ADVERTISEMENT

9ರಂದು ಕೋಲಾರಕ್ಕೆ ಎಚ್‌ಡಿಕೆ ಭೇಟಿ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2020, 14:01 IST
Last Updated 7 ಡಿಸೆಂಬರ್ 2020, 14:01 IST

ಕೋಲಾರ: ‘ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜಿಲ್ಲಾ ಕೇಂದ್ರದ ಆರ್‌ಟಿಒ ಕಚೇರಿ ಸಮೀಪದ ನಿವೇಶನದಲ್ಲಿ ಡಿ.9ರಂದು ಪಕ್ಷದ ನೂತನ ಕಟ್ಟಡ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸುತ್ತಾರೆ’ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.

ಇಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಬುಧವಾರ ಬೆಳಿಗ್ಗೆ 9 ಗಂಟೆಗೆ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ನಡೆಯುತ್ತದೆ. ಬಳಿಕ ಗ್ರಾ.ಪಂ ಚುನಾವಣೆ ಸಂಬಂಧ ನಗರದ ಹೊರವಲಯದ ರತ್ನ ಕಲ್ಯಾಣ ಮಂಟಪದಲ್ಲಿ 10 ಗಂಟೆಗೆ ಕಾರ್ಯಕರ್ತರ ಸಭೆ ನಡೆಯಲಿದೆ’ ಎಂದರು.

‘ಕೋವಿಡ್ ಹಿನ್ನೆಲೆಯಲ್ಲಿ ಸುರಕ್ಷತಾ ಮಾರ್ಗಸೂಚಿಯೊಂದಿಗೆ ಸಭೆ ನಡೆಸಲಾಗುತ್ತಿದೆ. ಪ್ರತಿ ತಾಲ್ಲೂಕಿನಿಂದ ಸುಮಾರು 400 ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ. ಒಟ್ಟಾರೆ 3 ಸಾವಿರ ಮಂದಿ ಸಭೆಗೆ ಬರುವ ನಿರೀಕ್ಷೆಯಿದೆ. ಗ್ರಾ.ಪಂದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾರ್ಯಕರ್ತರು ಒಗ್ಗಟ್ಟಿನಿಂದ ಚುನಾವಣೆ ಎದುರಿಸಬೇಕು’ ಎಂದು ತಿಳಿಸಿದರು.

ADVERTISEMENT

‘ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಅವರು ಪ್ರಥಮ ಬಾರಿಗೆ ಕುಮಾರಸ್ವಾಮಿ ಅವರೊಂದಿಗೆ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಉಭಯ ನಾಯಕರಿಗೆ ಅದ್ಧೂರಿ ಸ್ವಾಗತ ಕೋರಲು ಸಿದ್ಧತೆ ಮಾಡಲಾಗಿದೆ. ನಗರದ ಹೊರವಲಯದ ಕೊಂಡರಾಜನಹಳ್ಳಿಯ ದರ್ಗಾ ಬಳಿಯಿಂದ ಬೈಕ್‌ ರ್‌್ಯಾಲಿ ಮೂಲಕ ನಾಯಕರನ್ನು ಕರೆತರಲಾಗುತ್ತದೆ’ ಎಂದು ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ವಿವರಿಸಿದರು.

‘ಕಾರ್ಯಕರ್ತರ ಸಭೆ ನಡೆಯುವ ಕಲ್ಯಾಣ ಮಂಟಪದೊಳಗೆ 700 ಮಂದಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದರಿಂದ ಕಲ್ಯಾಣ ಮಂಟಪದ ಹೊರಗೆ ಎಲ್‍ಇಡಿ ಪರದೆ ವ್ಯವಸ್ಥೆ ಮಾಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲಿಷ್ಠವಾಗಿದೆ. ಜತೆಗೆ ಪಕ್ಷಕ್ಕೆ ಕಾರ್ಯಕರ್ತರ ದೊಡ್ಡ ಪಡೆಯಿದೆ. ಗ್ರಾಮೀಣ ಭಾಗದಲ್ಲಿ ಕಾರ್ಯಕರ್ತರು ಪಕ್ಷದ ಜತೆ ಗಟ್ಟಿಯಾಗಿ ನಿಂತರೆ ಗ್ರಾ.ಪಂ.ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಯ ಗಳಿಸುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವರ್ಷದೊಳಗೆ ಪೂರ್ಣ: ‘ಪಕ್ಷದ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿದ ಬಳಿಕ ಶೀಘ್ರವೇ ನಿರ್ಮಾಣ ಕೆಲಸ ಆರಂಭಿಸಲಾಗುವುದು. ಕಟ್ಟಡಕ್ಕೆ ಹಣಕಾಸು ನೆರವು ನೀಡಲು ಸಾಕಷ್ಟು ದಾನಿಗಳು ಸಿದ್ಧರಿದ್ದು, 1 ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸುತ್ತೇವೆ’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಸ್.ನಂಜುಂಡಪ್ಪ, ಜೆಡಿಎಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ಗೋಪಾಲಪ್ಪ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಾಮು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.