ADVERTISEMENT

ರೈತರ ಆದಾಯ ದ್ವಿಗುಣ: ಒಪ್ಪಂದಕ್ಕೆ ಸಹಿ

​ಪ್ರಜಾವಾಣಿ ವಾರ್ತೆ
Published 14 ಜೂನ್ 2020, 16:32 IST
Last Updated 14 ಜೂನ್ 2020, 16:32 IST
ಕೇಂದ್ರ ಸರ್ಕಾರದ ರೈತರ ಆದಾಯ ದ್ವಿಗುಣಗೊಳಿಸುವ ಕಾರ್ಯಕ್ರಮಕ್ಕೆ ಪೂರಕವಾಗಿ ಇಂಡಿಯನ್ ಫಾರ್ಮರ್ಸ್ ಫರ್ಟಿಲೈಜರ್ ಕೋ-ಆಪರೇಟೀವ್ ಲಿಮಿಟೆಡ್ ಮತ್ತು ಭಾರತೀಯ ಕೃಷಿ ಅನುಸಂಧಾನ ಪರಿಷತ್ ಸದಸ್ಯರು ಪರಸ್ಪರ ದ್ವಿಪಕ್ಷೀಯ ಒಪ್ಪಂದಕ್ಕೆ ಕೋಲಾರದಲ್ಲಿ ಸಹಿ ಹಾಕಿ ಹಸ್ತಲಾಘವ ನೀಡಿದರು.
ಕೇಂದ್ರ ಸರ್ಕಾರದ ರೈತರ ಆದಾಯ ದ್ವಿಗುಣಗೊಳಿಸುವ ಕಾರ್ಯಕ್ರಮಕ್ಕೆ ಪೂರಕವಾಗಿ ಇಂಡಿಯನ್ ಫಾರ್ಮರ್ಸ್ ಫರ್ಟಿಲೈಜರ್ ಕೋ-ಆಪರೇಟೀವ್ ಲಿಮಿಟೆಡ್ ಮತ್ತು ಭಾರತೀಯ ಕೃಷಿ ಅನುಸಂಧಾನ ಪರಿಷತ್ ಸದಸ್ಯರು ಪರಸ್ಪರ ದ್ವಿಪಕ್ಷೀಯ ಒಪ್ಪಂದಕ್ಕೆ ಕೋಲಾರದಲ್ಲಿ ಸಹಿ ಹಾಕಿ ಹಸ್ತಲಾಘವ ನೀಡಿದರು.   

ಕೋಲಾರ: ‘ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ರೈತರ ಆದಾಯ ದ್ವಿಗುಣಗೊಳಿಸುವ ಕಾರ್ಯಕ್ರಮಕ್ಕೆ ಪೂರಕವಾಗಿ ಇಂಡಿಯನ್ ಫಾರ್ಮರ್ಸ್ ಫರ್ಟಿಲೈಜರ್ ಕೋ-ಆಪರೇಟೀವ್ ಲಿಮಿಟೆಡ್ ಮತ್ತು ಭಾರತೀಯ ಕೃಷಿ ಅನುಸಂಧಾನ ಪರಿಷತ್ ಪರಸ್ಪರ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿವೆ’ ಎಂದು ಇಫ್ಕೋ ಸಂಸ್ಥೆಯ ಮಾರಾಟ ವಿಭಾಗದ ವ್ಯವಸ್ಥಾಪಕ ಸಿ.ನಾರಾಯಣಸ್ವಾಮಿ ತಿಳಿಸಿದರು.

ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಇಪ್ಕೋ ಸಂಸ್ಥೆಯ ನ್ಯಾನೋ ಕೃಷಿ ಪರಿಕರಗಳ ಪರಸ್ಪರ ಸಂಶೋಧನೆ, ಪರೀಕ್ಷೆ ಮತ್ತು ಮೌಲ್ಯಮಾಪನವನ್ನು ಕೃಷಿ ವಿಜ್ಞಾನ ಕೇಂದ್ರಗಳ ಮೂಲಕ ನಡೆಸುವುದು ಇದರ ಪ್ರಮುಖ ಅಂಶವಾಗಿದೆ’ ಎಂದು ಹೇಳಿದರು.

‘ಹೊಸ ಒಪ್ಪಂದದಿಂದಾಗಿ ಕೃಷಿ ವಿಜ್ಞಾನ ಕೇಂದ್ರಗಳಿಗೆ ಸುಧಾರಿತ ಕೃಷಿ ತಂತ್ರಜ್ಞಾನವನ್ನು ತರಬೇತಿ, ಕೇತ್ರ ಪ್ರಾತ್ಯಕ್ಷಿಕೆ, ವಿಚಾರ ಸಂಕಿರಣಗಳ ಮೂಲಕ ರೈತರಿಗೆ ತಲುಪಿಸಲು ಅನುಕೂಲವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಸಂಶೋಧನೆಯು ಕೃಷಿ ಉದ್ಯಮಕ್ಕೆ ಪೂರಕವಾಗಿದೆ. ಇದು ಸುಧಾರಿತ ಕೃಷಿ ತಂತ್ರಜ್ಞಾನವನ್ನು ಪರೀಕ್ಷಾ ಪ್ರಯೋಗಾಲಯದಿಂದ ರೈತರ ಹೊಲಗಳಿಗೆ ತಲುಪಿಸಲು 2 ಸಂಸ್ಥೆಗಳ ಮಹತ್ವದ ಕೊಡುಗೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಯು.ಎಸ್.ಆವಸ್ತಿ ಬಣ್ಣಿಸಿದರು.

‘ಅತಿ ಹೆಚ್ಚು ರಾಸಾಯನಿಕಗಳ ಬಳಕೆಯಿಂದ ಆಗುತ್ತಿರುವ ತೊಂದರೆ ತಪ್ಪಿಸಲು ಇಫ್ಕೋ ಸಂಸ್ಥೆಯು ಮಣ್ಣಿನಲ್ಲಿರುವ ರಾಸಾಯನಿಕ ಅಂಶ ನಿರ್ಮೂಲನೆ ಮಾಡಲು ಪಣತೊಟ್ಟಿದೆ. ದ್ವಿಪಕ್ಷೀಯ ಒಪ್ಪಂದದಿಂದ ರೈತರಿಗೆ ಹೆಚ್ಚು ಅನುಕೂಲವಾಗುತ್ತದೆ’ ಎಂದು ವಿವರಿಸಿದರು.

ಐತಿಹಾಸಿಕ ಕ್ಷಣ

‘ಒಪ್ಪಂದವು ಪ್ರಧಾನಿ ಮೋದಿಯವರ ರೈತರ ಆದಾಯ ದ್ವಿಗುಣ ಕಾರ್ಯಕ್ರಮಕ್ಕೆ ಪೂರಕವಾಗಿದೆ. ಈ ಒಪ್ಪಂದ ಐತಿಹಾಸಿಕ ಕ್ಷಣ. ಒಪ್ಪಂದದಿಂದ ಕೃಷಿ ರಾಸಾಯನಿಕ ರಸಗೊಬ್ಬರಗಳ ಬಳಕೆಯನ್ನು ಶೇ 15ರಷ್ಟು ಕಡಿಮೆ ಮಾಡುವುದರಿಂದ ರೈತ ಸಮುದಾಯಕ್ಕೆ ದೊಡ್ಡ ಕೊಡುಗೆಯಾಗಲಿದೆ’ ಎಂದು ಭಾರತೀಯ ಕೃಷಿ ಅನುಸಂಧಾನ ಪರಿಷತ್ ಮಹಾ ನಿರ್ದೇಶಕ ಮೊಹಪಾತ್ರ ತಿಳಿಸಿದರು.

ಇಫ್ಕೋ ಸಂಸ್ಥೆ ಮಾರಾಟ ವಿಭಾಗದ ನಿರ್ದೇಶಕ ಯೋಗೇಂದ್ರಕುಮಾರ್, ಅನುಸಂಧಾನ ಪರಿಷತ್‌ನ ಉಪ ಮಹಾ ನಿರ್ದೇಶಕ ಎ.ಕೆ.ಸಿಂಗ್, ಭಾರತ ಸರ್ಕಾರದ ಕೃಷಿ ನಿರ್ದೇಶಕ ಮಲ್ಹೋತ್ರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.