ADVERTISEMENT

ಸರ್ಕಾರದ ಸೌಲಭ್ಯ ಪಡೆಯಿರಿ

​ಪ್ರಜಾವಾಣಿ ವಾರ್ತೆ
Published 11 ಮೇ 2019, 15:13 IST
Last Updated 11 ಮೇ 2019, 15:13 IST

ಕೋಲಾರ: ‘ಸಾರ್ವಜನಿಕರು ಗ್ರಾಮೋದ್ಧಾರ ಕೆಂದ್ರಗಳ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೌಲಭ್ಯ ಪಡೆಯಬೇಕು’ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಪ್ರಾದೇಶಿಕ ವ್ಯವಸ್ಥಾಪಕ ಎಸ್.ವಸಂತ್‌ಕುಮಾರ್‌ ಸಲಹೆ ನೀಡಿದರು.

ತಾಲ್ಲೂಕಿನ ದೊಡ್ಡಹಸಾಳ ಗ್ರಾಮದಲ್ಲಿ ಇತ್ತೀಚೆಗೆ ನಡೆದ ದೇಸಿ ಸ್ಕಿಲ್ಸ್ ಸಂಸ್ಥೆಯ ಗ್ರಾಮೋದ್ಧಾರ ಕೇಂದ್ರಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ‘ಗ್ರಾಮೋದ್ಧಾರ ಕೇಂದ್ರಗಳ ಅಭಿವೃದ್ಧಿಗಾಗಿ ಬ್ಯಾಂಕ್‌ನಿಂದ ಮುದ್ರಾ ಯೋಜನೆಯಡಿ ಸಾಲ ಸೌಲಭ್ಯ ನೀಡುತ್ತೇವೆ’ ಎಂದರು.

‘ಸಾರ್ವಜನಿಕರ ಸೇವೆಗಾಗಿ ಬ್ಯಾಂಕ್‌ನಿಂದ ಗ್ರಾಮೋದ್ಧಾರ ಕೇಂದ್ರಗಳಲ್ಲಿ ಸಿಎಸ್‌ಪಿ ಕೇಂದ್ರ ತೆರೆಯಲಾಗುವುದು. ಸಾರ್ವಜನಿಕರು ದಿನನಿತ್ಯದ ಆರ್ಥಿಕ ವ್ಯವಹಾರ ಸೇವೆಯನ್ನು ಗ್ರಾಮೋದ್ಧಾರ ಕೇಂದ್ರಗಳಿಂದ ಪಡೆಯಬಹುದು. ಸ್ತ್ರೀಶಕ್ತಿ ಗುಂಪುಗಳಿಗೆ ಸಾಲ ಕೊಡಲು ಅನುಮತಿ ನೀಡುತ್ತೇವೆ. ಪಿಂಚಣಿ ಯೋಜನೆ ಫಲಾನುಭವಿಗಳು ಗ್ರಾಮೋದ್ಧಾರ ಕೇಂದ್ರಗಳಲ್ಲಿ ಅನುಕೂಲ ಪಡೆಯಬಹುದು’ ಎಂದು ವಿವರಿಸಿದರು.

ADVERTISEMENT

ಸರ್ಕಾರದ ಸೇವೆ ಪಡೆಯಲು ಗ್ರಾಮೋದ್ಧಾರ ಕೇಂದ್ರಗಳು ಅನುಕೂಲವಾಗಿವೆ. ಈ ಕೇಂದ್ರಗಳು ಸೌರಶಕ್ತಿ ಉತ್ಪನ್ನಗಳು ರಿಯಾಯಿತಿ ದರದಲ್ಲಿ ಸಿಗುತ್ತವೆ. ಕೇಂದ್ರಗಳಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ’ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂಗಲ್ ರಾಯಗೌಡ ಹೇಳಿದರು.

ಸೇವೆ ನೀಡುತ್ತಿದೆ: ‘ಸಂಸ್ಥೆಯು ಒಂದು ವರ್ಷದಿಂದ ರಾಜ್ಯದಲ್ಲಿ ಅಧಿಕೃತವಾಗಿ ಗ್ರಾಮೀಣ ಭಾಗದ ಜನರಿಗೆ ನಾಗರೀಕ, ಆರೋಗ್ಯ, ಶಿಕ್ಷಣ ಮತ್ತು ಮಾಹಿತಿ ತಂತ್ರಜ್ಞಾನ ಸೇವೆ ನೀಡುತ್ತಿದೆ. ಜನರ ಏಳಿಗೆ ಹಾಗೂ ಸರ್ಕಾರದ ಸೇವೆಗಳನ್ನು ಫಲಾನುಭವಿಗಳಿಗೆ ತಲುಪಿಸುವ ಉದ್ದೇಶದಿಂದ ಈ ಸಂಸ್ಥೆ ಆರಂಭಿಸಲಾಗಿದೆ’ ಎಂದು ದೇಸಿ ಸ್ಕಿಲ್ಸ್ ಸಂಸ್ಥೆ ಸ್ಥಾಪಕ ಕೌಶಿಕ್ ಮಾಹಿತಿ ನೀಡಿದರು.

‘ಸ್ವಾಮಿ ವಿವೇಕಾನಂದರು ಹೇಳಿದಂತೆ ದೇಶ ಅಭಿವೃದ್ಧಿ ಪಥದಲ್ಲಿ ಸಾಗಲು ಮೊದಲು ಗ್ರಾಮಗಳು ಅಭಿವೃದ್ಧಿಯಾಗಬೇಕು. ಯುವಕ ಯುವತಿಯರು ಹಾಗೂ ಮಹಿಳೆಯರ ಸಶಕ್ತೀಕರಣ ಆಗಬೇಕು. ಈ ನಿಟ್ಟಿನಲ್ಲಿ ಸಂಸ್ಥೆಯು ರಾಜ್ಯದ 6,044 ಗ್ರಾಮಗಳಲ್ಲಿ ಗ್ರಾಮೋದ್ಧಾರ ಕೇಂದ್ರ ತೆರೆದಿದೆ’ ಎಂದು ವಿವರಿಸಿದರು.

ದೇಸಿ ಸ್ಕಿಲ್ಸ್‌ ಸಂಸ್ಥೆ ಕಾರ್ಯದರ್ಶಿ ರಾಮಣ್ಣ, ಜಿಲ್ಲಾ ಸಮನ್ವಯಾಧಿಕಾರಿಗಳಾದ ಅಶ್ವತ್ಥ್‌ಗೌಡ, ಕಿರಣ್‌ಕುಮಾರ್‌, ಛತ್ರಕೋಡಿಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಕುಮಾರ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.