ADVERTISEMENT

ಮುಳಬಾಗಿಲು | ಹೆಲ್ಮೆಟ್ ಕಡ್ಡಾಯ: ತಾಲ್ಲೂಕಿನಲ್ಲಿ ಉತ್ತಮ ಸ್ಪಂದನೆ

ಹೆಲ್ಮೆಟ್ ಇಲ್ಲದವರನ್ನು ತಡೆದು ಖರೀದಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 7:14 IST
Last Updated 2 ಡಿಸೆಂಬರ್ 2025, 7:14 IST
ಮುಳಬಾಗಿಲು ತಾಲ್ಲೂಕಿನ ನಂಗಲಿ ಪೊಲೀಸ್ ಠಾಣೆ ಬಳಿ ಹೆಲ್ಮೆಟ್ ಇಲ್ಲದ ದ್ವಿಚಕ್ರ ವಾಹನ ಸವಾರರನ್ನು ತಡೆದು ನೂತನ ಹೆಲ್ಮೆಟ್ ತೊಡಿಸಿ ಕಳುಹಿಸಿದರು
ಮುಳಬಾಗಿಲು ತಾಲ್ಲೂಕಿನ ನಂಗಲಿ ಪೊಲೀಸ್ ಠಾಣೆ ಬಳಿ ಹೆಲ್ಮೆಟ್ ಇಲ್ಲದ ದ್ವಿಚಕ್ರ ವಾಹನ ಸವಾರರನ್ನು ತಡೆದು ನೂತನ ಹೆಲ್ಮೆಟ್ ತೊಡಿಸಿ ಕಳುಹಿಸಿದರು   

ಮುಳಬಾಗಿಲು: ಜಿಲ್ಲೆಯಲ್ಲಿ ದ್ವಿಚಕ್ರ ವಾಹನ ಸವಾರರ ಒಳಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ ಅವರು ಡಿ.1ರಿಂದ ಹೆಲ್ಮೆಟ್ ಕಡ್ಡಾಯಗೊಳಿಸಿದ್ದು, ಮೊದಲ ದಿನ ಸವಾರರು ಉತ್ತಮವಾಗಿ ಸ್ಪಂದಿಸಿದ್ದಾರೆ.

ಹೆಲ್ಮೆಟ್ ಕಡ್ಡಾಯದ ಕುರಿತು ಅನೇಕ ದಿನಗಳಿಂದ ಸೂಚಿಸುತ್ತಿದ್ದರು. ಹಾಗಾಗಿ ಅನೇಕ ಮಂದಿ ಹೆಲ್ಮಡೆ ಧರಿಸಿ ಸಂಚರಿಸಿದರು. ಹೆಲ್ಮೆಟ್ ಇಲ್ಲದೆ ಸಂಚರಿಸುತ್ತಿದ್ದವನ್ನು ಪೊಲೀಸರು ಹಿಡಿದು ಹೆಲ್ಮೆಟ್ ಖರೀದಿಸಲು ಸೂಚನೆ ನೀಡಿದರು. ಇನ್ನೂ ಕೆಲವರಿಗೆ ಹೊಸ ಹೆಲ್ಮೆಟ್ ನೀಡಿ ಕಳುಹಿಸಿದರು.

ಮುಳಬಾಗಿಲು ನಗರದಲ್ಲಿ ಬೆಳಗ್ಗೆ ರಸ್ತೆಗೆ ಇಳಿದ ಪೊಲೀಸರು ಹೆಲ್ಮೆಟ್ ಇಲ್ಲದ ದ್ವಿಚಕ್ರ ವಾಹನ ಸವಾರರನ್ನು ತಡೆದು ವಾಹನಗಳನ್ನು ನೇತಾಜಿ ಕ್ರೀಡಾಂಗಣಕ್ಕೆ ಕಳುಹಿಸಿ ಅಲ್ಲೇ ಇದ್ದ ಹೆಲ್ಮೆಟ್ ವ್ಯಾಪಾರಿಗಳಿಂದ ಹೆಲ್ಮೆಟ್ ಖರೀದಿಸಲು ತಿಳಿಸಿ ಕಳುಹಿಸಿದರು.

ADVERTISEMENT

ಕಡ್ಡಾಯ ಹೆಲ್ಮೆಟ್ ಕುರಿತು ಮಾಹಿತಿ ಇಲ್ಲದವರು ನಮಗೆ ಗೊತ್ತಿಲ್ಲ, ನಾಳೆಯಿಂದ ಹೆಲ್ಮೆಟ್ ಧರಿಸುತ್ತೇವೆ ಎಂದು ಪೊಲೀಸರ ಹಿಂದೆ ಓಡಾಡುತ್ತಿದ್ದ ದೃಶ್ಯಗಳು ಕಂಡುಬಂದವು. ಇನ್ನು ಕೆಲವರು ಪ್ರಭಾವ ಬಳಸಿ ಪೊಲೀಸರಿಂದ ತಪ್ಪಿಸಿಕೊಳ್ಳಲು ನೋಡುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.

ನಂಗಲಿಯಲ್ಲಿ ಕಡ್ಡಾಯ ಹೆಲ್ಮೆಟ್: ತಾಲ್ಲೂಕಿನ ನಂಗಲಿ ಪೊಲೀಸ್ ಠಾಣೆಯ ಮುಂದೆ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಎಚ್.ಡಿ.ವಿದ್ಯಾಶ್ರೀ ಹಾಗೂ ಸಿಬ್ಬಂದಿ ಹೆಲ್ಮೆಟ್ ಇಲ್ಲದ ವಾಹನಗಳನ್ನು ಠಾಣೆ ಆವರಣದಲ್ಲಿ ನಿಲ್ಲಿಸಿ ಸ್ಥಳದಲ್ಲೇ ಹೆಲ್ಮೆಟ್ ಖರೀದಿಸುವ ಹಾಗೂ ಮನೆಗಳಿಂದ ಹೆಲ್ಮೆಟ್ ತರಿಸಿಕೊಂಡು ಹೆಲ್ಮೆಟ್ ಹಾಕುವವರೆಗೂ ದ್ವಿಚಕ್ರ ವಾಹನಗಳನ್ನು ಸವಾರರಿಗೆ ನೀಡದೆ ಅರಿವು ಮೂಡಿಸಿದರು.

ಹೆಲ್ಮೆಟ್ ಖರೀದಿಸಲು ಮುಗಿಬಿದ್ದ ಬೈಕ್ ಸವಾರರು: ಪೊಲೀಸರು ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಎಂದು ವಾಹನ ತಡೆಯುತ್ತಿದ್ದಂತೆ ಸವಾರರು ಹೆಲ್ಮೆಟ್ ಅಂಗಡಿಗಳಿಗೆ ಮುಗಿಬಿದ್ದು ಹೆಲ್ಮೆಟ್ ಖರೀದಿಸುವ ದೃಶ್ಯಗಳು ಕಂಡು ಬಂದವು.

ಹೆಲ್ಮೆಟ್ ಖರೀದಿಸಲು ಮುಳಬಾಗಿಲು ಅಂಗಡಿಯೊಂದರ ಮುಂದೆ ಸೇರಿರುವ ವಾಹನ ಸವಾರರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.