ADVERTISEMENT

ರಾಷ್ಟ್ರ ಸಮಿತಿ ಪಕ್ಷದ ಕಚೇರಿ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2020, 14:25 IST
Last Updated 13 ಮಾರ್ಚ್ 2020, 14:25 IST

ಕೋಲಾರ: ‘ಪಕ್ಷದ ಜಿಲ್ಲಾ ಘಟಕದ ಕಚೇರಿಯನ್ನು ಮಾರ್ಚ್‌ 15ರಂದು ಉದ್ಘಾಟಿಸಲಾಗುತ್ತದೆ’ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಉಪಾಧ್ಯಕ್ಷ ಎಸ್.ಎಚ್.ಲಿಂಗೇಗೌಡ ತಿಳಿಸಿದರು.

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಜಿಲ್ಲಾ ಕೇಂದ್ರದಲ್ಲಿ ಪಕ್ಷದ ಕಚೇರಿ ಸ್ಥಾಪಿಸಲಾಗಿದೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಬೆಳಿಗ್ಗೆ 10.30ಕ್ಕೆ ಕಚೇರಿ ಉದ್ಘಾಟಿಸುತ್ತಾರೆ’ ಎಂದು ಹೇಳಿದರು.

‘ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್‌ ಪಕ್ಷಗಳು ಜೆಸಿಬಿ ರೀತಿ ರಾಜ್ಯದ ಸಂಪತ್ತು ಲೂಟಿ ಮಾಡಿವೆ. ಜನರ ತೆರಿಗೆ ಹಣ ಆ ಪಕ್ಷಗಳ ಮುಖಂಡರ ಬ್ಯಾಂಕ್‌ ಖಾತೆಗಳಲ್ಲಿ ತುಂಬಿದೆ. ಈ ಮೂರೂ ಪಕ್ಷಗಳು ಸ್ವಾರ್ಥ, ವೈಯಕ್ತಿಕ ಪ್ರತಿಷ್ಠೆಗೆ ಕೋಮು ಸಂಘರ್ಷ ಸೃಷ್ಟಿಸಿ ಕ್ಷುಲ್ಲಕ ಕಾರಣಕ್ಕಾಗಿ ಜನಹಿತ ಬಲಿ ಕೊಡುತ್ತಿವೆ. ದೇಶವನ್ನು ನಾಶ ಮಾಡುತ್ತಿವೆ’ ಎಂದು ಆರೋಪಿಸಿದರು.

ADVERTISEMENT

‘ಜನರ ಏಳಿಗೆಗಾಗಿ ಪಕ್ಷವು ರಾಜ್ಯದ 16 ಜಿಲ್ಲೆಗಳಲ್ಲಿ ಘಟಕ ಸ್ಥಾಪಿಸಿದೆ. ಆರ್ಥಿಕ, ನೈಸರ್ಗಿಕ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿಗಾಗಿ ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಾರೆ. ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ. ಸ್ವಚ್ಛ, ಪ್ರಾಮಾಣಿಕ, ಜನಪರ ರಾಜಕಾರಣ ಮಾಡಬಯಸುವ ಮತ್ತು ನ್ಯಾಯಯುತವಾಗಿ ಚುನಾವಣೆ ಎದುರಿಸುವ ಜಿಲ್ಲೆಯ ಎಲ್ಲಾ ವರ್ಗದ ಜನರು ಪಕ್ಷದ ಸದಸ್ಯತ್ವ ಪಡೆಯಬಹುದು’ ಎಂದರು.

ಟಿಕೆಟ್‌ ಕೊಡಲಿಲ್ಲ

‘ರಾಷ್ಟ್ರೀಯ ಪಕ್ಷ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡು ಜನರ ಸೇವೆ ಮಾಡ ಬಯಸಿದ ನನಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್‌ ಕೊಡಲಿಲ್ಲ. ಬದಲಿಗೆ ಟಿಕೆಟ್‌ ಕೊಂಡುಕೊಳ್ಳುವವರಿಗೆ ಕಾಂಗ್ರೆಸ್‌ ಮಣೆ ಹಾಕಿತು. ಹಣದಿಂದ ಗೆದ್ದವರು ಜನರನ್ನು ಲೂಟಿ ಮಾಡುತ್ತಾರೆ. ಇದು ಯಾವ ನ್ಯಾಯ?’ ಎಂದು ಪಕ್ಷದ ರಾಜ್ಯ ಘಟಕದ ಕಾರ್ಯದರ್ಶಿ ಅಬ್ದುಲ್ ಸುಬಾನ್‌ ಪ್ರಶ್ನಿಸಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷೆ ಮಲ್ಲಮ್ಮ, ಸದಸ್ಯರಾದ ಸುರೇಂದ್ರಬಾಬು, ಮಂಜುನಾಥ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.