ADVERTISEMENT

ಹಸಿರೀಕರಣಕ್ಕೆ ಅರಣ್ಯ ಇಲಾಖೆ ಸಂಕಲ್ಪ

ಕೆ.ಸಿ ವ್ಯಾಲಿ ಕಾಲುವೆ ಇಕ್ಕೆಲದಲ್ಲಿ ಗಿಡ ಬೆಳೆಸುವ ಯೋಜನೆಗೆ ಮುನ್ನುಡಿ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2020, 16:31 IST
Last Updated 9 ಆಗಸ್ಟ್ 2020, 16:31 IST
ಕೋಲಾರ ತಾಲ್ಲೂಕಿನ ಸುಗಟೂರು ಬಳಿ ಕೆ.ಸಿ ವ್ಯಾಲಿ ಯೋಜನೆ ಕಾಲುವೆ ಬದುವಿನಲ್ಲಿ ಅರಣ್ಯ ಇಲಾಖೆಯಿಂದ ಗಿಡ ನೆಟ್ಟಿರುವುದು.
ಕೋಲಾರ ತಾಲ್ಲೂಕಿನ ಸುಗಟೂರು ಬಳಿ ಕೆ.ಸಿ ವ್ಯಾಲಿ ಯೋಜನೆ ಕಾಲುವೆ ಬದುವಿನಲ್ಲಿ ಅರಣ್ಯ ಇಲಾಖೆಯಿಂದ ಗಿಡ ನೆಟ್ಟಿರುವುದು.   

ಕೋಲಾರ: ಜಿಲ್ಲೆಯಲ್ಲಿ ಅರಣ್ಯ ಸಂಪತ್ತು ವೃದ್ಧಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಿಟ್ಟಿರುವ ಅರಣ್ಯ ಇಲಾಖೆಯು ಕೆ.ಸಿ ವ್ಯಾಲಿ ಯೋಜನೆ ಕಾಲುವೆಯ ಇಕ್ಕೆಲಗಳಲ್ಲಿ ಗಿಡ ಬೆಳೆಸುವ ಯೋಜನೆಗೆ ಮುನ್ನುಡಿ ಬರೆದಿದೆ.

ಬರಪೀಡಿತ ಜಿಲ್ಲೆಯಲ್ಲಿ ಮಳೆ ಕೊರತೆ ನಡುವೆಯೂ ವರ್ಷದಿಂದ ವರ್ಷಕ್ಕೆ ಅರಣ್ಯ ಸಂಪತ್ತು ಹೆಚ್ಚುತ್ತಿದೆ. ಕಳೆದ ವರ್ಷ ಜಿಲ್ಲೆಯು ಅರಣ್ಯ ಪ್ರದೇಶ ಹೆಚ್ಚಳದಲ್ಲಿ ರಾಜ್ಯದಲ್ಲೇ 5ನೇ ಸ್ಥಾನ ಪಡೆದಿತ್ತು. ಅರಣ್ಯ ಇಲಾಖೆಯು ಹಲವು ಯೋಜನೆಗಳ ಮೂಲಕ ಹಸಿರೀಕರಣದ ಸಂಕಲ್ಪ ಮಾಡಿದೆ.

ಅರಣ್ಯ ಇಲಾಖೆಯು (ಸಾಮಾಜಿಕ ವಲಯ) ಕೆ.ಸಿ ವ್ಯಾಲಿ ಕಾಲುವೆ ಉದ್ದಕ್ಕೂ ಸುಮಾರು 3 ಲಕ್ಷ ಗಿಡ ನೆಡಲು ಮುಂದಾಗಿದೆ. ಬೆಂಗಳೂರಿನ ಕೊಳಚೆ ನೀರನ್ನು ಸಂಸ್ಕರಿಸಿ ಪೈಪ್‌ಲೈನ್‌ ಮತ್ತು ಕಾಲುವೆ ಮೂಲಕ ಜಿಲ್ಲೆಗೆ ಹರಿಸಲಾಗುತ್ತಿದೆ. ಈ ಯೋಜನೆಯ ಕಾಲುವೆಯ ಅಕ್ಕಪಕ್ಕದ ಕೊಳವೆ ಬಾವಿಗಳು ಮರುಪೂರಣಗೊಂಡಿವೆ.

ADVERTISEMENT

ಕೆ.ಸಿ ವ್ಯಾಲಿ ನೀರಿನಿಂದ ಕೆರೆ ಕಟ್ಟೆಗಳು ತುಂಬಿದ್ದು, ಅಂತರ್ಜಲ ಮಟ್ಟ ಸುಧಾರಿಸಿದೆ. ಇದೀಗ ಅರಣ್ಯ ಇಲಾಖೆಯು ಯೋಜನೆ ನೀರನ್ನು ಸದ್ಬಳಕೆ ಮಾಡಿಕೊಂಡು ಕಾಲುವೆ ಬದುಗಳಲ್ಲಿ ಗಿಡ ಬೆಳೆಸುವ ಪ್ರಯತ್ನ ಆರಂಭಿಸಿದೆ. ಈಗಾಗಲೇ ಕೋಲಾರ ತಾಲ್ಲೂಕಿನ ಸುಗಟೂರು ಬಳಿಯಿಂದ ಜನ್ನಘಟ್ಟದ ಪಂಪಿಂಗ್‌ ಸ್ಟೇಷನ್‌ವರೆಗೆ ಕಾಲುವೆಯ ಒಂದು ಬದಿಯಲ್ಲಿ ಸಸಿ ನೆಡಲಾಗುತ್ತಿದೆ.

ಜಿಲ್ಲೆಯಲ್ಲಿ ನದಿಯಂತಹ ಮೇಲ್ಮೈ ನೀರಿನ ಮೂಲಗಳಿಲ್ಲ. ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿ ಗಿಡಗಳನ್ನು ನೆಟ್ಟು ಬೆಳೆಸುವುದು ನಿಜಕ್ಕೂ ಸವಾಲಿನ ಕೆಲಸ. ನೀರಿನ ಕೊರತೆ ನಡುವೆಯೂ ಅರಣ್ಯ ಇಲಾಖೆ ಅಧಿಕಾರಿಗಳ ಅವಿರತ ಪರಿಶ್ರಮದ ಫಲವಾಗಿ ಕಳೆದೆರಡು ವರ್ಷಗಳಲ್ಲಿ ಜಿಲ್ಲೆಯಲ್ಲಿ ಅರಣ್ಯ ಪ್ರದೇಶವು ಶೇ 9.59ರಷ್ಟು ಹೆಚ್ಚಳವಾಗಿದೆ.

ನೀರಿನ ಸಮಸ್ಯೆಯಿಲ್ಲ: ಕೆ.ಸಿ ವ್ಯಾಲಿ ಕಾಲುವೆಯಲ್ಲಿ ಸದಾ ನೀರು ಹರಿಯುವುದರಿಂದ ಗಿಡಗಳಿಗೆ ನೀರಿನ ಸಮಸ್ಯೆ ಇರುವುದಿಲ್ಲ. ಹೀಗಾಗಿ ಗಿಡಗಳು ಬದುಕುಳಿಯುವ ಪ್ರಮಾಣ ಹೆಚ್ಚಲಿದೆ. ಜತೆಗೆ ಕಾಲುವೆಯಲ್ಲಿ ನೀರು ರಭಸವಾಗಿ ಹರಿಯುವ ಕಾರಣ ಜಾನುವಾರುಗಳು ಗಿಡಗಳನ್ನು ತಿನ್ನುವ ಸಾಧ್ಯತೆ ಕಡಿಮೆ ಎಂಬುದು ಅರಣ್ಯ ಇಲಾಖೆಯ ಲೆಕ್ಕಾಚಾರ. ಕಾಲುವೆಯಲ್ಲಿ ಹರಿಯುವ ನೀರಿನಿಂದಲೇ ಸಸಿಗಳು ಬೆಳೆಯಲಿವೆ.

ಚಿತ್ರೀಕರಣ: ಕಾಲುವೆ ಬದುವಿನ ಜತೆಗೆ ಕೆರೆ ಆವರಣದಲ್ಲಿ ನೀರು ನಿಲ್ಲದ ಪ್ರದೇಶ, ಗೋಮಾಳದಲ್ಲೂ ಗಿಡಗಳನ್ನು ನೆಡಲು ಉದ್ದೇಶಿಸಲಾಗಿದೆ. ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ 6 ಮೀಟರ್‌ ಅಂತರವಿರುವಂತೆ ಗುಂಡಿ ತೆಗೆಸಲಾಗುತ್ತಿದೆ. ಬೀಟೆ, ತೇಗ, ಹೊನ್ನೆ, ನೇರಳೆ, ಹೆಬ್ಬೇವು, ಮಹಾಗನಿ, ಶ್ರೀಗಂಧ ಸೇರಿದಂತೆ ವಿವಿಧ ಬಗೆಯ ಗಿಡಗಳನ್ನು ನೆಡಲಾಗುತ್ತಿದೆ. ಗಿಡ ನೆಡುವ ಕಾರ್ಯಕ್ರಮವನ್ನು ಡ್ರೋಣ್ ಕ್ಯಾಮೆರಾ ಮೂಲಕ ಚಿತ್ರೀಕರಿಸಲಾಗಿದೆ.

ನರೇಗಾ ಅನುದಾನ: ಜಿಲ್ಲಾಡಳಿತವು ಈ ವರ್ಷ 21 ಲಕ್ಷ ಸಸಿ ನೆಡುವ ಗುರಿ ಹೊಂದಿದೆ. ಅರಣ್ಯ ಇಲಾಖೆಯು ನರೇಗಾ ಅನುದಾನ ಬಳಕೆ ಮಾಡಿಕೊಂಡು ಕೆ.ಸಿ ವ್ಯಾಲಿ ಕಾಲುವೆಯ ಬದುಗಳಲ್ಲಿ ಸಸಿಗಳನ್ನು ನೆಡಲಿದೆ.

ಕಾಲುವೆ ಬದುಗಳಲ್ಲಿ ಜೆಸಿಬಿ ಅಥವಾ ಬೃಹತ್‌ ಯಂತ್ರೋಪಕರಣ ಬಳಸಿ ಸಸಿ ನಾಟಿಗೆ ಗುಂಡಿ ತೆಗೆಯಲು ಸಾಧ್ಯವಿಲ್ಲ. ಹೀಗಾಗಿ ನರೇಗಾ ಅಡಿ ಜನರಿಂದಲೇ ಗಿಡ ತೆಗೆಸಲಾಗುತ್ತಿದೆ. ಇದರಿಂದ ನೂರಾರು ಜನರಿಗೆ ಉದ್ಯೋಗಾವಕಾಶ ಸಿಕ್ಕಿದ್ದು, ಅರಣ್ಯ ಇಲಾಖೆ ಯೋಜನೆಯು ನಿರುದ್ಯೋಗಿಗಳ ಪಾಲಿಗೆ ವರದಾನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.