ADVERTISEMENT

ನಿರಂತರ ಚಿಕಿತ್ಸೆಯಿಂದ ಕಾಯಿಲೆ ವಾಸಿ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2019, 10:20 IST
Last Updated 28 ಡಿಸೆಂಬರ್ 2019, 10:20 IST
ಕೋಲಾರದಲ್ಲಿ ಆಯುಷ್ ಇಲಾಖೆಯಿಂದ ಶುಕ್ರವಾರ ಉಚಿತ ಹೋಮಿಯೋಪತಿ ಆರೋಗ್ಯ ಶಿಬಿರ ನಡೆಯಿತು.
ಕೋಲಾರದಲ್ಲಿ ಆಯುಷ್ ಇಲಾಖೆಯಿಂದ ಶುಕ್ರವಾರ ಉಚಿತ ಹೋಮಿಯೋಪತಿ ಆರೋಗ್ಯ ಶಿಬಿರ ನಡೆಯಿತು.   

ಕೋಲಾರ: ನಗರದ ಕೈವಾರ ತಾತಯ್ಯನವರ ಭಜನಾ ಮಂದಿರದಲ್ಲಿ ಶುಕ್ರವಾರ ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆಯಿಂದ ಶುಕ್ರವಾರ ಉಚಿತ ಹೋಮಿಯೋಪತಿ ಆರೋಗ್ಯ ಶಿಬಿರ ನಡೆಯಿತು.

ಶಿಬಿರ ಉದ್ಘಾಟಿಸಿ ಮಾತನಾಡಿದ ನಿವೃತ್ತ ಡಿವೈಎಸ್ಪಿ ವೆಂಕಟಸ್ವಾಮಿ, ‘ಕಾಯಿಲೆ ಕಾಣಿಸಿಕೊಂಡಾಗ ಚಿಕಿತ್ಸೆ ಪಡೆದುಕೊಂಡು ಸದ್ಯಕ್ಕೆ ಸುಮ್ಮನಾದರೆ ವಾಸಿಯಾಗುವುದಿಲ್ಲ, ನಿರಂತರ ಆಯುರ್ವೇದ ಚಿಕಿತ್ಸೆ ಪಡೆಯುವುದು ಸೂಕ್ತ’ ಎಂದು ತಿಳಿಸಿದರು.

‘ಸರ್ಕಾರ ಭಾರತೀಯ ಆಯುರ್ವೇದ, ಯುನಾನಿ ಹಾಗೂ ಹೋಮಿಯೋಪತಿ ವೈದ್ಯ ಪದ್ಧತಿಗಳಲ್ಲಿ ಅನೇಕ ಆರೋಗ್ಯ ಚಿಕಿತ್ಸಾ ಸೌಲಭ್ಯಗಳನ್ನು ನೀಡುತ್ತಿದೆ. ಇದರ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ’ ಎಂದರು.

ADVERTISEMENT

‘ಹೋಮಿಯೋಪತಿ ಚಿಕಿತ್ಸಾ ಪದ್ಧತಿಯು ಪುರಾತನ ಆರೋಗ್ಯ ಚಿಕಿತ್ಸಾ ಪದ್ಧತಿಯಾಗಿದ್ದು, ಜಿಲ್ಲೆಯಲ್ಲಿ ಹಿರಿಯ ವೈದ್ಯರು ಹೋಮಿಯೋಪತಿ ಪರಂಪರೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಇದೀಗ ಸರ್ಕಾರಿ ಆಸ್ಪತ್ರೆಯಲ್ಲಿಯೇ ಆಯುಷ್ ಇಲಾಖೆ ಹೋಮಿಯೋಪತಿ ಆಸ್ಪತ್ರೆ ತೆರೆದಿರುವುದು ಉತ್ತಮ ಬೆಳವಣಿಗೆ’ ಎಂದು ಹೇಳಿದರು.

‘ಹೋಮಿಯೋಪತಿ ಚಿಕಿತ್ಸಾ ಪದ್ಧತಿಯ ಮೇಲೆ ನಂಬಿಕೆ ಇಡಬೇಕು. ಸುದೀರ್ಘ ಅವಧಿಗೆ ಚಿಕಿತ್ಸೆ ಪಡೆದುಕೊಂಡರೆ ರೋಗ ವಾಸಿಯಾಗುತ್ತದೆ. ದೇಹದ ಮೇಲೆ ದುಷ್ಪರಿಣಾಮಗಳಿಲ್ಲದ ಈ ವೈದ್ಯ ಪದ್ಧತಿ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು’ ಎಂದು ಸಲಹೆ ನೀಡಿದರು.

ವೈದ್ಯ ಡಾ.ಬಸವರಾಜು ಮಾತನಾಡಿ, ‘ಜಿಲ್ಲಾ ಆಯುಷ್ ಇಲಾಖೆಯಡಿ ಕೋಲಾರ, ಮಾಲೂರು ಮತ್ತು ಶ್ರೀನಿವಾಸಪುರಗಳಲ್ಲಿ ಹೋಮಿಯೋಪತಿ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿದ್ದು, ಇದರ ಪ್ರಯೋಜನೆ ಪಡೆದುಕೊಳ್ಳಲು ಸಾರ್ವಜನಿಕರು ಮುಂದಾಗಬೇಕು’ ಎಂದು ಕೋರಿದರು.

ನಿವೃತ್ತ ತಹಸೀಲ್ದಾರ್ ಜಯರಾಮರೆಡ್ಡಿ, ನಿವೃತ್ತ ಉಪನ್ಯಾಸಕ ಕನ್ನಯ್ಯನಾಯ್ಡು, ನಿವೃತ್ತ ಆರೋಗ್ಯಾಧಿಕಾರಿ ರುಕ್ಮಿಣಿಯಮ್ಮ, ಜಿಲ್ಲಾ ಭಾರತ ಸೇವಾದಳ ಅಧ್ಯಕ್ಷ ಕೆ.ಎಸ್.ಗಣೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.