ADVERTISEMENT

ಅಸನಿ ಚಂಡಮಾರುತ: ಜಿಲ್ಲೆಯಲ್ಲಿ ಜಿಟಿಜಿಟಿ ಮಳೆ

​ಪ್ರಜಾವಾಣಿ ವಾರ್ತೆ
Published 12 ಮೇ 2022, 15:16 IST
Last Updated 12 ಮೇ 2022, 15:16 IST

ಕೋಲಾರ: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಅಸನಿ ಚಂಡಮಾರುತದ ಪ್ರಭಾವದಿಂದಾಗಿ ಜಿಲ್ಲೆಯಾದ್ಯಂತ ಗುರುವಾರ ಜಿಟಿಜಿಟಿ ಮಳೆಯಾಯಿತು.

ಬುಧವಾರ ರಾತ್ರಿಯಿಂದಲೇ ಆರಂಭವಾದ ಮಳೆಯಿಂದ ಜನಜೀವನಕ್ಕೆ ಸಮಸ್ಯೆಯಾಯಿತು. ವೈಯಕ್ತಿಕ ಕೆಲಸ, ವಾಣಿಜ್ಯ ವಹಿವಾಟಿಗಾಗಿ ಮನೆಯಿಂದ ಹೊರ ಬಂದಿದ್ದ ಜನರು ಮಳೆಯಿಂದ ತೊಂದರೆ ಅನುಭವಿಸುವಂತಾಯಿತು. ಮೋಡ ಮುಸುಕಿದ ವಾತಾವರಣದ ನಡುವೆ ಸೂರ್ಯ ಆಗೊಮ್ಮೆ ಈಗೊಮ್ಮೆ ಮುಖ ತೋರಿಸಿ ಮರೆಯಾದ.

ಮಳೆಯ ಜತೆಗೆ ಶೀತ ಗಾಳಿ ಬೀಸುತ್ತಿದ್ದು, ಬಯಲುಸೀಮೆ ಜಿಲ್ಲೆಯಲ್ಲಿ ಮಲೆನಾಡಿನ ವಾತಾವರಣ ಸೃಷ್ಟಿಯಾಯಿತು. ಗಾಳಿಯ ತೀವ್ರತೆ ಹೆಚ್ಚಿದ್ದ ಕಾರಣಕ್ಕೆ ಹಲವೆಡೆ ಟೊಮೆಟೊ, ಬಾಳೆ, ಬೀನ್ಸ್‌ ಸೇರಿದಂತೆ ತೋಟಗಾರಿಕೆ ಬೆಳೆಗಳು ನೆಲಕಚ್ಚಿವೆ.

ADVERTISEMENT

ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ರಣ ಬಿಸಿಲಿನ ಜತೆಗೆ ಮಳೆ ಸುರಿಯತೊಡಗಿದ್ದು, ಬೇಸಿಗೆ ಹಾಗೂ ಮಳೆಗಾಲ ಎರಡರ ಅನುಭವವೂ ಒಟ್ಟೊಟ್ಟಿಗೆ ಆಗತೊಡಗಿದೆ. ಜಿಲ್ಲೆಯಲ್ಲಿ ಸದ್ಯ ಮಾವು ಕೊಯ್ಲು ಆರಂಭವಾಗಿದ್ದು, ಮಳೆ ಗಾಳಿಯು ಮಾವು ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.

ಮತ್ತೊಂದೆಡೆ ರೈತರು ಪೂರ್ವ ಮುಂಗಾರಿಗೆ ಭೂಮಿ ಹದಗೊಳಿಸಿ ತೊಗರಿ, ಅವರೆ, ಅಲಸಂದೆ, ಮುಸುಕಿನ ಜೋಳ, ನೆಲಗಡಲೆ ಬಿತ್ತಲು ಸಿದ್ಧತೆ ಆರಂಭಿಸಿದ್ದಾರೆ.

ವಾಡಿಕೆಗಿಂತ ಹೆಚ್ಚು: ಜಿಲ್ಲೆಯಲ್ಲಿ ಈ ಬಾರಿ ಪೂರ್ವ ಮುಂಗಾರು ಲಾಭದಾಯಕವಾಗಿದ್ದು, ಏ.27ರಿಂದ ಮೇ 12ರವರೆಗೆ ವಾಡಿಕೆಗಿಂತ ಶೇ 75ರಷ್ಟು ಹೆಚ್ಚು ಮಳೆಯಾಗಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.

ಪೂರ್ವ ಮುಂಗಾರಿನಲ್ಲಿ ವಾಡಿಕೆ ಮಳೆ ಪ್ರಮಾಣ 57 ಮಿ.ಮೀ ಇದೆ. ಆದರೆ, ಈ ಬಾರಿ 100 ಮಿ.ಮೀ ಮಳೆಯಾಗಿದೆ. ಬುಧವಾರದಿಂದ (ಮೇ 11) ಕೃತಿಕ ಮಳೆ ಆರಂಭವಾಗಿದ್ದು, ಜಿಲ್ಲೆಯ ಹಲವೆಡೆ ತುಂತುರು ಮಳೆಯಾಗಿದೆ. ಮೇ 15ರವರೆಗೆ ಗಾಳಿಯ ತೀವ್ರತೆ ಹೆಚ್ಚಿರಲಿದ್ದು, ಗಂಟೆಗೆ 25ರಿಂದ 30 ಕಿ.ಮೀ. ವೇಗದಲ್ಲಿ ಬೀಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ರೈತರಿಗೆ ಕಾಲಕಾಲಕ್ಕೆ ಹವಾಮಾನ ಮಾಹಿತಿ ಮತ್ತು ಹವಾಮಾನ ಆಧಾರಿತ ಬೆಳೆ ಸಲಹೆಗಳನ್ನು ನೀಡಲಾಗುತ್ತದೆ. ನೋಂದಾಯಿತ ಕೃಷಿಕರ ಮೊಬೈಲ್ ಸಂಖ್ಯೆಗೆ ಮಳೆಯ ಕುರಿತು ಮಾಹಿತಿ ಕಳುಹಿಸಲಾಗುತ್ತಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.