
ಕೋಲಾರ: ನಿವೃತ್ತ ಐಎಎಸ್ ಅಧಿಕಾರಿ ದಿವಂಗತ ಸಿ.ಮುನಿಸ್ವಾಮಿ ಅವರ ಪತ್ನಿ ಮಂಗಮ್ಮ ಮುನಿಸ್ವಾಮಿ ಮಂಗಳವಾರ 75ನೇ ವರ್ಷಕ್ಕೆ ಕಾಲಿಡುತ್ತಿದ್ದು, ಅಭಿಮಾನಿಗಳು, ಕುಟುಂಬದವರ ನೇತೃತ್ವದಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ನಗರದ ಹೊರವಲಯದ ಸಿ.ಮುನಿಸ್ವಾಮಿ ಪಬ್ಲಿಕ್ ಶಾಲೆ ಆವರಣದಲ್ಲಿ ಬೆಳಿಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಶಾಸಕರು, ಮುಖಂಡರು, ಕಾರ್ಯಕರ್ತರು, ಕುಟುಂಬದ ಸದಸ್ಯರು, ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ.
ಮಂಗಮ್ಮ 1950ರ ನ. 11ರಂದು ಮುದಿಮಡಗು ಚಿಕ್ಕಗುರಪ್ಪ ಮತ್ತು ಶ್ಯಾಮಲಮ್ಮ ಅವರ ಪುತ್ರಿಯಾಗಿ ಜನಿಸಿದರು. ಅದೇ ಗ್ರಾಮದಲ್ಲಿ ಪ್ರಾಥಮಿಕ ಹಾಗೂ ಕೋಲಾರದಲ್ಲಿ ಕಾಲೇಜು ಶಿಕ್ಷಣ ಮುಗಿಸಿ 1970ರಲ್ಲಿ ಸಿ.ಮುನಿಸ್ವಾಮಿ ಅವರನ್ನು ವಿವಾಹವಾದರು.
ರಾಜಕೀಯ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದಾರೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ, ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. 1999ರಲ್ಲಿ ಕೋಲಾರ ಲೋಕಸಭೆಗೆ ಸ್ಪರ್ಧಿಸಿ ಪರಾಭವಗೊಂಡರೂ ಮತ್ತೆ ಜಿ.ಪಂ ಅಧ್ಯಕ್ಷರಾಗಿ 5 ವರ್ಷ ಆಡಳಿತ ನಡೆಸಿದರು. ಪತಿ ಸಿ.ಮುನಿಸ್ವಾಮಿ ಹೆಸರಿನಲ್ಲಿ ಸಿ.ಮುನಿಸ್ವಾಮಿ ಚಾರಿಟಬಲ್ ಟ್ರಸ್ಟ್ ಸ್ಥಾಪಿಸಿ ಕುಂಬಾರಹಳ್ಳಿಯಲ್ಲಿ ಸಿ.ಮುನಿಸ್ವಾಮಿ ಪಬ್ಲಿಕ್ ಶಾಲೆ ತೆರೆದರು.
ಡಾ.ಪೂರ್ಣಿಮಾ, ನಾಗೇಶ್ ಬಾಬು, ಮಲ್ಲೇಶ್ ಬಾಬು ಅವರು ಮಂಗಮ್ಮ ಅವರ ಮಕ್ಕಳು. ಪೂರ್ಣಿಮಾ ಅವರನ್ನು ವೈದ್ಯರನ್ನಾಗಿಸಿ, ಐಎಎಸ್ ಅಧಿಕಾರಿ ಮಂಜುನಾಥ್ ಪ್ರಸಾದ್ ಜೊತೆ ವಿವಾಹ ಮಾಡಿಕೊಟ್ಟರು. ನಾಗೇಶ್ ಬಾಬು ನಾಗರಿಕ ವಿಮಾನಯಾನದಲ್ಲಿ ಪೈಲಟ್ ಆಗಿಸಿ, ಪೈಲಟ್ ಆಗಿರುವವರನ್ನೇ ಸೊಸೆಯನ್ನಾಗಿಸಿಕೊಂಡರು.
ಕಿರಿಯ ಪುತ್ರ ಸಂಸದ: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕಿರಿಯ ಪುತ್ರ ಎಂ.ಮಲ್ಲೇಶ್ ಬಾಬು, ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಬಾರಿ ಸ್ಪರ್ಧಿಸಿ ಪರಾಭವಗೊಂಡರು. ನಂತರ 2024ರ ಲೋಕಸಭೆ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಿ ಗೆಲ್ಲುವ ಮೂಲಕ ತಂದೆ ಸಿ.ಮುನಿಸ್ವಾಮಿ ಅವರ ಆಸೆ ಪೂರೈಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.