ಬಂಗಾರಪೇಟೆ: ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರ ನಡುವೆ ಸಮನ್ವಯತೆ ಸಾಧಿಸಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ‘ಮನೆ ಮನೆಗೆ ಪೊಲೀಸ್‘ ಎಂಬ ವಿನೂತನ ಅಭಿಯಾನ ಜಾರಿಗೆ ತರಲಾಗಿದೆ ಎಂದು ಪೊಲೀಸ್ ಇನ್ ಸ್ಪೆಕ್ಟರ್ ಆರ್.ದಯಾನಂದ್ ತಿಳಿಸಿದರು.
ಪಟ್ಟಣದ ವಿಜಯನಗರ ಬಡಾವಣೆ ಒಳಗೊಂಡಂತೆ ಇತರ ಪ್ರದೇಶಗಳಲ್ಲಿ ಸರ್ಕಾರದ ಆದೇಶದಂತೆ ‘ಮನೆ ಮನೆಗೆ ಪೊಲೀಸ್’ ಯೋಜನೆ ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಶನಿವಾರ ಕರಪತ್ರ ಹಂಚಿಕೆ ಮಾಡಿ ಅರಿವು ಮೂಡಿಸಲಾಗಿದೆ ಎಂದರು.
ಪೊಲೀಸ್ ಇಲಾಖೆ ಮೇಲೆ ಜನರಿಗೆ ಇರುವ ಅಭಿಪ್ರಾಯ ದೂರಮಾಡಿ ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕರೊಂದಿಗೆ ಸಮನ್ವಯತೆ ಸಾಧಿಸಿ ಅಪರಾಧ ಮುಕ್ತ ಸಮಾಜ ನಿರ್ಮಾಣ ಮಾಡಲು ಸಹಕಾರಿಯಾಗಿದೆ ಎಂದರು.
ದೇಶದಲ್ಲೇ ಮೊಟ್ಟಮೊದಲ ಬಾರಿಗೆ ‘ಮನೆ ಮನೆಗೆ ಪೊಲೀಸ್’ ಎಂಬ ಕಾರ್ಯಕ್ರಮ ರೂಪಿಸಿರುವುದರಿಂದ ಎಲ್ಲರಿಗೂ ಅನುಕೂಲವಾಗಿದೆ. ಪೊಲೀಸ್ ವ್ಯವಸ್ಥೆಯಲ್ಲಿ ಸಾರ್ವಜನಿಕ ಸಹಭಾಗಿತ್ವಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ತುರ್ತು ಸಂದರ್ಭಗಳಲ್ಲಿ ಟೋಲ್ ಫ್ರೀ ಸಂಖ್ಯೆಗೆ 112 ಕರೆ ಮಾಡುವಂತೆ ತಿಳಿಸಿದರು.
ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ರಾಜಣ್ಣ, ಎನ್.ಪಿ ಸಿಂಗ್, ಸಿಬ್ಬಂದಿ ಮಂಜುನಾಥ್, ಹರೀಶ್, ಅಮೃತಾ, ರಜನಿ, ವಿಜಯಲಕ್ಷ್ಮಿ, ಸುರೇಶ್, ಮಧು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.