ADVERTISEMENT

ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಬಗ್ಗೆ ಗಮನಹರಿಸಿ

​ಪ್ರಜಾವಾಣಿ ವಾರ್ತೆ
Published 29 ಜನವರಿ 2022, 16:03 IST
Last Updated 29 ಜನವರಿ 2022, 16:03 IST

ಕೋಲಾರ: ‘ಕಲಿಕೆಯಲ್ಲಿ ಹಿಂದುಳಿದ ಸರ್ಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಕಲಿಕಾ ಮಟ್ಟ ಉತ್ತಮಗೊಳಿಸಲು ‘ಓದು ಕರ್ನಾಟಕ‘ ಕಾರ್ಯಕ್ರಮವನ್ನು ಶಿಕ್ಷಣ ಇಲಾಖೆ ಅನುಷ್ಠಾನಕ್ಕೆ ತಂದಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರೇವಣಸಿದ್ದಪ್ಪ ತಿಳಿಸಿದರು.

ನಗರದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಕ್ಷೇತ್ರ ಸಿಬ್ಬಂದಿಗೆ ಶನಿವಾರ ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ‘4 ಮತ್ತು 5ನೇ ತರಗತಿ ವಿದ್ಯಾರ್ಥಿಗಳಿಗೆ ಭಾಷೆ, ಸರಳ ಗಣಿತ, ಪರಿಸರ ವಿಷಯದ ಕೌಶಲ ಅಭಿವೃದ್ಧಿಪಡಿಸಲಾಗಿದೆ’ ಎಂದರು.

‘ಮುಖ್ಯವಾಗಿ ಕಾಗುಣಿತ, ಒತ್ತಕ್ಷರ, ಪದ, ವಾಕ್ಯ ರಚನೆ, ಕಥೆ ಓದುವಿಕೆ ವಿಭಾಗ ಒಳಗೊಂಡಿದೆ. ಶಿಕ್ಷಕರು ಇಲಾಖೆ ನೀಡಿರುವ ಪರಿಕರಗಳನ್ನು ಬಳಸಿಕೊಂಡು ಕಲಿಕೆಯಲ್ಲಿ ಬಹಳ ಹಿಂದುಳಿದ ಮಕ್ಕಳನ್ನು ಗುರುತಿಸಿ ಕಲಿಕಾ ಮಟ್ಟ ಸುಧಾರಿಸಬೇಕು’ ಎಂದು ಹೇಳಿದರು.

ADVERTISEMENT

‘60 ದಿನಗಳ ಓದು ಕರ್ನಾಟಕ ನೂರು ದಿನಗಳ ಓದು ಅಭಿಯಾನ ಕಾರ್ಯಕ್ರಮಗಳಿದ್ದು, ಇಲಾಖೆಯ ಎಲ್ಲಾ ಅಧಿಕಾರಿಗಳು ಒಳಗೊಂಡಂತೆ ಅನುಷ್ಠಾನಗೊಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟರಾಮರೆಡ್ಡಿ ವಿವರಿಸಿದರು.

‘ವಿವಿಧ ಕಾರಣಗಳಿಂದ ಕೆಲ ಪ್ರದೇಶಗಳಲ್ಲಿ ಭಾಷೆ ಸಮಸ್ಯೆ ಇದ್ದರೂ ಸಹ ಓದು ಕರ್ನಾಟಕ ಬಹಳ ಉಪಯುಕ್ತವಾಗಿದೆ, ಸಿಬ್ಬಂದಿ ತರಬೇತಿಯ ನಂತರ ಶಾಲೆಗಳಲ್ಲಿ ಯಥಾವತ್ತಾಗಿ ಕಾರ್ಯಕ್ರಮ ಅನುಷ್ಠಾನಗೊಳಿಸುವುದು ಕಾಲಕಾಲಕ್ಕೆ ಪ್ರಗತಿ ಗುರುತಿಸುವಂತಾಗಬೇಕು. ಮೇಲಾಧಿಕಾರಿಗಳಿಗೆ ಮಾಹಿತಿ ಕೊಡಬೇಕು’ ಎಂದು ಸೂಚಿಸಿದರು.

ಶಿಕ್ಷಣ ಸಂಯೋಜಕರಾದ ಆರ್ ಶ್ರೀನಿವಾಸನ್, ಮುನಿರತ್ನಯ್ಯ ಶೆಟ್ಟಿ, ವೆಂಕಟಾಚಲಪತಿ, ಸಂಪನ್ಮೂಲ ವ್ಯಕ್ತಿಗಳಾದ ಪ್ರವೀಣ್, ನಾಗರಾಜ್, ಸವಿತಾ, ಮಂಜುಳಾ ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.