ADVERTISEMENT

ಕಡ್ಡಾಯವಾಗಿ ಸಂಚಾರ ನಿಯಮ ಪಾಲಿಸಿ: ಇನ್‌ಸ್ಪೆಕ್ಟರ್‌ ಶಿವರಾಜ್‌

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2021, 12:22 IST
Last Updated 23 ಡಿಸೆಂಬರ್ 2021, 12:22 IST
ವೇಮಗಲ್‌ ಗ್ರಾಮದಲ್ಲಿ ಗುರುವಾರ ನಡೆದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಇನ್‌ಸ್ಪೆಕ್ಟರ್‌ ಶಿವರಾಜ್‌ ಬೈಕ್‌ ಸವಾರರಿಗೆ ಉಚಿತವಾಗಿ ಹೆಲ್ಮೆಟ್‌ ವಿತರಿಸಿದರು
ವೇಮಗಲ್‌ ಗ್ರಾಮದಲ್ಲಿ ಗುರುವಾರ ನಡೆದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಇನ್‌ಸ್ಪೆಕ್ಟರ್‌ ಶಿವರಾಜ್‌ ಬೈಕ್‌ ಸವಾರರಿಗೆ ಉಚಿತವಾಗಿ ಹೆಲ್ಮೆಟ್‌ ವಿತರಿಸಿದರು   

ವೇಮಗಲ್‌: ‘ಜೀವ ಅಮೂಲ್ಯವಾದುದು. ಮನೆ ಬಿಟ್ಟು ಪುನಃ ಮನೆ ಸೇರುವವರೆಗೂ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ಇನ್‌ಸ್ಪೆಕ್ಟರ್‌ ಶಿವರಾಜ್‌ ಕಿವಿಮಾತು ಹೇಳಿದರು.

ಗ್ರಾಮದಲ್ಲಿ ಗುರುವಾರ ನಡೆದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮದಲ್ಲಿ ಬೈಕ್‌ ಸವಾರರಿಗೆ ಉಚಿತವಾಗಿ ಹೆಲ್ಮೆಟ್‌ ವಿತರಿಸಿ ಮಾತನಾಡಿ, ‘ಪ್ರತಿ ವ್ಯಕ್ತಿ ಕುಟುಂಬದ ಆಧಾರ ಸ್ತಂಭ. ಹೀಗಾಗಿ ಪ್ರತಿ ಜೀವಕ್ಕೂ ಬೆಲೆಯಿದೆ. ಇದನ್ನು ತಿಳಿಯದೆ ಹುಂಬತನಕ್ಕೆ ಮುಂದಾದರೆ ಜೀವಕ್ಕೆ ಆಪತ್ತು ಖಚಿತ’ ಎಂದರು.

‘ಅಪಘಾತದ ಸಂದರ್ಭದಲ್ಲಿ ಶೇ 90ರಷ್ಟು ತಲೆಯ ಭಾಗಕ್ಕೆ ಪೆಟ್ಟಾಗುವ ಸಾಧ್ಯತೆ ಹೆಚ್ಚು. ಈ ಕಾರಣಕ್ಕೆ ಬೈಕ್‌ ಸವಾರರ ಸುರಕ್ಷತೆ ದೃಷ್ಟಿಯಿಂದ ಹೆಲ್ಮೆಟ್‌ ಕಡ್ಡಾಯಗೊಳಿಸಲಾಗಿದೆ. ಆದ್ದರಿಂದ ಸವಾರರು ಮತ್ತು ಹಿಂಬದಿ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಕುಟುಂಬದ ಆತಂಕ ನಿವಾರಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಅಪಘಾತ ಪ್ರಕರಣಗಳಿಂದ ಆಗುತ್ತಿರುವ ಸಾವು ನೋವು ಯೋಚಿಸಿದರೆ ಭಯವಾಗುತ್ತದೆ. ವ್ಯಕ್ತಿ ಜೀವಂತವಾಗಿದ್ದರೆ ಬೆಳೆದು ದೇಶಕ್ಕೆ ಯಾವ ಕೊಡುಗೆ ನೀಡುತ್ತಾನೋ ಗೊತ್ತಿರುವುದಿಲ್ಲ. ಅಂತಹ ಪ್ರತಿಭೆಯನ್ನು ಎಳೆಯ ವಯಸ್ಸಿನಲ್ಲೇ ಕಮರಿಸಿದಂತಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ವಾಹನ ಚಾಲನೆ ಮಾಡುವಾಗ ಮೊಬೈಲ್‌ನಲ್ಲಿ ಸಂಭಾಷನೆ ನಡೆಸುವುದು ತಪ್ಪು. ಅಪಘಾತ ನಿಯಂತ್ರಿಸುವುದು ಎಲ್ಲರ ಜವಾಬ್ದಾರಿಸಂಚಾರ ನಿಯಮ ಪಾಲಿಸದೆ ನಿರ್ಲಕ್ಷ್ಯ ತೋರಿ ಕುಟುಂಬವನ್ನು ಬೀದಿಗೆ ತರಬೇಡಿ. ಆಟೊ ಚಾಲಕರು ನಿಗದಿತ ಮಿತಿಯಲ್ಲಿ ಪ್ರಯಾಣಿಕರನ್ನು ಕರೆದೊಯ್ಯಬೇಕು ಮತ್ತು ಹೆಚ್ಚು ವೇಗವಾಗಿ ವಾಹನ ಚಾಲನೆ ಮಾಡಬಾರದು’ ಎಂದು ಸೂಚಿಸಿದರು.

ಆಸ್ಪತ್ರೆಗೆ ಸೇರಿಸಿ: ‘ಪಾದಚಾರಿಗಳು ರಸ್ತೆಯ ಬಲ ಭಾಗದಲ್ಲಿ ಮತ್ತು ಪಾದಚಾರಿ ಮಾರ್ಗದಲ್ಲೇ ನಡೆದು ಹೋಗಬೇಕು. ವಾಹನ ಸವಾರರು ರಸ್ತೆಯ ಎಡ ಬದಿಯಲ್ಲೇ ಸಂಚರಿಸಿದರೆ ಅಪಘಾತದ ಪ್ರಮಾಣ ತಗ್ಗಿಸಬಹುದು. ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗಳನ್ನು ಆಸ್ಪತ್ರೆಗೆ ಸೇರಿಸಿ ಸಕಾಲಕ್ಕೆ ಅವರಿಗೆ ವೈದ್ಯಕೀಯ ಸೇವೆ ಸಿಗುವಂತೆ ಮಾಡಬೇಕು. ತುರ್ತು ಸಂದರ್ಭದಲ್ಲಿ ಪೊಲೀಸ್ ಸಹಾಯ ಪಡೆಯಲು ಸಹಾಯವಾಣಿ ಸಂಖ್ಯೆ- 112ಕ್ಕೆ ಕರೆ ಮಾಡಬಹುದು’ ಎಂದು ತಿಳಿಸಿದರು.

ಎಎಸ್ಐ ನಾಗರಾಜ್, ಮುಖ್ಯ ಕಾನ್‌ಸ್ಟೆಬಲ್‌ ಆರ್‌.ಸುಧಾಕರ್, ಠಾಣೆಯ ಇತರೆ ಸಿಬ್ಬಂದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.