ADVERTISEMENT

ಹೆದ್ದಾರಿ: ಭೂಸ್ವಾಧೀನಕ್ಕೆ ಸಂಸದರ ಸೂಚನೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2021, 13:13 IST
Last Updated 23 ಫೆಬ್ರುವರಿ 2021, 13:13 IST
ಸಂಸದ ಎಸ್‌.ಮುನಿಸ್ವಾಮಿ ಮುಳಬಾಗಿಲು ತಾಲ್ಲೂಕಿನ ಮಲ್ಲನಾಯಕನಹಳ್ಳಿ ಬಳಿ ಮಂಗಳವಾರ ಹೆದ್ದಾರಿ ಪರಿಶೀಲಿಸಿದರು.
ಸಂಸದ ಎಸ್‌.ಮುನಿಸ್ವಾಮಿ ಮುಳಬಾಗಿಲು ತಾಲ್ಲೂಕಿನ ಮಲ್ಲನಾಯಕನಹಳ್ಳಿ ಬಳಿ ಮಂಗಳವಾರ ಹೆದ್ದಾರಿ ಪರಿಶೀಲಿಸಿದರು.   

ಕೋಲಾರ: ‘ಜಿಲ್ಲೆಯ ಮುಳಬಾಗಿಲಿನಿಂದ ಮಲ್ಲನಾಯಕನಹಳ್ಳಿ ಮಾರ್ಗವಾಗಿ ಆಂಧ್ರಪ್ರದೇಶದ ಗಡಿ ಭಾಗದವರೆಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 234ರಲ್ಲಿ ಬಾಕಿ ಉಳಿದಿರುವ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಿ’ ಎಂದು ಸಂಸದ ಎಸ್‌.ಮುನಿಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.

ಮುಳಬಾಗಿಲು ತಾಲ್ಲೂಕಿನ ಮಲ್ಲನಾಯಕನಹಳ್ಳಿ ಬಳಿ ಮಂಗಳವಾರ ಹೆದ್ದಾರಿ ಪರಿಶೀಲಿಸಿ ಮಾತನಾಡಿ, ‘ಹೆದ್ದಾರಿ ಕಾಮಗಾರಿಗೆ ಅಗತ್ಯವಿರುವ ಕಡೆ ಮಾತ್ರ ಭೂಸ್ವಾಧೀನ ಮಾಡಬೇಕು. ಈ ಪ್ರಕ್ರಿಯೆಯನ್ನು ತ್ವರಿತವಾಗಿ ಮಾಡಬೇಕು’ ಎಂದು ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ತಿಳಿಸಿದರು.

‘ರಾಷ್ಟೀಯ ಹೆದ್ದಾರಿಯಲ್ಲಿ ಸಾಕಷ್ಟು ಅಪಘಾತ ಸಂಭವಿಸುತ್ತಿದ್ದು, ಸಾವು ನೋವಿನ ಪ್ರಮಾಣ ಹೆಚ್ಚಿದೆ. ಕಾಮಗಾರಿ ಪೂರ್ಣಗೊಳ್ಳದಿರುವುದೇ ಅಪಘಾತಕ್ಕೆ ಮುಖ್ಯ ಕಾರಣ. ಕಾಮಗಾರಿ ಪೂರ್ಣಗೊಂಡು ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯವಸ್ಥೆ ಸುಗಮವಾಗಲಿದೆ. ಸಾಧ್ಯವಾದಷ್ಟು ಬೇಗನೆ ಕಾಮಗಾರಿ ಪೂರ್ಣಗೊಳಿಸಿ ಅಪಘಾತ ನಿಯಂತ್ರಿಸಬೇಕು’ ಎಂದು ಹೇಳಿದರು.

ADVERTISEMENT

‘ಕಾಮಗಾರಿ ಗುಣಮಟ್ಟದ ವಿಚಾರದಲ್ಲಿ ರಾಜಿ ಪ್ರಶ್ನೆಯಿಲ್ಲ. ಕಾಮಗಾರಿ ಗುಣಮಟ್ಟದಿಂದ ಕೊಡಿರಬೇಕು. ರಸ್ತೆ ಸುರಕ್ಷತೆಗೆ ಆದ್ಯತೆ ನೀಡಿ. ಹೆದ್ದಾರಿಗಳಲ್ಲಿ ಸುರಕ್ಷತಾ ತಡೆಗೋಡೆ ಅಳವಡಿಸಿ. ಸುರಕ್ಷತಾ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲನೆಯಾಗಬೇಕು’ ಎಂದು ಆದೇಶಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾದ ಕೃಷ್ಣಮೂರ್ತಿ, ವಿಜಯ್‌ಕುಮಾರ್, ಹೇಮಲತಾ, ಸತೀಶ್, ಮಲ್ಲಿಕಾರ್ಜುನ್, ಭೂಸ್ವಾಧೀನಾಧಿಕಾರಿ ಕಮಲಾಬಾಯಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.