ADVERTISEMENT

ಶ್ರವಣ ಶಕ್ತಿ ಜೀವನದ ಅವಿಭಾಜ್ಯ ಅಂಗ: ಜಿಲ್ಲಾಧಿಕಾರಿ ಸೆಲ್ವಮಣಿ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2021, 13:45 IST
Last Updated 3 ಮಾರ್ಚ್ 2021, 13:45 IST
ಕೋಲಾರದಲ್ಲಿ ಬುಧವಾರ ನಡೆದ ವಿಶ್ವ ಶ್ರವಣ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ಮಾತನಾಡಿದರು.
ಕೋಲಾರದಲ್ಲಿ ಬುಧವಾರ ನಡೆದ ವಿಶ್ವ ಶ್ರವಣ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ಮಾತನಾಡಿದರು.   

ಕೋಲಾರ: ‘ಜಾಗತಿಕವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಶಬ್ಧ ಮಾಲಿನ್ಯ ಹೆಚ್ಚಿದ್ದು, ಕಿವಿಗಳ ಸುರಕ್ಷತೆಗೆ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ಕಿವಿಮಾತು ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಶ್ರವಣ ದಿನಾಚರಣೆಯಲ್ಲಿ ಮಾತನಾಡಿ, ‘ಶ್ರವಣ ಶಕ್ತಿಯು ಜೀವನದ ಅವಿಭಾಜ್ಯ ಅಂಗ. ಶಬ್ಧಗಳೇ ಇಲ್ಲದ ಪ್ರಪಂಚ ಊಹಿಸಿಕೊಳ್ಳಲು ಅಸಾಧ್ಯ. ಪಂಚೇಂದ್ರಿಯಗಳಲ್ಲಿ ಕಿವಿಗಳು ಪ್ರಮುಖ ಅಂಗಗಳಾಗಿದ್ದು, ಅವುಗಳ ರಕ್ಷಣೆಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು’ ಎಂದು ತಿಳಿಸಿದರು.

‘ಪ್ರಸ್ತುತ ಕಾಲಘಟ್ಟದಲ್ಲಿ ಮಗುವು ಹುಟ್ಟಿನಿಂದಲೇ ನಾನಾ ರೀತಿಯ ಶಬ್ಧ ಕೇಳುತ್ತಿರುತ್ತದೆ. ಮಕ್ಕಳಲ್ಲಿ ಶ್ರವಣ, ಮೂಗು ಮತ್ತು ಗಂಟಲು ದೋಷ ಕಂಡುಕೊಳ್ಳದೆ ಹೋದರೆ ಭವಿಷ್ಯದಲ್ಲಿ ಅವರು ಸಾಮಾನ್ಯ ವ್ಯಕ್ತಿಯಂತೆ ಕೇಳಲು, ಮಾತನಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಶ್ರವಣ ದೋಷಕ್ಕೆ ಆರಂಭದಲ್ಲೇ ಪರಿಹಾರ ಕಂಡುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಗ್ರಾಮೀಣ ಭಾಗದಲ್ಲಿ ಇಂದಿಗೂ ಕಿವಿಗೆ ಏನಾದರೂ ಸಮಸ್ಯೆಯಾದರೆ ಜನರು ವೈದ್ಯರ ಬಳಿಗೆ ಹೋಗುವುದಿಲ್ಲ. ಕಿವಿ ನೋವು ಬಂದರೆ ಕಿವಿಗೆ ಬಿಸಿ ಎಣ್ಣೆ ಬಿಡುವ, ಕಿವಿಯೊಳಗೆ ಕೋಳಿ ಪುಕ್ಕ ಇಡುವ, ಸೊಪ್ಪಿನ ರಸ ಹಾಕುವ ಪರಿಪಾಠವಿದೆ. ಇದರಿಂದ ಶಾಶ್ವತವಾಗಿ ಶ್ರವಣ ದೋಷ ಉಂಟಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಕಿವಿ ಸಮಸ್ಯೆಗೆ ತಜ್ಞರಿಂದ ಸಕಾಲಕ್ಕೆ ಚಿಕಿತ್ಸೆ ಪಡೆಯಬೇಕು’ ಎಂದು ಹೇಳಿದರು.

‘ಕಿವಿ ಕೇಳಿಸದಿದ್ದರೆ ಸಮುದಾಯದಲ್ಲಿ ಪಾಲ್ಗೊಳ್ಳುವಿಕೆ, ಕೆಲಸಗಳ ನಿರ್ವಹಣೆ ಸಾಧ್ಯವಿಲ್ಲ. ಮನೆಗಳಲ್ಲಿ ಸೌಂಡ್ ಬಾಕ್ಸ್, ಟಿ.ವಿ ಹಾಗೂ ಮೋಟರ್‌ ಶಬ್ಧದಿಂದ ಮಕ್ಕಳ ಕಿವಿಗಳಿಗೆ ತೊಂದರೆ ಆಗುವುದರಿಂದ ಮುನ್ನೆಚ್ಚರಿಕೆ ವಹಿಸಬೇಕು. ಶ್ರವಣ ದೋಷ ಇರುವವರಿಗೆ ವಿವಿಧ ಇಲಾಖೆಗಳಿಂದ ಸಲಕರಣೆ ನೀಡಲಾಗುತ್ತಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.

ಸಮಸ್ಯೆ ನಿರ್ಲಕ್ಷ್ಯ: ‘ಜನರು ಶ್ರವಣ ದೋಷವು ಗಂಭೀರವಲ್ಲವೆಂದು ಭಾವಿಸಿ ಕಿವಿಯ ಸಮಸ್ಯೆ ನಿರ್ಲಕ್ಷಿಸುತ್ತಾರೆ. ಹತ್ತಿರದ ಸಂಬಂಧಿಗಳಲ್ಲಿ ವಿವಾಹ, ಅವಧಿಗೆ ಮುನ್ನ ಮಗು ಜನನ, ಅತಿಯಾಗಿ ಮೊಬೈಲ್ ಬಳಕೆಯಿಂದ ಶ್ರವಣ ದೋಷ ಹೆಚ್ಚಾಗುತ್ತದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (ಪ್ರಭಾರ) ಡಾ.ಜಗದೀಶ್‌ ವಿವರಿಸಿದರು.

‘ಸಣ್ಣ ವಯಸ್ಸಿನಲ್ಲಿ ಮಕ್ಕಳಿಗೆ ಶ್ರವಣ ದೋಷವಿದ್ದರೆ ಅದನ್ನು ಗುರುತಿಸಿ ಚಿಕಿತ್ಸೆ ಕೊಡಿಸಬೇಕು. ಮಕ್ಕಳಿಗೆ ಕಿವಿಗಳ ಸಂರಕ್ಷಣೆ ಬಗ್ಗೆ ತಿಳಿ ಹೇಳಬೇಕು. ಕೆಲವು ಬಾರಿ ಮಧುಮೇಹ ಸಮಸ್ಯೆಯಿಂದ ಶ್ರವಣಕ್ಕೆ ತೊಂದರೆ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಆದಷ್ಟು ಬೇಗ ನೂನ್ಯತೆ ಗುರುತಿಸಿ ಚಿಕಿತ್ಸೆ ಪಡೆಯಬೇಕು’ ಎಂದು ಹೇಳಿದರು.

2007ರಲ್ಲಿ ಆರಂಭ: ‘ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ವರದಿ ಪ್ರಕಾರ 1981ರಲ್ಲಿ ಜಗತ್ತಿನಲ್ಲಿ ಶ್ರವಣದೋಷ ಉಳ್ಳವರ ಸಂಖ್ಯೆ ಶೇ 1ಕ್ಕಿಂತ ಕಡಿಮೆಯಿತ್ತು. 1995ರ ವೇಳೆಗೆ ಈ ಪ್ರಮಾಣ ಶೇ 2ಕ್ಕೆ ತಲುಪಿತು. ವಾಹನಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಶಬ್ಧ ಮಾಲಿನ್ಯ ಪ್ರಮಾಣ ಹೆಚ್ಚಾಗಿದೆ’ ಎಂದು ಅನುಷ್ಠಾನಾಧಿಕಾರಿ ಡಾ.ಚಂದನ್‌ ಮಾಹಿತಿ ನೀಡಿದರು.

‘ಭಾರತ ಸರ್ಕಾರ 2007ರಲ್ಲಿ ದೇಶದಲ್ಲಿ ಶ್ರವಣ ದಿನಾಚರಣೆ ಆರಂಭಿಸಿತು. ಡಬ್ಲ್ಯೂಎಚ್‌ಒ ಪ್ರಕಾರ ಸದ್ಯ ಶೇ 8ರಿಂದ 9ರಷ್ಟು ಜನ ಶ್ರವಣ ದೋಷ ಅನುಭವಿಸುತ್ತಿದ್ದಾರೆ. ‘ಎಲ್ಲರಿಗೂ ಶ್ರವಣದ ಆರೈಕೆ’ ಈ ವರ್ಷದ ಘೋಷಣೆಯಾಗಿದೆ’ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಪಾಲಿ, ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲಿಕರಣಾಧಿಕಾರಿ ಮುನಿರಾಜು, ವೈದ್ಯರಾದ ಡಾ.ಪುಷ್ಪಲತಾ, ಡಾ.ಕಮಲಾ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.