ADVERTISEMENT

ಫಲಾನುಭವಿ ಆಯ್ಕೆಯಲ್ಲಿ ಅಕ್ರಮ: ಆರೋಪ

ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಕಚೇರಿ ಎದುರು ಧರಣಿ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2018, 13:22 IST
Last Updated 3 ಆಗಸ್ಟ್ 2018, 13:22 IST
ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಸೌಲಭ್ಯಗಳಿಗೆ ಫಲಾನುಭವಿ ಆಯ್ಕೆಯಲ್ಲಿ ಅಧಿಕಾರಿಗಳು ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಬಹುಜನ ಸಂಘದ ಸದಸ್ಯರು ಕೋಲಾರದಲ್ಲಿ ಶುಕ್ರವಾರ ನಿಗಮದ ಕಚೇರಿ ಎದುರು ಧರಣಿ ಮಾಡಿದರು.
ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಸೌಲಭ್ಯಗಳಿಗೆ ಫಲಾನುಭವಿ ಆಯ್ಕೆಯಲ್ಲಿ ಅಧಿಕಾರಿಗಳು ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಬಹುಜನ ಸಂಘದ ಸದಸ್ಯರು ಕೋಲಾರದಲ್ಲಿ ಶುಕ್ರವಾರ ನಿಗಮದ ಕಚೇರಿ ಎದುರು ಧರಣಿ ಮಾಡಿದರು.   

ಕೋಲಾರ: ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಸೌಲಭ್ಯಗಳಿಗೆ ಫಲಾನುಭವಿಗಳ ಆಯ್ಕೆಯಲ್ಲಿ ಅಧಿಕಾರಿಗಳು ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಬಹುಜನ ಸಂಘದ ಸದಸ್ಯರು ಇಲ್ಲಿ ಶುಕ್ರವಾರ ನಿಗಮದ ಕಚೇರಿ ಎದುರು ಧರಣಿ ಮಾಡಿದರು.

‘ನಿಗಮದ ಅಧಿಕಾರಿಗಳು ಲಂಚದಾಸೆಗೆ ಸುಳ್ಳು ದಾಖಲೆಪತ್ರ ಸೃಷ್ಟಿಸಿ ಅನರ್ಹರಿಗೆ ಸವಲತ್ತು ನೀಡಿದ್ದಾರೆ. ಇದರಿಂದ ಅರ್ಹ ಫಲಾನುಭವಿಗಳಿಗೆ ವಂಚನೆಯಾಗಿದೆ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಸವಲತ್ತು ಹಂಚಿಕೆಯಲ್ಲಿ ಯಾವುದೇ ಅಕ್ರಮವಾಗಿಲ್ಲ ಎಂದು ಸಬೂಬು ಹೇಳುತ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಗಂಗಾ ಕಲ್ಯಾಣ ಯೋಜನೆಯಡಿ ದಲಿತ ಫಲಾನುಭವಿಗಳ ಹೆಸರಿಗೆ ಕೊಳವೆ ಬಾವಿಗಳು ಮಂಜೂರಾಗಿವೆ. ಆದರೆ, ಬೇರೆ ವ್ಯಕ್ತಿಗಳ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿ ಪಂಪ್‌, ಮೋಟರ್‌ ಮತ್ತು ಸಹಾಯಧನ ವಿತರಿಸಲಾಗಿದೆ. ಇದೇ ರೀತಿ ಸಾಲ ಸೌಲಭ್ಯ ದುರ್ಬಳಕೆಯಾಗಿದೆ. ಅಕ್ರಮಕ್ಕೆ ಸಂಬಂಧಪಟ್ಟ ದಾಖಲೆಪತ್ರಗಳಿವೆ’ ಎಂದು ಸಂಘದ ರಾಜ್ಯ ಘಟಕದ ಅಧ್ಯಕ್ಷ ನಾಗರಾಜ್‌ ದೂರಿದರು.

ADVERTISEMENT

‘ನಿಗಮದ ಕಾರ್ಯಕ್ರಮಗಳು ಅಧಿಕಾರಿಗಳ ಜೇಬು ತುಂಬಿಸುವ ಕಾರ್ಯಕ್ರಮಗಳಾಗಿವೆ. ನಿಗಮದಿಂದ ದಲಿತರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಫಲಾನುಭವಿಗಳ ಆಯ್ಕೆಯಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಿದೆ. ಮಧ್ಯವರ್ತಿಗಳ ಮೂಲಕ ಹೋದರೆ ಮಾತ್ರ ಅಧಿಕಾರಿಗಳು ಸವಲತ್ತು ವಿತರಿಸುತ್ತಾರೆ. ಅಧಿಕಾರಿಗಳು ದಲ್ಲಾಳಿಗಳ ಜತೆ ಶಾಮೀಲಾಗಿ ದಲಿತರನ್ನು ಶೋಷಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ಭಿಕ್ಷುಕರಂತೆ ನಡೆಸಿಕೊಳ್ಳುತ್ತಿದ್ದಾರೆ: ‘ಭೂ ಹಂಚಿಕೆಯಿಂದ ಮಾತ್ರ ದಲಿತರನ್ನು ದೀರ್ಘಾವಧಿಯಲ್ಲಿ ಸಶಕ್ತರಾಗಿಸಬಹುದು. ಆದರೆ, ದಲಿತರನ್ನು ಸ್ವಾವಲಂಬಿಗಳಾಗಿಸುವ ಉದ್ದೇಶ ನಿಗಮದ ಅಧಿಕಾರಿಗಳಿಗಿಲ್ಲ. ಸಮುದಾಯವನ್ನು ಸಾಮಾಜಿಕವಾಗಿ ಮುಖ್ಯವಾಹಿನಿಗೆ ತರುವಲ್ಲಿ ನಿರ್ಣಾಯಕರಾದ ಅಧಿಕಾರಿಗಳು ದಲಿತರನ್ನು ಭಿಕ್ಷುಕರಂತೆ ನಡೆಸಿಕೊಳ್ಳುತ್ತಿದ್ದಾರೆ’ ಎಂದು ಧರಣಿನಿರತರು ಕಿಡಿಕಾರಿದರು.

‘ಸಮುದಾಯದ ಅರ್ಹ ಫಲಾನುಭವಿಗಳಿಗೆ ನಿಗಮದ ಸವಲತ್ತುಗಳು ತಲುಪಬೇಕು. ಫಲಾನುಭವಿಗಳ ಆಯ್ಕೆಯೆಲ್ಲಿ ಆಗಿರುವ ಅಕ್ರಮದ ಬಗ್ಗೆ ತನಿಖೆ ನಡೆಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು ಮತ್ತು ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಬೇಕು’ ಎಂದು ಒತ್ತಾಯಿಸಿದರು.

ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಮಂಜುನಾಥ್, ಸದಸ್ಯರಾದ ರಾಮಮೂರ್ತಿ, ಜಗದೀಶ್, ಎಚ್.ಸಿ.ರಾಘವೇಂದ್ರ. ಮಹಾಲಕ್ಷ್ಮಿ, ಸುರೇಶ್, ಬೈರಪ್ಪ, ಶಿವಮ್ಮ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.