ADVERTISEMENT

ಸಾಧಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2019, 13:50 IST
Last Updated 6 ಆಗಸ್ಟ್ 2019, 13:50 IST

ಕೋಲಾರ: ‘ಸಂಘಟನೆ ವತಿಯಿಂದ ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವ ಸಮರ್ಪಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ರಾಘವೇಂದ್ರ ತಿಳಿಸಿದರು.

ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸರ್ವ ಜನಾಂಗದ ಶಾಂತಿಯ ತೋಟದ ಅಂಗಳದಲ್ಲಿ ಕನ್ನಡ ಅಕ್ಷರದ ಅಕ್ಷತೆ ಎಂಬ ಶೀರ್ಷಿಕೆಯಡಿ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಆ.31ರಂದು ಕಾರ್ಯಕ್ರಮ ನಡೆಸಲಾಗುತ್ತದೆ’ ಎಂದು ಹೇಳಿದರು.

‘2018–19 ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 95ಕ್ಕಿಂತ ಹೆಚ್ಚು ಅಂಕ ಗಳಿಸಿದ ಮತ್ತು ಐಟಿಐ ಹಾಗೂ ಡಿಪ್ಲೊಮಾ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ ನೀಡಲಾಗುತ್ತದೆ’ ಎಂದು ವಿವರಿಸಿದರು.

ADVERTISEMENT

‘ಶಾಲೆ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಸೇವೆ ಸಲ್ಲಿಸಿದ ಸಾಧಕ ಶಿಕ್ಷಕರಿಗೆ ಗುರು ಶ್ರೇಷ್ಠ ಪುರಸ್ಕಾರ ನೀಡಲಾಗುತ್ತದೆ. ಎಸ್ಸೆಸ್ಸೆಲ್ಸಿ ಕನ್ನಡ ವಿಷಯದ ಪರೀಕ್ಷೆಯಲ್ಲಿ 125ಕ್ಕೆ 125 ಅಂಕ ಹಾಗೂ ದ್ವಿತೀಯ ಪಿಯುಸಿ ಕನ್ನಡ ಪರೀಕ್ಷೆಯಲ್ಲಿ 100ಕ್ಕೆ 99 ಅಂಕ ಪಡೆದ ವಿದ್ಯಾರ್ಥಿಗಳಿಗೆ ಕನ್ನಡದ ಕಣ್ಮಣಿ ಪುರಸ್ಕಾರ ನೀಡಲಾಗುವುದು’ ಎಂದರು.

ಸಾಧನೆಯ ಹಾದಿ: ‘ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣದಲ್ಲಿ ಚಿನ್ನದ ಪದಕ ಗಳಿಸಿರುವ, ಅತಿ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಪ್ರಾಂಶುಪಾಲರಿಗೆ ಸಾಧನೆಯ ಹಾದಿ ಪುರಸ್ಕಾರ ನೀಡಲಾಗುತ್ತದೆ. ಕನ್ನಡಪರ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುವ ಶಾಲಾ ಕಾಲೇಜುಗಳಿಗೆ ಕನ್ನಡ ಸೇವಕ ಪುರಸ್ಕಾರ ನೀಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ಕನ್ನಡ ನಾಡು ನುಡಿಗೆ ಶ್ರಮಿಸುತ್ತಿರುವ ವ್ಯಕ್ತಿಗಳಿಗೆ ಕನ್ನಡದ ಕಟ್ಟಾಳು ಪುರಸ್ಕಾರ ನೀಡಿ ಗೌರವಿಸಲಾಗುವುದು. ಈ ಎಲ್ಲಾ ಪುರಸ್ಕಾರಗಳಿಗೆ ಆಸಕ್ತರು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಕಚೇರಿ. ನಗರ ಪೊಲೀಸ್‌ ಠಾಣೆ ಸಮೀಪ, 5ನೇ ಅಡ್ಡರಸ್ತೆ, ಗೌರಿಪೇಟೆ, ಕೋಲಾರ ವಿಳಾಸಕ್ಕೆ ಆ.15ರೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ 9448402445 ಮೊಬೈಲ್‌ ಸಂಖ್ಯೆ ಸಂಪರ್ಕಿಸಬಹುದು’ ಎಂದು ಹೇಳಿದರು.

ಸಂಘಟನೆಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವಿ.ಮುನಿರಾಜು, ಮಹಿಳಾ ಘಟಕದ ಅಧ್ಯಕ್ಷೆ ಲತಾಬಾಯಿ ಮಾಡಿಕ್, ಉಪಾಧ್ಯಕ್ಷೆ ಗಾಯಿತ್ರಿ, ಪ್ರಧಾನ ಕಾರ್ಯದರ್ಶಿ ಶಾಂತಮ್ಮ, ಪ್ರಧಾನ ಸಂಚಾಲಕ ಮೆಹಬೂಬ್, ಗೌರವಾಧ್ಯಕ್ಷ ಕೋದಂಡಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.