲಸಿಕೆ ಅಭಿಯಾನ ನಡೆದಿದ್ದು, 16ನೇ ಸುತ್ತಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಬಾರಿ ಜಾನುವಾರುಗಳ ಜತೆಗೆ ಕುರಿ, ಮೇಕೆಗಳಿಗೂ ಲಸಿಕೆ ಹಾಕಲಾಗುತ್ತದೆ. ಈ ವರ್ಷ ಕಾಲುಬಾಯಿ ಜ್ವರದ ಪ್ರಕರಣ ಪತ್ತೆಯಾಗಿಲ್ಲ’ ಎಂದು ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಆಂಜನೇಯರೆಡ್ಡಿ ಮಾಹಿತಿ ನೀಡಿದರು.

ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ.ಮಧುಸೂದನರೆಡ್ಡಿ, ತೋಟಗಾರಿಕಾ ಮಹಾವಿದ್ಯಾಲಯದ ಡೀನ್ ಬಿ.ಜಿ.ಪ್ರಕಾಶ್, ಸಹ ವಿಸ್ತರಣಾ ನಿರ್ದೇಶಕ ಟಿ.ಬಿ.ಬಸವರಾಜು, ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದ ವಿಷಯ ತಜ್ಞರಾದ ಡಾ.ಗೌತಮ್, ಡಾ.ನಟರಾಜ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.