ಕೋಲಾರ: ಕೋವಿಡ್ 2ನೇ ಅಲೆ ಭೀತಿಯ ನಡುವೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಗೊಂದಲ ನಿವಾರಣೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಫೋನ್–ಇನ್ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಯಿತು.
400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕರೆ ಮಾಡಿ, ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳನ್ನು ಸಂಪರ್ಕಿಸಿ ಪರೀಕ್ಷೆಗೆ ಸಂಬಂಧಿಸಿದಂತೆ ಗೊಂದಲ ಪರಿಹರಿಸಿಕೊಂಡರು. ಗ್ರಾಮೀಣ ಭಾಗದ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಕರೆ ಮಾಡಿದ್ದು ವಿಶೇಷವಾಗಿತ್ತು.
ಪ್ರಶ್ನೆ ಕೇಳಿದ ಬಹುಪಾಲು ವಿದ್ಯಾರ್ಥಿಗಳಲ್ಲಿ ಕೋವಿಡ್ ಮತ್ತು ಪರೀಕ್ಷಾ ಭಯ ಕಾಣಲಿಲ್ಲ. ಪ್ರತಿಯೊಬ್ಬರೂ ಪರೀಕ್ಷಾ ಸಿದ್ಧತೆ, ಪಠ್ಯಕ್ರಮ ಕಡಿತ, ಪರೀಕ್ಷಾ ವಿಧಾನ, ಪ್ರಶ್ನೆಪತ್ರಿಕೆ ಮಾದರಿ ಬಗ್ಗೆ ಪ್ರಶ್ನೆ ಕೇಳಿ ಗೊಂದಲ ಪರಿಹರಿಸಿಕೊಂಡರು. ಯಾವುದೇ ವಿದ್ಯಾರ್ಥಿ ಕೋವಿಡ್ 2ನೇ ಅಲೆಯ ಆತಂಕದ ಬಗ್ಗೆ ಚಕಾರವೆತ್ತಲಿಲ್ಲ.
ಆದರೆ, ಕಾರ್ಯಕ್ರಮಕ್ಕೆ ಕರೆ ಮಾಡಿದ ಕೆಲ ಪೋಷಕರಲ್ಲಿ ಕೆಲವರು ಕೋವಿಡ್ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಕೆಲ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ನಡೆಯುವುದೇ ಎಂದು ಪ್ರಶ್ನಿಸಿದರು.
‘ಕೋವಿಡ್ ನಡುವೆ ಪರೀಕ್ಷೆ ನಡೆಯುವುದೇ ಎಂಬ ಗೊಂದಲದಲ್ಲಿರುವ ವಿದ್ಯಾರ್ಥಿಗಳ ಆತಂಕ ನಿವಾರಿಸಲು ಇಲಾಖೆ ನಡೆಸಿದ ಫೋನ್–ಇನ್ ಕಾರ್ಯಕ್ರಮ ಪ್ರಮುಖ ಪಾತ್ರ ವಹಿಸಿದೆ. ಕಾರ್ಯಕ್ರಮಕ್ಕೆ ಕರೆ ಮಾಡಿದ ವಿದ್ಯಾರ್ಥಿಗಳು ಹಾಗೂ ಪೋಷಕರು 562ಕ್ಕೂ ಹೆಚ್ಚು ಪ್ರಶ್ನೆ ಕೇಳಿದ್ದು, ಸಂಪನ್ಮೂಲ ವ್ಯಕ್ತಿಗಳಿಂದ ಸಮರ್ಪಕ ಉತ್ತರ ನೀಡಲಾಗಿದೆ’ ಎಂದು ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೃಷ್ಣಮೂರ್ತಿ ತಿಳಿಸಿದರು.
‘ಎಸ್ಸೆಸ್ಸೆಲ್ಸಿಯು ಶೈಕ್ಷಣಿಕ ಜೀವನದ ಪ್ರಮುಖ ಘಟ್ಟವಾಗಿದ್ದು, ವಿದ್ಯಾರ್ಥಿಗಳು ಕೋವಿಡ್ ಸಂದರ್ಭದಲ್ಲಿ ಹೊರಗೆ ಓಡಾಡಿ ಸೋಂಕಿಗೆ ತುತ್ತಾಗದೆ ಮನೆಯಲ್ಲೇ ಇದ್ದು ಅಭ್ಯಾಸ ಮಾಡಬೇಕು. ಈಗಾಗಲೇ ಇಲಾಖೆಯು ಮಕ್ಕಳಿಗೆ ಅಧ್ಯಾಯವಾರು ಪ್ರಶ್ನೆಪತ್ರಿಕೆ ನೀಡಿದೆ. ‘ನನ್ನನ್ನೊಮ್ಮೆ ಗಮನಿಸಿ’ ಪ್ರಶ್ನೋತ್ತರ ಮಾಲಿಕೆ ಒದಗಿಸಿದ್ದು, ಇದರ ಸದುಪಯೋಗ ಪಡೆಯುವಂತೆ ತಿಳಿಸಲಾಯಿತು’ ಎಂದು ಹೇಳಿದರು.
ಪಠ್ಯಪುಸ್ತಕ ಓದಿ: ‘ಪರೀಕ್ಷಾ ವಿಧಾನಕ್ಕೆ ಸಂಬಂಧಿಸಿದಂತೆ ಮಕ್ಕಳಿಂದ 65 ಪ್ರಶ್ನೆ ಬಂತು. ಕನ್ನಡ ಮತ್ತು ಇಂಗ್ಲಿಷ್ ವಿಷಯಕ್ಕೆ ಸಂಬಂಧಿಸಿದಂತೆ ತಲಾ 65 ಪ್ರಶ್ನೆ, ಹಿಂದಿಗೆ 75 ಪ್ರಶ್ನೆ, ಗಣಿತ ವಿಷಯಕ್ಕೆ 125 ಪ್ರಶ್ನೆ, ವಿಜ್ಞಾನ ವಿಷಯಕ್ಕೆ 111 ಪ್ರಶ್ನೆ ಹಾಗೂ ಸಮಾಜ ವಿಜ್ಞಾನ ವಿಷಯದ ಸಂಬಂಧ 56 ಪ್ರಶ್ನೆಗಳನ್ನು ಮಕ್ಕಳು ಕೇಳಿದರು’ ಎಸ್ಸೆಸ್ಸೆಲ್ಸಿ ಪರೀಕ್ಷಾ ಜಿಲ್ಲಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ವಿವರಿಸಿದರು.
‘ಅತಿ ಹೆಚ್ಚು ಅಂಕ ಗಳಿಸಲು ಪಠ್ಯಪುಸ್ತಕ ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು. ಪ್ರತಿ ಅಧ್ಯಾಯದ ಅಭ್ಯಾಸದಲ್ಲಿನ ಪ್ರಶ್ನೆಗಳಿಗೆ ಉತ್ತರಿಸಬೇಕು. ಇಲಾಖೆ ನೀಡಿರುವ ಅಧ್ಯಾಯವಾರು ಪ್ರಶ್ನೆಪತ್ರಿಕೆ, ‘ನನ್ನನ್ನೊಮ್ಮೆ ಗಮನಿಸಿ’ ಪ್ರಶ್ನೋತ್ತರ ಮಾಲಿಕೆ ಓದಬೇಕು. ಪ್ರಶ್ನೆಗಳಿಗೆ ಉತ್ತರ ಬರೆದು ಅಭ್ಯಾಸ ಮಾಡಬೇಕು’ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪುನರ್ಮನನ: ‘ನಿರಂತರ ಪುನರ್ಮನನ ಮಾಡಿದರೆ ಎಲ್ಲಾ ಉತ್ತರಗಳು ನೆನಪಿನಲ್ಲಿ ಇರುತ್ತವೆ. ಈ ಬಾರಿ ಪ್ರಶ್ನೆ ಪತ್ರಿಕೆ ಸುಲಭವಾಗಿರುತ್ತದೆ. ಶೇ 10ರಷ್ಟು ಮಾತ್ರ ಕಠಿಣ ಪ್ರಶ್ನೆಗಳಿರುತ್ತವೆ. ಪುಸ್ತಕದಲ್ಲಿನ ಮಾಹಿತಿ ಹೊರತುಪಡಿಸಿ ಬೇರೆ ಪ್ರಶ್ನೆ ಕೇಳುವುದಿಲ್ಲ. ಕನ್ನಡ, ಇಂಗ್ಲೀಷ್, ಹಿಂದಿಯಲ್ಲಿ ವ್ಯಾಕರಣ ಕುರಿತಂತೆ ಹೆಚ್ಚು ಪ್ರಶ್ನೆಗಳಿರುತ್ತವೆ. ಗಣಿತದಲ್ಲಿ 4 ಅಂಕಗಳ ಪ್ರಶ್ನೆ, ಗ್ರಾಫ್ ಲೆಕ್ಕಗಳ ಕುರಿತು ಪ್ರಶ್ನೆ ಬರುತ್ತವೆ’ ಎಂದು ಮಾಹಿತಿ ನೀಡಿದರು.
ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ವಿಷಯ ಪರಿವೀಕ್ಷಕರಾದ ಗಾಯತ್ರಿ, ಶಶಿವಧನ, ಕೃಷ್ಣಪ್ಪ, ವೆಂಕಟೇಶಪ್ಪ, ಸಂಪನ್ಮೂಲ ವ್ಯಕ್ತಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.