ADVERTISEMENT

ಬಜೆಟ್‌ನಲ್ಲಿ ರೈತರಿಗೆ ಆದ್ಯತೆ ನೀಡಿಲ್ಲ: ಶಾಸಕ ಶ್ರೀನಿವಾಸಗೌಡ ಆರೋಪ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2020, 13:18 IST
Last Updated 7 ಮಾರ್ಚ್ 2020, 13:18 IST
   

ಕೋಲಾರ: ‘ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಂಡಿಸಿದ ಬಜೆಟ್‌ನಲ್ಲಿ ರೈತರಿಗೆ ಆದ್ಯತೆ ನೀಡಿಲ್ಲ, ತೃಪ್ತಿದಾಯಕ ಬಜೆಟ್ ಮಂಡನೆಯಲ್ಲಿ ಸರ್ಕಾರ ವಿಫಲವಾಗಿದೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಟೀಕಿಸಿದರು.

ಇಲ್ಲಿ ಶನಿವಾರ ಸದ್ದಿಗಾರರೊಂದಿಗೆ ಮಾತನಾಡಿ, ‘ಯಡಿಯೂರಪ್ಪ ಅವರು ಬಜೆಟ್‌ನಲ್ಲಿ ಕೋಲಾರ ಜಿಲ್ಲೆಯನ್ನೇ ಪ್ರಸ್ತಾಪಿಸಿಲ್ಲ. ಬೇರೆ ಯೋಜನೆಗಳಿಗೆ ಮೀಸಲಿಟ್ಟಿರುವ ಅನುದಾನ ಜಿಲ್ಲೆಗೂ ಹಂಚಿಕೆಯಾಗುತ್ತದೆ’ ಎಂದರು.

‘ಜಿಲ್ಲೆಯ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಕೆ.ಸಿ ವ್ಯಾಲಿ, ಯರಗೋಳ್ ಹಾಗೂ ಎತ್ತಿನಹೊಳೆ ಯೋಜನೆ ಜಾರಿಗೊಳಿಸಲಾಗಿದೆ. ಈ ಪೈಕಿ ಕೆ.ಸಿ ವ್ಯಾಲಿ ಯೋಜನೆ ಮಾತ್ರ ಪೂರ್ಣಗೊಂಡು ಜಿಲ್ಲೆಯ ಕೆರೆಗಳಿಗೆ ನೀರು ಹರಿದು ಬರುತ್ತಿದೆ. ಎತ್ತಿನಹೊಳೆ ಹಾಗೂ ಯರಗೋಳ್‌ ಯೋಜನೆ ಕಾಮಗಾರಿ ಪೂರ್ಣಗೊಂಡಿಲ್ಲ’ ಎಂದು ಹೇಳಿದರು.

ADVERTISEMENT

‘ಕೆರೆಗಳಿಗೆ ನೀರು ಬಂದಿರುವುದರಿಂದ ಕೆಲ ಗ್ರಾಮಗಳ ಕೊಳವೆ ಬಾವಿಗಳು ಮರುಪೂರಣಗೊಂಡು ಅಂತರ್ಜಲ ವೃದ್ಧಿಯಾಗಿದೆ. ಕುಡಿಯುವ ನೀರಿನ ಸಮಸ್ಯೆ ಸ್ವಲ್ಪ ಮಟ್ಟಿಗೆ ಬಗೆಹರಿದಿದೆ. ಕೆಲ ರೈತರು ಕೆ.ಸಿ ವ್ಯಾಲಿ ಯೋಜನೆ ನೀರನ್ನು ಅನಧಿಕೃತವಾಗಿ ಬಳಕೆ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವ ಬಗ್ಗೆ ಜಿಲ್ಲಾಧಿಕಾರಿ ಜತೆ ಚರ್ಚಿಸಿದ್ದೇನೆ. ಇನ್ನು ಮುಂದೆ ನಿಯಮಬಾಹಿರವಾಗಿ ಕೃಷಿಗೆ ನೀರು ಬಳಕೆ ಮಾಡುವವರ ವಿರುದ್ಧ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.