ಕೋಲಾರ: ನಗರದ ಕೋಲಾರಮ್ಮ ಕೆರೆ (ಅಮಾನಿಕೆರೆ) ಕೋಡಿಯಲ್ಲಿ ಮತ್ತೆ ನೊರೆ ಹರಿಯುತ್ತಿದ್ದು, ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಏಳೆಂಟು ದಿನಗಳಿಂದ ಮಳೆಯಾಗುತ್ತಿದ್ದು, ಮಂಗಳವಾರ ಬೆಳಿಗ್ಗೆ ಬಿರುಸಿನಿಂದ ಸುರಿದಿತ್ತು. ಹೀಗಾಗಿ, ಕೋಲಾರದ ಗಾಂಧಿನಗರ ಸೇತುವೆ ಬಳಿ ಕೋಡಿಯಲ್ಲಿ ನೊರೆ ಧುಮ್ಮಿಕ್ಕುತ್ತಿದೆ. ಮಂಜು ಆವರಿಸಿಕೊಂಡ ಶೈಲಿಯಲ್ಲಿ ಬಹುದೂರದವರೆಗೆ ರಾಶಿ ನೊರೆ ಕಾಣುತ್ತಿದೆ. ಇದಕ್ಕೆ ಕೊಳಚೆ ನೀರು ಕಾರಣ ಎಂದು ಸ್ಥಳೀಯರು ದೂರಿದ್ದಾರೆ.
ಮಳೆ ನೀರು ಹರಿಯುವ ಕಾಲುವೆಗಳಲ್ಲಿ ನಗರದ ವಿವಿಧೆಡೆಯ ತ್ಯಾಜ್ಯ ನೀರು ಹರಿದು ಕೆರೆಯ ಒಡಲು ಸೇರುತ್ತಿದೆ. ಇದರಿಂದ ಕೆರೆ ಕಲುಷಿತಗೊಳ್ಳುತ್ತಿದ್ದು, ಜಲಚರಗಳಿಗೂ ತೊಂದರೆ ಉಂಟಾಗುತ್ತಿದೆ. ಮಳೆ ನೀರು ಕೆರೆಗೆ ಸೇರಿ ಮಾಲಿನ್ಯಕಾರಕ ಅಂಶಗಳು ಕದಡಿ ನೊರೆ ಸೃಷ್ಟಿಯಾಗುತ್ತಿದೆ ಎನ್ನಲಾಗಿದೆ. ಇದೇ ಭಾಗದಲ್ಲಿ ಜಿಲ್ಲಾಡಳಿತದಿಂದ ಸಿಎಸ್‌ಆರ್ ಅನುದಾನದಡಿ ಕೆರೆ ಸೌಂದರ್ಯಕರಣ ಕಾಮಗಾರಿ ನಡೆಯುತ್ತಿದೆ. ಈ ಕೆರೆಗೆ ಕೆ.ಸಿ.ವ್ಯಾಲಿ ನೀರು ಕೂಡ ಹರಿಸಲಾಗುತ್ತಿತ್ತು.
ನಗರಸಭೆ ಹಾಗೂ ಸಣ್ಣ ನೀರಾವರಿ ಇಲಾಖೆ ನಿರ್ಲಕ್ಷ್ಯದಿಂದ ಕೆರೆ ಹಾಳಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕೋಲಾರಮ್ಮ ಕೆರೆಗೆ ತ್ಯಾಜ್ಯ ನೀರು ಐದು ಕಡೆಯಿಂದ ಸೇರುತ್ತಿದೆ. ಜೊತೆಗೆ ಕೆರೆ ಏರಿ ಮೇಲೆ ತ್ಯಾಜ್ಯ ಸುರಿಯುತ್ತಿದ್ದು, ಅದೂ ಕೆರೆ ಒಡಲು ಸೇರುತ್ತಿದೆ. ಕಾಮಗಾರಿ ಕಾರಣ ಹೆಚ್ಚು ನೀರು ಸಂಗ್ರಹವಾಗದಿರಲೆಂದು ಕೋಡಿಯ ಕಟ್ಟೆಯನ್ನು ಒಡೆಯಲಾಗಿದೆ. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಕೋಡಿ ಮೂಲಕ ಹರಿಯುತ್ತಿದೆ. ಮಂಗಳವಾರ ಈ ನೀರಿನಲ್ಲಿ ನೊರೆ ರಾಶಿ ಕಂಡ ಜನರು ಆತಂಕಕ್ಕೆ ಒಳಗಾದರು.
ಬಿರುಸಿನ ಮಳೆ ಆದ ಸಂದರ್ಭದಲ್ಲಿ ವಿವಿಧೆಡೆಯಿಂದ ಹರಿದು ಬರುವ ನೀರು ಕೆರೆಯ ನೀರನ್ನು ಬಗ್ಗಡಗೊಳಿಸುತ್ತದೆ. ಕೆರೆಯ ಅಡಿಯಲ್ಲಿ ಕೆಸರು ಮತ್ತು ಮಾಲಿನ್ಯದ ನೀರಿನ ಮಂಥನವಾಗುತ್ತದೆ. ಇದು ನೊರೆ ಸೃಷ್ಟಿಯಾಗಲು ಕಾರಣ ಎನ್ನುತ್ತಾರೆ ತಜ್ಞರು.
ನಗರದ ಕೊಳಚೆ ನೀರನ್ನು ಸಂಸ್ಕರಿಸದೆ ಕೋಲಾರಮ್ಮ ಕೆರೆಗೆ ಹರಿಸುತ್ತಿರುವ ಬಗ್ಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ನಗರಸಭೆಗೆ ಹಲವಾರು ಬಾರಿ ನೋಟಿಸ್ ನೀಡಿದೆ. ಆದರೆ, ಈವರೆಗೆ ಯಾವುದೇ ಕ್ರಮವಾಗಿಲ್ಲ.
‘ನಗರ ಪ್ರದೇಶದ ಕೊಳಚೆ ನೀರು ಹಾಗೂ ಕಾರ್ಖಾನೆಗಳ ರಾಸಾಯನಿಕ ಅಂಶ ಕೋಲಾರಮ್ಮ ಕೆರೆಗೆ ಸೇರುತ್ತಿದೆ. ಸೌಂದರ್ಯಕರಣ ನೆಪದಲ್ಲಿ ವಾಣಿಜ್ಯೀಕರಣಗೊಳಿಸಲು ಹೊರಟ್ಟಿದ್ದು, ಇಡೀ ಕೆರೆಯನ್ನು ಹಾಳು ಮಾಡುತ್ತಿದ್ದಾರೆ. ಈಗಾಗಲೇ ಕೆರೆ ಸಾಕಷ್ಟು ಒತ್ತುವರಿಯಾಗಿದೆ’ ಎಂದು ನಾಗರಿಕರು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.