ಕೋಲಾರ: ‘ಜಿಲ್ಲಾ ಸರ್ಕಾರಿ ನೌಕರರ ಸಂಘದ ಚಟುವಟಿಕೆಗಳಿಗೆ 5 ಎಕರೆ ಜಮೀನು ಶೀಘ್ರ ಮಂಜೂರು ಮಾಡಲು ಕ್ರಮ ವಹಿಸಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಮುನಿರತ್ನ ಜಿಲ್ಲಾಧಿಕಾರಿಗೆ ಸೂಚಿಸಿದರು.
ಸಂಘಕ್ಕೆ ಜಮೀನು ಕೋರಿ ಇಲ್ಲಿ ಶನಿವಾರ ಸಚಿವ ಮುನಿರತ್ನ ಅವರಿಗೆ ಮನವಿ ಸಲ್ಲಿಸಿದ ಜಿಲ್ಲಾ ಸರ್ಕಾರಿ ನೌಕರರ ಸಂಘದ ಸದಸ್ಯರು, ‘ಈಗಾಗಲೇ ಸಂಘದ ನೂತನ ಭವನ ಸೇರಿದಂತೆ ನೌಕರರ ಕಲ್ಯಾಣ ಚಟುವಟಿಕೆಗೆ ಅಗತ್ಯ ಜಮೀನನು ಗುರುತಿಸಿ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಮನವರಿಕೆ ಮಾಡಿಕೊಟ್ಟರು.
‘ಜಿಲ್ಲೆಯಲ್ಲಿ 18 ಸಾವಿರ ಮಂದಿ ಸರ್ಕಾರಿ ನೌಕರರಿದ್ದಾರೆ. ನೌಕರರಿಗೆ ಅಗತ್ಯವಾದ ಸಮುದಾಯ ಭವನ, ಕ್ರೀಡಾ ಸಮುಚ್ಚಯ, ಸಭಾ ಭವನ ಸೇರಿದಂತೆ ಸುಂದರ ಕಟ್ಟಡ ನಿರ್ಮಿಸಲು ರಾಜ್ಯ ಸರ್ಕಾರಿ ನೌಕರರ ಸಂಘ ಆರ್ಥಿಕ ನೆರವು ನೀಡಲು ಒಪ್ಪಿದೆ’ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ಸಚಿವರಿಗೆ ತಿಳಿಸಿದರು.
ಸದಸ್ಯರ ಮನವಿಗೆ ಸ್ಪಂದಿಸಿದೆ ಸಚಿವರು, ‘ನೌಕರರ ಸಂಘದ ಬೇಡಿಕೆ ಶೀಘ್ರವೇ ಈಡೇರಿಸಲು ಕ್ರಮ ವಹಿಸಿ. ಜಮೀನು ಮಂಜೂರಾತಿ ಸಂಗತಿ ನನ್ನ ಗಮನಕ್ಕೆ ತನ್ನಿ’ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಆರ್.ಸೆಲ್ವಮಣಿ, ‘ನೌಕರರ ಸಂಘಕ್ಕೆ ಜಮೀನು ನೀಡುವ ಕುರಿತು ಪ್ರಸ್ತಾವ ಸಲ್ಲಿಸಿದ್ದು, ಜಮೀನು ಮಂಜೂರಾತಿ ಪ್ರಕ್ರಿಯೆ ಚಾಲನೆಯಲ್ಲಿದೆ’ ಎಂದು ವಿವರಿಸಿದರು.
ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ, ಖಜಾಂಚಿ ವಿಜಯ್, ಗೌರವಾಧ್ಯಕ್ಷ ಶ್ರೀನಿವಾಸರೆಡ್ಡಿ, ಉಪಾಧ್ಯಕ್ಷ ಪುರುಷೋತ್ತಮ್, ಕಾರ್ಯದರ್ಶಿ ಶಿವಕುಮಾರ್, ಜಂಟಿ ಕಾರ್ಯದರ್ಶಿ ಮಂಜುನಾಥ್, ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ನಾರಾಯಣಸ್ವಾಮಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.