
ಕೋಲಾರ: ಅರಣ್ಯ ಇಲಾಖೆಯ ಕಿರುಕುಳದಿಂದ ಭೂಮಿ ಕಳೆದುಕೊಂಡಿರುವ ಜಿಲ್ಲೆಯ ರೈತರ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕೆಂದು ಆಗ್ರಹಿಸಿ ಭೂ ಸಂತ್ರಸ್ತರ ಹೋರಾಟ ಸಮಿತಿ ಹಾಗೂ ಕೆಪಿಆರ್‌ಎಸ್ ನೇತೃತ್ವದಲ್ಲಿ ಬುಧವಾರ ಜಿಲ್ಲಾಡಳಿತ ಭವನದ ಎದುರು ಬೃಹತ್ ಪ್ರತಿಭಟನೆ ನಡೆಯಿತು.
ಅರಣ್ಯ ಇಲಾಖೆ ವಿರುದ್ಧ ಘೋಷಣೆ ಹಾಕಿ, ರೈತರ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯ ಮಾಡಿದರು. ರೈತರ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಬಾರದೆಂದು ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದರೂ ಪದೇಪದೇ ತೊಂದರೆ ಮಾಡಿ ಪ್ರಕರಣ ದಾಖಲಿಸುತ್ತಿದ್ದಾರೆ ಎಂದು ಆರೋಪಿಸಿದರು.
ರೈತ ಸಂಘದ ಹಿರಿಯ ಮುಖಂಡ ಎಂ.ಗೋಪಾಲ್ ಮಾತನಾಡಿ, ‘ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಯು ಪೊಲೀಸರ ನೆರವಿನೊಂದಿಗೆ ರಾತ್ರೋರಾತ್ರಿ ರೈತರ ಜಮೀನುಗಳಲ್ಲಿ 1.50 ಲಕ್ಷಕ್ಕಿಂತ ಹೆಚ್ಚು ಮಾವಿನ ಮರಗಳು, ತೆಂಗಿನ ಮರಗಳು, ವಿವಿಧ ಜಾತಿಯ ಬೆಲೆ ಬಾಳುವ ಮರಗಳು, ತೋಟಗಾರಿಕೆ ಬೆಳೆಗಳು, ಜೊತೆಗೆ ಹನಿ ನೀರಾವರಿ, ಬೋರ್‌ವೆಲ್‌ಗಳು, ನೆಟ್ ಹೌಸ್‌ಗಳು, ಕಾಂಪೌಂಡ್‌ಗಳನ್ನು ಜೆಸಿಬಿ ಯಂತ್ರ ಬಳಸಿ ದ್ವಂಸ ಮಾಡಿದ್ದಾರೆ. ಈ ಹಾನಿಯ ಹೊಣೆಯನ್ನು ಅರಣ್ಯ ಇಲಾಖೆ ಹೊರಬೇಕು. ರೈತರಿಗೆ ಕೂಡಲೇ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.
ಸಿಐಟಿಯು ಮುಖಂಡ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ, ‘ಸ್ವಾತಂತ್ರ‍್ಯ ಪೂರ್ವದಲ್ಲಿ ಅಧಿಸೂಚನೆಯಾದ ಕಿರು ಅರಣ್ಯ, ಗ್ರಾಮ ಅರಣ್ಯ ಇತ್ಯಾದಿ ಆದೇಶವಿದ್ದರೂ ಅರಣ್ಯ ಅಧಿಕಾರಿಗಳು ಈ ಆದೇಶಗಳನ್ನು ಉಲ್ಲಂಘಿಸಿದ್ದಾರೆ. ಜಿಲ್ಲಾಧಿಕಾರಿ ಈ ಕಂದಾಯ ಭೂಮಿಗಳನ್ನು ಆಹಾರ ಅಭಾವ ನೀಗಿಸಲು ಅಂದಿನ ಮಹಾರಾಜರ ಆದೇಶದ ಮೇರೆಗೆ ಸಕ್ಷಮ ಪ್ರಾಧಿಕಾರದಲ್ಲಿ ಕಾನೂನು ಬದ್ಧವಾಗಿ ರೈತರಿಗೆ ಕಂದಾಯ ಗೋಮಾಳದಲ್ಲಿ ಜಮೀನು ಮಂಜೂರಾತಿ ನೀಡಿದ್ದಾರೆ. ಅದರಂತೆ ನೂರಾರು ವರ್ಷಗಳಿಂದ ರೈತರು ವ್ಯವಸಾಯ ಮಾಡಿಕೊಂಡು ಜೀವನೋಪಾಯ ಮಾಡುತ್ತಿದ್ದಾರೆ. ಈ ಅಧಿಸೂಚನೆಗಳು ಹಾಗೇ ಇದ್ದು ಅರಣ್ಯ ಇಲಾಖೆಯವರು ಅದನ್ನೇ ನೆಪ ಮಾಡಿಕೊಂಡು ಕಂದಾಯ ಇಲಾಖೆಯಲ್ಲಿ ಮಂಜೂರಾಗಿರುವ ರೈತರ ಗೋಮಾಳ ಹಾಗೂ ಹಿಡುವಳಿ ಜಮೀನುಗಳನ್ನು ಅರಣ್ಯಭೂಮಿ ಎಂದು ತಪ್ಪಾಗಿ ಅರ್ಥೈಸಿ ಒತ್ತುವರಿ ಹೆಸರಿನಲ್ಲಿ ಕಾನೂನು ಬಾಹಿರವಾಗಿ ಭೂ ಕಬಳಿಕೆ ಮಾಡುತ್ತಿದ್ದಾರೆ. ಇದನ್ನು ತಡೆಯಲು ಆದೇಶ ಮಾಡಬೇಕು’ ಎಂದರು.
ಸಮಿತಿಯ ಸಂಚಾಲಕ ಆರ್.ಶ್ರೀನಿವಾಸನ್ ಮಾತನಾಡಿ, ‘ಅರಣ್ಯ ಕಾಯ್ದೆಗಳು, ಸುಪ್ರೀಂ ಕೋರ್ಟ್ ತೀರ್ಪುಗಳು ಮೂಲ ಅರಣ್ಯ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಯಾವುದೇ ಕಂದಾಯ, ಗೋಮಾಳ ಜಮೀನುಗಳಿಗೆ ಹಾಗೂ ರೈತರ ಹಿಡುವಳಿ ಜಮೀನುಗಳಿಗೆ ಸಂಬಂಧವಿಲ್ಲ. ಎಸ್‌ಐಟಿ ವ್ಯಾಪ್ತಿಗೂ ಬರುವುದಿಲ್ಲ. ಆದರೂ ಅರಣ್ಯ ಇಲಾಖೆಯವರು ಅನವಶ್ಯಕವಾಗಿ ಕಂದಾಯ ಅಧಿಕಾರಿಗಳನ್ನು ಹಾಗೂ ರೈತರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ರೈತರ ಕಂದಾಯ ಗೋಮಾಳ ಜಮೀನುಗಳಿಗೆ ಹೋಗದಂತೆ ಸೂಕ್ತ ಆದೇಶ ನೀಡಬೇಕು’ ಎಂದು ಮನವಿ ಮಾಡಿದರು.
ಜಿಲ್ಲೆಯಲ್ಲಿ ಸರ್ಕಾರಿ ಗೋಮಾಳ, ಕಂದಾಯ ಜಮೀನುಗಳನ್ನು ಸಕ್ಷಮ ಪ್ರಾಧಿಕಾರದಲ್ಲಿ ಕಾನೂನು ಬದ್ಧವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಇತರೆ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ರೈತರಿಗೆ ನೀಡಲಾಗಿದೆ. ಅರಣ್ಯ ಅಧಿಕಾರಿಗಳ ಸೂಚನೆಯ ಮೇರೆಗೆ ಕಂದಾಯ ಇಲಾಖೆಯ ಅಧಿಕಾರಿಗಳು ಕಾನೂನು ಬಾಹಿರವಾಗಿ 2021–22ರಲ್ಲಿ ಸರ್ಕಾರಿ ಗೋಮಾಳ ಜಮೀನುಗಳನ್ನು ಪಹಣಿ ಕಲಂ 9ರಲ್ಲಿ ಅರಣ್ಯ ಎಂದು ಇಂಡೀಕರಿಸಲಾಗಿದೆ. ಇದು ಕಾನೂನು ಬಾಹಿರವಾಗಿರುವುದರಿಂದ ಈ ತಕ್ಷಣ ಇವುಗಳನ್ನು ತೆಗೆಯಲು ಜಿಲ್ಲಾಧಿಕಾರಿ ಆದೇಶ ಮಾಡಬೇಕು. ಮುಂದೆ ಯಾವುದೇ ಕಂದಾಯ ಭೂಮಿಯಲ್ಲಿ ಅರಣ್ಯ ಎಂದು ಇಂಡೀಕರಿಸದಿರಲು ಕಂದಾಯ ಇಲಾಖೆಗೆ ಸೂಚನೆ ನೀಡಬೇಕು ಎಂದರು
ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಮಾತನಾಡಿ, ‘ಅರಣ್ಯ ಇಲಾಖೆಯವರು ಫಾರೆಸ್ಟ್ ಸೆಂಟಲ್‌ಮೆಂಟ್ ಪ್ರತಿಯನ್ನು ಯಾರಿಗೂ ತೋರಿಸದೆ, ಕಿರು ಅರಣ್ಯ ನೋಟಿಫಿಕೇಷನ್ ತೋರಿಸಿ ರೈತರ ಜಮೀನುಗಳನ್ನು ಒತ್ತುವರಿ ಹೆಸರಿನಲ್ಲಿ ನಾಶಪಡಿಸುತ್ತಿದ್ದಾರೆ. ಎಸ್‌ಐಟಿ ರಚನೆಯಾಗಿದ್ದರೂ ಅರಣ್ಯ ಇಲಾಖೆಯವರು ಒತ್ತುವರಿ ಹೆಸರಿನಲ್ಲಿ ವಿನಾ ಕಾರಣ ರೈತರ ಕಂದಾಯ ಗೋಮಾಳ ಜಮೀನುಗಳಲ್ಲಿ ಅತಿಕ್ರಮಣ ಮಾಡಿ ದೌರ್ಜನ್ಯದಿಂದ ರೈತರಿಗೆ ತೊಂದರೆ ನೀಡುತ್ತಿದ್ದಾರೆ. ಈ ದೌರ್ಜನ್ಯವನ್ನು ತಡೆಯಲು ಆದೇಶ ನೀಡಬೇಕು’ ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಎಂ.ಆರ್.ರವಿ, ‘ಯಾವುದೇ ಕಾರಣಕ್ಕೂ ರೈತರಿಗೆ ತೊಂದರೆ ಕೊಡಬಾರದೆಂದು ಆದೇಶ ಮಾಡಲಾಗಿದೆ. ತೊಂದರೆ ಕೊಟ್ಟರೆ ನನಗೆ ದೂರು ಕೊಡಿ. ತಮ್ಮ ಮನವಿಯನ್ನು ಸರ್ಕಾರದ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲಾಗುವುದು’ ಎಂದರು
ಮುಖಂಡರಾದ ಅಬ್ಬಣಿ ಶಿವಪ್ಪ, ಟಿ.ಎಂ.ವೆಂಕಟೇಶ್, ಪಿ.ಆರ್.ನವೀನ್ ಕುಮಾರ್, ಹರಟಿ ಪ್ರಕಾಶ್, ಗೋವಿಂದಪ್ಪ, ಲೋಕೇಶ್, ಮಂಜುನಾಥ್, ಗಂಗಮ್ಮ, ನಾರಾಯಣರೆಡ್ಡಿ, ರಾಮಕೃಷ್ಣಪ್ಪ, ನಯಾಜ್, ಲಾಯರ್ ವೆಂಕಟೇಶ್, ಶ್ರೀನಿವಾಸ್, ಮಂಜುಳಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.