ADVERTISEMENT

ಸಿ.ಡಿ ಪ್ರಕರಣ: ಸರ್ಕಾರ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಿ -ಎಚ್‌.ಡಿ ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2021, 19:48 IST
Last Updated 7 ಮಾರ್ಚ್ 2021, 19:48 IST
ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ
ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ   

ಕೋಲಾರ: ‘ರಮೇಶ ಜಾರಕಿಹೊಳಿ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಸಿ.ಡಿ ಪ್ರಕರಣದ ದೂರುದಾರ ದಿನೇಶ್‌ ಕಲ್ಲಹಳ್ಳಿ ಯಾವ ಕಾರಣಕ್ಕೆ ದೂರು ಹಿಂಪಡೆದಿದ್ದಾರೆ ಎಂಬುದು ಗೊತ್ತಿಲ್ಲ. ಪ್ರಕರಣ ಸಂಬಂಧ ಸರ್ಕಾರವೇ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಿ’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಒತ್ತಾಯಿಸಿದರು.

ತಾಲ್ಲೂಕಿನ ಅಜ್ಜಪ್ಪನಹಳ್ಳಿ ಗೇಟ್‌ ಬಳಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ರಾಜ್ಯದಲ್ಲಿ ಕಳೆದೊಂದು ವಾರದಿಂದ ಅಸಹ್ಯಕರ ಘಟನೆಗಳು ನಡೆಯುತ್ತಿವೆ. ರಮೇಶ ಜಾರಕಿಹೊಳಿ ಪ್ರಕರಣದಲ್ಲಿ ಸರ್ಕಾರ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಸರ್ಕಾರ ತನ್ನ ಗೌರವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯದ ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕು’ ಎಂದು ಹೇಳಿದರು.

‘ದಿನೇಶ್‌ ಮೊದಲು ಯಾವ ಕಾರಣಕ್ಕೆ ದೂರು ಕೊಟ್ಟಿದ್ದರು, ನಂತರ ಯಾವ ಕಾರಣಕ್ಕೆ ಹಿಂಪಡೆದಿದ್ದಾರೆ, ಈ ಪ್ರಕರಣ ಯಾವ ಕಾರಣಕ್ಕೆ ಬಹಿರಂಗಗೊಂಡಿತು, ದೂರು ಹಿಂಪಡೆಯಲು ಯಾರು ಪ್ರೇರೇಪಿಸಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು. ಇದರ ಸತ್ಯಾಸತ್ಯತೆ ಏನು ಎಂಬುದನ್ನು ಸರ್ಕಾರ ಜನರ ಮುಂದಿಡಬೇಕು. ಸಂತ್ರಸ್ತ ಯುವತಿಗೆ ಅನ್ಯಾಯವಾಗಿದೆ. ಹೀಗಾಗಿ ಅವರು ಹೊರ ಬಂದು ಮಾತನಾಡಿಲ್ಲ’ ಎಂದರು.

ADVERTISEMENT

‘ಅಧಿಕಾರ ಇದ್ದಾಗ ಬ್ಲ್ಯಾಕ್‌ಮನಿ, ಇಲ್ಲದಾಗ ಬ್ಲ್ಯಾಕ್‌ಮೇಲ್’
ಬೀದರ್‌:
‘ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಬ್ಲ್ಯಾಕ್‌ಮನಿ, ಅಧಿಕಾರದಲ್ಲಿ ಇಲ್ಲದಿದ್ದಾಗ ಬ್ಲ್ಯಾಕ್‌ಮೇಲ್ ಮಾಡುತ್ತದೆ. ಸಿ.ಡಿ ಪ್ರಕರಣವೂ ತಂತ್ರಗಾರಿಕೆಯ ಒಂದು ಭಾಗ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ ಕಟೀಲ್ ತಿಳಿಸಿದರು.

‘ಬ್ಲ್ಯಾಕ್‌ಮೇಲ್ ಮಾಡುವುದು, ಗಲಭೆ ಸೃಷ್ಟಿಸುವುದು ಕಾಂಗ್ರೆಸ್‌ನ ರಾಜಕೀಯ ತಂತ್ರಗಾರಿಕೆಯ ಭಾಗ. ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿ ಪ್ರಕರಣ ಇದಕ್ಕೆ ಉತ್ತಮ ಉದಾಹರಣೆ. ಕಾಂಗ್ರೆಸ್‌ನ ಬ್ಲ್ಯಾಕ್‌ಮೇಲ್ ತಂತ್ರಗಾರಿಕೆಗೆ ಕೆಲವರು ಒಳಗಾಗಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.

‘ಸಚಿವ ಸಿ.ಪಿ.ಯೋಗೇಶ್ವರ್‌ ಗ್ರಾಫಿಕ್ಸ್‌ ಎಕ್ಸ್‌ಪರ್ಟ್‌. ಅವರಿಗೆ ತಂತ್ರಜ್ಞಾನದ ಬಗ್ಗೆ ಅಪಾರ ಜ್ಞಾನ ಇರುವುದರಿಂದ ಗ್ರಾಫಿಕ್ಸ್‌ ಬಗ್ಗೆ ಮಾತನಾಡಿದ್ದಾರೆ’ ಎಂದು ವ್ಯಂಗ್ಯವಾಡಿದರು.

**
‘ಮಾನ ಹೋದಮೇಲೆ ತೀರ್ಪು ಬಂದರೇನು ಪ್ರಯೋಜನ?’
ದಾವಣಗೆರೆ:
ಮಾನ ಹೋದಮೇಲೆ ಕೋರ್ಟ್‌ ತೀರ್ಪು ಬಂದು ಏನು ಪ್ರಯೋಜನ? ಅದಕ್ಕಾಗಿ ಕೆಲವರು ಸಹಜವಾಗಿ ತಡೆಯಾಜ್ಞೆ ತಂದಿದ್ದಾರೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಸಮರ್ಥಿಸಿಕೊಂಡಿದ್ದಾರೆ.

ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ‘ರಮೇಶ ಜಾರಕಿಹೊಳಿ ಅವರಿಗೆ ಸಂಬಂಧಿತ ಪ್ರಕರಣದಲ್ಲಿ ನ್ಯಾಯ ಯಾವಾಗ ಸಿಗುವುದೋ ಗೊತ್ತಿಲ್ಲ. ಆದರೆ ತೇಜೋವಧೆ ಆಗಿಹೋಯಿತಲ್ಲ’ ಎಂದು ಹೇಳಿದರು.

‘ಸುಮ್ಮನೆ ಯಾರೂ ಪ್ರಸಾರ ಮಾಡಬಾರದು ಅಷ್ಟೇ. ನೈತಿಕತೆ ಮತ್ತು ಕಾನೂನಿನ ಪ್ರಶ್ನೆ ಇದು. ಮಹಿಳೆ ದೂರು ನೀಡಿದರೆ ಅದು ಸರಿಯಾದ ಕ್ರಮ. ಬೇರೆಯವರು ನೀಡಿದ್ದಾರೆ. ಇಂಥ ದೂರುಗಳ ಬಗ್ಗೆ ಚರ್ಚೆ ಮಾಡುವುದು ಬಹಳ ಕಷ್ಟ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.