ADVERTISEMENT

ಕೋಲಾರ | 3 ತಿಂಗಳಲ್ಲಿ 566 ಅಗ್ನಿ ಅವಘಡ!

ಬಿಸಿಲಿನ ಧಗೆ; ಬಯಲುಸೀಮೆ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಅಗ್ನಿ ಅನಾಹುತ; ಈ ವರ್ಷ ಭಾರಿ ಹೆಚ್ಚಳ–ಆತಂಕ

ಕೆ.ಓಂಕಾರ ಮೂರ್ತಿ
Published 6 ಮೇ 2024, 7:09 IST
Last Updated 6 ಮೇ 2024, 7:09 IST
ಕೋಲಾರ ಜಿಲ್ಲೆಯಲ್ಲಿ ಬೆಂಕಿ ನಂದಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ
ಕೋಲಾರ ಜಿಲ್ಲೆಯಲ್ಲಿ ಬೆಂಕಿ ನಂದಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ   

ಕೋಲಾರ: ಜಿಲ್ಲೆಯಲ್ಲಿ ಬರಗಾಲ ಮತ್ತು ಸುಡು ಬೇಸಿಗೆಯಿದ್ದು, ಉಷ್ಣಾಂಶ 43.5 ಡಿಗ್ರಿ ಸೆಲ್ಸಿಯಸ್‌ವರೆಗೆ ತಲುಪಿದೆ. ಈ ಪರಿಣಾಮ ಕಳೆದ ಮೂರು ತಿಂಗಳಲ್ಲಿ ಬರೋಬ್ಬರಿ 566 ಅಗ್ನಿ ಅವಘಡಗಳು ಸಂಭವಿಸಿದ್ದು, ಜನರಲ್ಲಿ ತಳಮಳ ಸೃಷ್ಟಿಸಿವೆ.

ಈ ವರ್ಷದಲ್ಲಿ ಜನವರಿ 1ರಿಂದ ಮಾರ್ಚ್‌ ಅಂತ್ಯದವರೆಗೆ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಈ ಅನಾಹುತಗಳು ಸಂಭವಿಸಿವೆ. ಏಪ್ರಿಲ್‌ ತಿಂಗಳಿನಲ್ಲೂ ಅಧಿಕ ಅ‌ವಘಡ ಅಲ್ಲಲ್ಲಿ ಕಂಡು ಬಂದಿದ್ದು, ಅಗ್ನಿ ಶಾಮಕ ದಳದ ಸಿಬ್ಬಂದಿಗೆ ಹೆಚ್ಚಿನ ಒತ್ತಡ ತಂದೊಡ್ಡಿವೆ.

ಇದು ಬರೀ ಮೂರು ತಿಂಗಳ ಲೆಕ್ಕಾಚಾರ. 2023ರಲ್ಲಿ 12 ತಿಂಗಳಲ್ಲಿ 1,022 ಪ್ರಕರಣಗಳು ಸಂಭವಿಸಿದ್ದವು.

ADVERTISEMENT

ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಅಗ್ನಿ ಅವಘಡಗಳ ಸಂಖ್ಯೆ ಹೆಚ್ಚುತ್ತಿದೆ. ಬಿರು ಬಿಸಿಲು, ಬಿಸಿ ಗಾಳಿಗೆ ವಾತಾವರಣದಲ್ಲಿ ತೇವಾಂಶ ಕಡಿಮೆಯಾಗಿ, ಉಷ್ಣಾಂಶ ಅಧಿಕವಾಗಿದೆ. ಇದರ ಪರಿಣಾಮ ಕಸದ ರಾಶಿ, ಹುಲ್ಲಿನ ಮೆದೆ, ಮಾವಿನ ತೋಟ, ನೀಲಗಿರಿ ತೋಪು, ಬಿದಿರು ಆಕಸ್ಮಿಕ ಬೆಂಕಿಗೆ ತುತ್ತಾಗುತ್ತಿವೆ. ಬೆಳೆಗಳು ಮತ್ತು ಜಾನುವಾರುಗಳಿಗೆ ಕೂಡಿಟ್ಟ ಒಣ ಮೇವು ಬೆಂಕಿಯ ಕೆನ್ನಾಲಿಗೆಗೆ ಸಿಕ್ಕು ಸುಟ್ಟು ಕರಕಲಾಗುತ್ತಿವೆ. ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ಗಾಯದ ಮೇಲೆ ಬರೆ ಬಿದ್ದಂತಾಗುತ್ತಿದೆ.

‘ಈ ವರ್ಷ ಅಗ್ನಿ ಅವಘಡ ಹೆಚ್ಚಳಕ್ಕೆ ಬಿಸಿಲಿನ ಧಗೆಯೇ ಕಾರಣ. ತಾಪಮಾನ, ಬಿಸಿ ಗಾಳಿ ಕಾರಣ ಬೆಂಕಿ ಬೇಗನೇ ಆವರಿಸುತ್ತದೆ. ಕಸದ ರಾಶಿ ಇರಬಹುದು, ಕುರುಚಲು ಅರಣ್ಯದಲ್ಲಿ ಇರಬಹುದು. ಜೊತೆಗೆ ವಿದ್ಯುತ್‌ ಶಾರ್ಟ್‌ ಸರ್ಕಿಟ್‌, ಸಿಲಿಂಡರ್‌ ಸ್ಫೋಟದಿಂದಲೂ ಬೆಂಕಿ ಅವಘಡ ಸಂಭವಿಸಿವೆ. ಎಲ್ಲೂ ಜೀವಹಾನಿ ಸಂಭವಿಸಿಲ್ಲ’ ಎಂದು ಜಿಲ್ಲಾ ಅಗ್ನಿಶಾಮಕ ದಳ ಅಧಿಕಾರಿ ಹನುಮಂತರಾಯಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಕೋಲಾರ ತಾಲ್ಲೂಕಿನಲ್ಲಿ 156 ಪ್ರಕರಣ ಹಾಗೂ ಮುಳಬಾಗಿಲು ತಾಲ್ಲೂಕಿನಲ್ಲಿ 121 ಪ್ರಕರಣಗಳು ಕಂಡುಬಂದಿದ್ದು, ಉಳಿದ ತಾಲ್ಲೂಕುಗಳಿಗೆ ಹೋಲಿಸಿದರೆ ಅಧಿಕ. ಮಾಲೂರು ತಾಲ್ಲೂಕಿನಲ್ಲಿ (64) ಕಡಿಮೆ ಅವಘಡ ದಾಖಲಾಗಿವೆ.

ಅಗ್ನಿಶಾಮಕ ದಳದ ಸಿಬ್ಬಂದಿ ಹಗಲಿರುಳೆನ್ನದೆ ಜೀವ ಪಣಕ್ಕಿಟ್ಟು ಕಾರ್ಯನಿರ್ವಹಿಸುತ್ತಿದ್ದಾರೆ. ಕರೆ ಬಂದ ತಕ್ಷಣ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸುವ ಕೆಲಸ ಮಾಡುತ್ತಿದ್ದಾರೆ.

ಜಿಲ್ಲೆಯ ಬೆಟ್ಟಗುಡ್ಡಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಕೆಲವೆಡೆ ಕಿಡಿಗೇಡಿಗಳ ಕೃತ್ಯದಿಂದ ಇನ್ನು ಕೆಲವೆಡೆ ಸ್ವಾಭಾವಿಕವಾಗಿ ಬೆಂಕಿ ಬೀಳುತ್ತಿದೆ. ಬೆಂಕಿ ನಂದಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕೂಡ ಕಾರ್ಯಪ್ರವೃತ್ತವಾಗಿದೆ.

‘ಈಗಾಗಲೇ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮೂಡಿಸಿದ್ದೇವೆ. ಪ್ರತಿ ಶನಿವಾರ ವಿವಿಧೆಡೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ಬೆಂಕಿ ಅವಘಡಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ. ಮುನ್ನೆಚ್ಚರಿಕೆ ಕ್ರಮ ವಹಿಸಲು ಸಲಹೆಗಳನ್ನು ನೀಡಿದ್ದೇವೆ. ಯಾವುದೇ ರೀತಿ ಬೆಂಕಿ ಅವಘಡ ಸಂಭವಿಸಿದ ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಬೇಕು’ ಎಂದು ಹನುಮಂತರಾಯಪ್ಪ ಹೇಳಿದರು.

ಕೋಲಾರ ಜಿಲ್ಲೆಯಲ್ಲಿ ಬೆಂಕಿ ನಂದಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ
ಕೋಲಾರದ ಅಗ್ನಿಶಾಮಕ ಠಾಣೆ
ಹನುಮಂತರಾಯಪ್ಪ

2023ರಲ್ಲಿ 12 ತಿಂಗಳಲ್ಲಿ 1,022 ಪ್ರಕರಣ ಅಗ್ನಿ ಶಾಮಕ ದಳದ ಸಿಬ್ಬಂದಿಗೆ ಹೆಚ್ಚಿದ ಒತ್ತಡ ಯಾವುದೇ ಪ್ರಾಣಿ ಹಾನಿ ಇಲ್ಲ

ಅದೃಷ್ಟವಶಾತ್‌ ಎಲ್ಲೂ ತೀವ್ರತರನದ ಅವಘಡ ಸಂಭವಿಸಿಲ್ಲ. ವಾಹನ ಸಾಮಗ್ರಿ ಬಳಸಿ ನಮ್ಮ ಅಗ್ನಿಶಾಮಕ ದಳ ಸಿಬ್ಬಂದಿ ಪರಿಸ್ಥಿತಿಯನ್ನು ಬೇಗನೇ ತಹಬದಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ
ಹನುಮಂತರಾಯಪ್ಪ, ಜಿಲ್ಲಾ ಅಗ್ನಿಶಾಮಕ ದಳ ಅಧಿಕಾರಿ

ಕೋಲಾರ ಜಿಲ್ಲೆಯಲ್ಲಿ 2024ರಲ್ಲಿ ಅಗ್ನಿ ಅವಘಡಗಳ ಕರೆ (ಮಾರ್ಚ್‌ ಅಂತ್ಯದವರೆಗೆ) ‌ಠಾಣೆ; ಸಣ್ಣ ಪ್ರಮಾಣ; ಮಧ್ಯಮ ಪ್ರಮಾಣ; ಒಟ್ಟು ಕರೆ ಕೋಲಾರ; 154; 2; 156 ಕೆಜಿಎಫ್‌; 78; 0; 78 ಮುಳಬಾಗಿಲು; 121; 0; 121 ಬಂಗಾರಪೇಟೆ; 65; 0; 65 ಶ್ರೀನಿವಾಸಪುರ; 82; 0; 82 ಮಾಲೂರು; 64; 0; 64 ಒಟ್ಟು ಕರೆ; 564; 02; 566

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.