ADVERTISEMENT

ಮುಳಬಾಗಿಲು: ತಾಲ್ಲೂಕಿನಲ್ಲಿ ಹೈಟೆಕ್ ಸಮಾಧಿಗಳು

ಕೆ.ತ್ಯಾಗರಾಜ್ ಎನ್.ಕೊತ್ತೂರು.
Published 11 ಫೆಬ್ರುವರಿ 2024, 6:16 IST
Last Updated 11 ಫೆಬ್ರುವರಿ 2024, 6:16 IST
ಮುಳಬಾಗಿಲು ತಾಲ್ಲೂಕಿನ ಎಂ.ಕೊತ್ತೂರು ಬಳಿಯಲ್ಲಿ ತಮಿಳುನಾಡಿನ ಎಂ.ಜಿ.ಆರ್ ಸಮಾಧಿ ಮಾದರಿಯಂತೆ ನಿರ್ಮಾಣವಾಗಿರುವ ಮುನಿರತ್ನಮ್ಮ ಸಮಾಧಿ
ಮುಳಬಾಗಿಲು ತಾಲ್ಲೂಕಿನ ಎಂ.ಕೊತ್ತೂರು ಬಳಿಯಲ್ಲಿ ತಮಿಳುನಾಡಿನ ಎಂ.ಜಿ.ಆರ್ ಸಮಾಧಿ ಮಾದರಿಯಂತೆ ನಿರ್ಮಾಣವಾಗಿರುವ ಮುನಿರತ್ನಮ್ಮ ಸಮಾಧಿ   

ಮುಳಬಾಗಿಲು: ತಾಲ್ಲೂಕಿನ ಎಂ.ಕೊತ್ತೂರು ಹಾಗೂ ರಾಮಾಪುರ ಗ್ರಾಮಗಳಲ್ಲಿ ಲಕ್ಷಾಂತರ ವೆಚ್ಚದಲ್ಲಿ ಹೈಟೆಕ್ ಸಮಾಧಿಗಳು ನಿರ್ಮಾಣವಾಗುತ್ತಿವೆ.

ಅಂಬ್ಲಿಕಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಂ.ಕೊತ್ತೂರು ಹಾಗೂ ರಾಮಾಪುರ ಗ್ರಾಮಗಳು ಅಕ್ಕಪಕ್ಕದ (ಜೋಡಿ) ಗ್ರಾಮಗಳಾಗಿದ್ದು, ಎರಡೂ ಗ್ರಾಮಗಳಲ್ಲಿ ಸತ್ತವರಿಗಾಗಿ ಭಿನ್ನ ಮಾದರಿಯ ಸಮಾಧಿಯನ್ನು ಲಕ್ಷಾಂತರ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇವು ನೋಡುಗರನ್ನು ಆಕರ್ಷಿಸುತ್ತಿವೆ.

ಸಾಮಾನ್ಯವಾಗಿ ಯಾರಾದರೂ ಸಾವನ್ನಪ್ಪಿದರೆ ಮಣ್ಣಿನಲ್ಲಿ ಗುಂಡಿ ತೆಗೆದು ಮಣ್ಣು ಮುಚ್ಚಿ ಸಮಾಧಿ ಮಾಡುವುದು ವಾಡಿಕೆ. ಸ್ವಲ್ಪ ಆರ್ಥಿಕ  ಸ್ಥಿತಿವಂತರು ಸಿಮೆಂಟ್, ಗ್ರಾನೈಟ್ ಅಥವಾ ಕಲ್ಲು ಬಳಸಿ ಸಮಾಧಿ ನಿರ್ಮಿಸುವುದು ಸಾಮಾನ್ಯ. ಜತೆಗೆ ಕೆಲವೆಡೆ ಸಮಾಧಿಗಳು ಮಳೆಗೆ ನೆನೆಯದೆ, ಬಿಸಿಲಿಗೆ ಒಣಗದೆ ನೆರಳಿರಲಿ ಎಂಬ ಕಾರಣಕ್ಕೆ ಸಮಾಧಿಗಳ ಮೇಲೆ ಚಪ್ಪಡಿ ಕಲ್ಲು ಅಥವಾ ಕಾಂಕ್ರೀಟ್ ವರಂಡಾ ನಿರ್ಮಿಸಿರುವುದನ್ನು ಅಲ್ಲಲ್ಲಿ ಕಾಣಬಹುದು. ಆದರೆ, ಎಂ.ಕೊತ್ತೂರು ಹಾಗೂ ರಾಮಾಪುರ ಗ್ರಾಮಗಳಲ್ಲಿ ಶ್ರೀಮಂತರು ಎಲ್ಲರ ಗಮನ ಸೆಳೆಯುವಂತೆ ಬೃಹದಾಕಾವಾಗಿ ನಿರ್ಮಿಸಿದ್ದಾರೆ.

ADVERTISEMENT

ಎರಡೂ ಗ್ರಾಮಗಳ ಸುತ್ತಲೂ ಸುಮಾರು 30 ಸಮಾಧಿಗಳು ತೀರಾ ಭಿನ್ನ ಮತ್ತು ಆಕರ್ಷಕವಾಗಿವೆ. ಒಂದೊಂದು ಸಮಾಧಿಯೂ ಸುಮಾರು ₹20 ರಿಂದ ₹60 ಲಕ್ಷ ವೆಚ್ಚದವರೆಗೆ ವಿಭಿನ್ನ ಶೈಲಿಯಲ್ಲಿ ಆತ್ಯಾಕರ್ಷಕವಾಗಿ ನಿರ್ಮಿಸಲಾಗಿದೆ.

ಕೆಲವು ಸಮಾಧಿಗಳು ಈಜಿಪ್ಟಿನ ಪಿರಮಿಡ್‌ ಮಾದರಿ ಹೋಲುವಂತಿದ್ದರೆ, ಇನ್ನೂ ಕೆಲವು ಚಲನಚಿತ್ರ ನಟರ ಸಮಾಧಿಗಳಂತೆ. ಭವ್ಯಭಂಗಲೆ, ದೇವಾಲಯದ ಗೋಪುರ, ಮಂಚದ ಆಕಾರದ ನಾನಾ ಬಗೆಯಲ್ಲಿ ಸಮಾಧಿಗಳು ನಿರ್ಮಾಣವಾಗಿವೆ.

ತಮಿಳುನಾಡಿನ ಎಂ.ಜಿ.ಆರ್ ಮಾದರಿ ಸಮಾಧಿ: ಮರಹೇರು ಕಡೆಯಿಂದ ಎಂ.ಕೊತ್ತೂರು ಗ್ರಾಮಕ್ಕೆ ಪ್ರವೇಶವಾಗುತ್ತಿದ್ದಂತೆ ಗ್ರಾಮದ ಪ್ರಾಚೀನ ಆಂಜನೇಯ ದೇವಾಲಯದ ಪಕ್ಕದಲ್ಲಿ ಹಲವು ಬಾರಿ ಮುಳಬಾಗಿಲು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸಿಂಗಪೂರ್ ಗೋವಿಂದ್ ಅವರ ಪತ್ನಿ ಮುನಿರತ್ನಮ್ಮ ಅವರ ಸಮಾಧಿಯನ್ನು ಮಕ್ಕಳಾದ ಸರಸ್ವತಮ್ಮ, ಭಾಗ್ಯಮ್ಮ ಮತ್ತು ವೆಂಕಟೇಶ್ ಹಾಗೂ ಕುಟುಂಬ ಸೇರಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಜಿ.ಆರ್ ಸಮಾಧಿ ಮಾದರಿಯಲ್ಲಿ ನಿರ್ಮಿಸಿದ್ದಾರೆ.

ಈ ಸಮಾಧಿಯನ್ನು ಎರಡು ಮಟ್ಟುಗಳ ಆಳದಿಂದ ಕಬ್ಬಿಣ ಮತ್ತು ಸಿಮೆಂಟ್ ಮಾತ್ರ ಬಳಸಿ ಒಂಬತ್ತು ಗೋಪುರಗಳಂತೆ ನಿರ್ಮಿಸಿ, ಮಧ್ಯದಲ್ಲಿ ತಾಯಿ ಹಾಗೂ ತಾಯಿಯ ಸಾಕುಮಗ ಚಾಣಕ್ಯ ಎಂಬ ವ್ಯಕ್ತಿಯ ಅಮೃತ ಶಿಲೆ ಮಾದರಿಯ ಕಲ್ಲುಗಳಿಂದ ಸಮಾಧಿ ನಿರ್ಮಿಸಲಾಗಿದೆ. ಎರಡೂ ಸಮಾಧಿಗಳ ಮಧ್ಯದಲ್ಲಿ ಕಪ್ಪು ಕಂಬ ನಿರ್ಮಿಸಿ ಕಂಬದ ಒಳಗೆ ವರ್ಷ ಪೂರ್ತಿ ದೀಪ ಬೆಳಗುವಂತೆ ವ್ಯವಸ್ಥೆ ಮಾಡಿದ್ದಾರೆ. ಜತೆಗೆ ಈ ಸಮಾಧಿಯ ಸ್ವಚ್ಛತೆ ಕಾಪಾಡಲು ಒಂದು ಕುಟುಂಬವನ್ನು ನಿಯೋಜನೆ ಮಾಡಲಾಗಿದೆ.

ಭವ್ಯ ಸಮಾಧಿಗಳು: ಗ್ರಾಮಗಳ ಬಳಿಯಲ್ಲಿರುವ ಮತ್ತೊಂದು ಸಮಾಧಿ ಎರಡು ಕಡೆ ಆನೆ ಹೂ ಹಾರವನ್ನು ಹಿಡಿದು ಮಧ್ಯದಲ್ಲಿರುವ ಗ್ರಾನೈಟ್‌ ಕಲ್ಲಿನ ಸಮಾಧಿಗೆ ಹಾರ ಹಾಕುವಂತೆ ನಿರ್ಮಿಸಲಾಗಿದೆ. ಸುಮಾರು ಅರ್ಧ ಎಕರೆ ಪ್ರದೇಶದಲ್ಲಿ ಮತ್ತೊಂದು ಸಮಾಧಿ ಇದ್ದು, ಹೆಚ್ಚು ಬೆಲೆ ಬಾಳುವ ಗ್ರಾನೈಟ್ ಕಲ್ಲುಗಳಿಂದ ನಿರ್ಮಿಸಲಾಗಿದೆ. ಸದಾ ವಿದ್ಯುತ್ ದೀಪಗಳ ಅಲಂಕಾರದಿಂದ ಕಂಗೊಳಿಸುತ್ತಲಿದ್ದು,  ಸುತ್ತಲೂ ಉದ್ಯಾನ ನಿರ್ಮಿಸಲಾಗಿದೆ.

ಸಮಾಧಿಗೆ ಹೆಲಿಕಾಪ್ಟರ್‌ನಿಂದ ಹೂ ಮಳೆ: ರಾಮಾಪುರ ಗ್ರಾಮದ ಕೃಷ್ಣಪ್ಪ ಎಂಬುವವರು ಈಚೆಗೆ ಸಾವನ್ನಪ್ಪಿದ್ದರಿಂದ ಮಕ್ಕಳು ಅತ್ಯಾಕರ್ಷಕ ಬಿಳುಪು ಹಾಗೂ ಕಪ್ಪು ಕಲ್ಲುಗಳಿಂದ ಲಕ್ಷಾಂತರ ವೆಚ್ಚದಲ್ಲಿ ಸಮಾಧಿ ನಿರ್ಮಿಸಿ ಹನ್ನೊಂದನೇ ದಿನದ ತಿಥಿ ಆಚರಣೆಯಂದು  ಸಮಾಧಿ ಮೇಲೆ ಹೂ ಮಳೆ ಮಾಡಿಸಿದ್ದು ಎಲ್ಲರನ್ನೂ ಬೆರಗುಗೊಳಿಸಿದೆ.

ಹೀಗೆ ಒಂದಕ್ಕಿಂತ ಒಂದು ಹೆಚ್ಚಂತೆ ಸುಮಾರು ಮೂವತ್ತು ಸಮಾಧಿಗಳು ಆಕರ್ಷವಾಗಿವೆ. ಪ್ರಸ್ತುತ ಅಣೆಹಳ್ಳಿ ರಸ್ತೆ ಸಮೀಪ ಮತ್ತೊಂದು ಅತ್ಯಾಕರ್ಷಕ ಸಮಾಧಿ ನಿರ್ಮಾಣವಾಗುತ್ತಿದ್ದು, ಜನ ಯಾವ ರೀತಿಯಲ್ಲಿ ನಿರ್ಮಿಸಬಹುದು ಎಂದು ಎದುರು ನೋಡುತ್ತಿದ್ದಾರೆ.

ರಾಮಾಪುರ ಗ್ರಾಮದ ಬಳಿಯ ಸಮಾಧಿಗೆ ಸುತ್ತಲೂ ಉದ್ಯಾನವನ ನಿರ್ಮಿಸಿರುವುದು
ಎಂ.ಕೊತ್ತೂರು ಬಳಿಯಲ್ಲಿ ದೇವಾಲಯದಂತೆ ನಿರ್ಮಿಸಿರುವ ಸಮಾಧಿ
ಈಚೆಗೆ ರಾಮಾಪುರ ಬಳಿ ಸತ್ತವರೊಬ್ಬರ ಸಮಾಧಿ ಮೇಲೆ ಹೆಲಿಕಾಪ್ಟರ್ ಮೂಲಕ ಹೂಮಳೆ ಸುರಿದಿದ್ದ ಚಿತ್ರ
ನಮ್ಮ ತಾಯಿ ಮುನಿರತ್ನಮ್ಮ ನಮ್ಮ ಕುಟುಂಬದ ಅಭಿವೃದ್ಧಿಗೆ ಶ್ರಮಿಸಿ ನಮ್ಮನ್ನು ಪೋಷಿಸಿದ್ದಾರೆ. ಹಾಗಾಗಿ ತಮ್ಮ ತಾಯಿ ದೈಹಿಕವಾಗಿ ಸಾವನ್ನಪ್ಪಿದರೂ ಮಾನಸಿಕವಾಗಿ ಸದಾ ನಮ್ಮೊಂದಿಗೆ ಇರುವಂತೆ ಇರಲು ತಮಿಳುನಾಡಿನ ಎಂ.ಜಿ.ಆರ್ ಮಾದರಿಯಲ್ಲಿ ಸಮಾಧಿ ನಿರ್ಮಿಸಿ ವರ್ಷ ಪೂರ್ತಿ ದೀಪ ಆರದಂತೆ ನಿರ್ಮಿಸಲಾಗಿದೆ.
ಜಿ.ವೆಂಕಟೇಶ್ ಎಂ.ಕೊತ್ತೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.