ADVERTISEMENT

ದೇಶದಲ್ಲಿ ಅವಿದ್ಯಾವಂತರ ಸಂಖ್ಯೆ ಹೆಚ್ಚಳ: ಸಿದ್ದರಾಮಯ್ಯ ಕಳವಳ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2021, 16:13 IST
Last Updated 1 ಅಕ್ಟೋಬರ್ 2021, 16:13 IST
ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಲೂರಿನಲ್ಲಿ ಶುಕ್ರವಾರ ‘ಪ್ರಜಾವಾಣಿ’–‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕಾ ಬಳಗದ ‘ಮಾಸ್ಟರ್‌ ಮೈಂಡ್‌’ ಡಿಜಿಟಲ್ ಪತ್ರಿಕೆ ಬಿಡುಗಡೆ ಮಾಡಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಲ್ಯುಮ್ನಿ ಅಧ್ಯಕ್ಷ ಶ್ರೀನಿಧಿ, ಪ್ರಾಂಶುಪಾಲ ವೆಂಕಟೇಶ್‌, ಪ್ರಜಾವಾಣಿ ಮತ್ತು ಡೆಕ್ಕನ್‌ ಹೆರಾಲ್ಡ್‌ ಪ್ರಸರಣ ವಿಭಾಗದ ಪ್ರಧಾನ ವ್ಯವಸ್ಥಾಪಕ ಆಲಿವರ್‌ ಲೆಸ್ಲಿ, ಪ್ರಜಾವಾಣಿ ಡೆಪ್ಯೂಟಿ ಎಡಿಟರ್ ಎಂ.ನಾಗರಾಜ್, ಶಾಸಕ ಕೆ.ವೈ.ನಂಜೇಗೌಡ, ಪುರಸಭೆ ಅಧ್ಯಕ್ಷ ಮುರಳೀಧರ್‌ ಇದ್ದಾರೆ
ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಲೂರಿನಲ್ಲಿ ಶುಕ್ರವಾರ ‘ಪ್ರಜಾವಾಣಿ’–‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕಾ ಬಳಗದ ‘ಮಾಸ್ಟರ್‌ ಮೈಂಡ್‌’ ಡಿಜಿಟಲ್ ಪತ್ರಿಕೆ ಬಿಡುಗಡೆ ಮಾಡಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಲ್ಯುಮ್ನಿ ಅಧ್ಯಕ್ಷ ಶ್ರೀನಿಧಿ, ಪ್ರಾಂಶುಪಾಲ ವೆಂಕಟೇಶ್‌, ಪ್ರಜಾವಾಣಿ ಮತ್ತು ಡೆಕ್ಕನ್‌ ಹೆರಾಲ್ಡ್‌ ಪ್ರಸರಣ ವಿಭಾಗದ ಪ್ರಧಾನ ವ್ಯವಸ್ಥಾಪಕ ಆಲಿವರ್‌ ಲೆಸ್ಲಿ, ಪ್ರಜಾವಾಣಿ ಡೆಪ್ಯೂಟಿ ಎಡಿಟರ್ ಎಂ.ನಾಗರಾಜ್, ಶಾಸಕ ಕೆ.ವೈ.ನಂಜೇಗೌಡ, ಪುರಸಭೆ ಅಧ್ಯಕ್ಷ ಮುರಳೀಧರ್‌ ಇದ್ದಾರೆ   

ಮಾಲೂರು: ‘ದೇಶದಲ್ಲಿ ಈಗಲೂ ಅವಿದ್ಯಾವಂತರ ಸಂಖ್ಯೆ ಹೆಚ್ಚಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಸಾಕ್ಷರತೆ ಪ್ರಮಾಣ ಶೇ 18ರಷ್ಟಿತ್ತು. ಈಗ ಸಾಕ್ಷರತೆ ಪ್ರಮಾಣ ಶೇ 78ಕ್ಕೆ ಎರಿಕೆಯಾಗಿದ್ದರೂ ನಾವು ವೈಚಾರಿಕವಾಗಿ ಬೆಳೆದಿಲ್ಲ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದರು.

‘ಪ್ರಜಾವಾಣಿ’–‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕಾ ಬಳಗವು ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಮಾಸ್ಟರ್‌ ಮೈಂಡ್‌’ ಡಿಜಿಟಲ್ ಪತ್ರಿಕೆ ಬಿಡುಗಡೆ ಮತ್ತು ವಿದ್ಯಾರ್ಥಿಗಳಿಗೆ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ, ‘ವಿದ್ಯೆ ಕಲಿಯುವುದು ಅಕ್ಷರಾಭ್ಯಾಸಕ್ಕಾಗಿ ಅಲ್ಲ. ಸಮಾಜದ ಜವಾಬ್ದಾರಿಯುತ ನಾಗರಿಕರಾಗಲು ವಿದ್ಯೆ ಕಲಿಯಬೇಕು’ ಎಂದು ಕಿವಿಮಾತು ಹೇಳಿದರು.

‘ಶಿಕ್ಷಣದಿಂದ ಜಾತ್ಯಾತೀತ ಮನೋಭಾವ ಮತ್ತು ವೈಚಾರಿಕತೆ ಬೆಳೆಯಬೇಕು. ಆಗ ಮಾತ್ರ ನಿಜವಾದ ಶಿಕ್ಷಣ ಸಿಕ್ಕಂತೆ ಆಗುತ್ತದೆ. ಮೂಢನಂಬಿಕೆ, ಸಂಪ್ರದಾಯ ಆಚರಣೆ ಮಾಡುವುದು, ಸಂವಿಧಾನ ಮತ್ತು ದೇಶದ ಇತಿಹಾಸ ತಿಳಿಯದೆ ಇರುವುದು ಮೂರ್ಖತನ. ಕಾಲೇಜುಗಳಲ್ಲಿ ಜವಾಬ್ದಾರಿಯುತ ನಾಗರಿಕರನ್ನು ರೂಪಿಸುವ ಕೆಲಸ ಆಗಬೇಕು. ಉಪನ್ಯಾಸಕರು ಈ ದಿಕ್ಕಿನಲ್ಲಿ ಕಾರ್ಯೋನ್ಮುಖರಾಗಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಆಡಳಿತಾತ್ಮಕ ಸೇವೆಯು ದೇಶ ಸೇವೆಯ ಕೆಲಸ. ಐಎಎಸ್‌, ಐಎಫ್‌ಎಸ್‌, ಐಪಿಎಸ್‌ ಅಧಿಕಾರಿಗಳು ದೇವಲೋಕದಿಂದ ಇಳಿದು ಬಂದಿಲ್ಲ ಅಥವಾ ಅವರು ಹುಟ್ಟಿನಿಂದಲೇ ವಿಶೇಷ ಜ್ಞಾನ ಸಂಪಾದಿಸಿಕೊಂಡವರಲ್ಲ. ಪ್ರಾಮಾಣಿಕ ಪ್ರಯತ್ನ ಮಾಡಿದರೆ ಎಲ್ಲರಿಗೂ ವಿದ್ಯೆ ಒಲಿಯುತ್ತದೆ. ಬುದ್ಧಿವಂತಿಕೆ ಯಾರಪ್ಪನ ಸ್ವತ್ತಲ್ಲ. ಬುದ್ಧಿವಂತಿಕೆಯು ಜಾತಿ. ವಂಶಪಾರಂಪರ್ಯವಾಗಿ ಬರುವುದಿಲ್ಲ’ ಎಂದರು.

ಪ್ರತಿಭೆ ಗುರುತಿಸಿ: ‘ಹಿಂದೆ ಹರಿಜನರಿಗೆ, ಕುರಿ ಕಾಯುವವರಿಗೆ, ರೈತರಿಗೆ ಶಿಕ್ಷಣ ಏಕೆ ಎಂಬ ಕಾಲವಿತ್ತು. ಆದರೆ, ಈಗ ಎಲ್ಲರೂ ವಿದ್ಯಾವಂತರಾಗಬಹುದು. ಎಲ್ಲರಿಗೂ ಪ್ರತಿಭೆ ಇರುತ್ತದೆ. ಸುಪ್ತವಾಗಿರುವ ಪ್ರತಿಭೆಯನ್ನು ಗುರುತಿಸಿ ಮಾರ್ಗದರ್ಶನ ನೀಡಿದರೆ ಪ್ರತಿಯೊಬ್ಬರು ಬುದ್ಧಿವಂತರಾಗಬಹುದು’ ಎಂದು ಅಭಿಪ್ರಾಯಪಟ್ಟರು.

‘ಶ್ಲೋಕ ಹೇಳುವವರೆಲ್ಲಾ ಬುದ್ಧಿವಂತರಲ್ಲ. ಅವರೆಲ್ಲಾ ಬಾಯಿ ಪಾಠ ಮಾಡಿ ಶ್ಲೋಕ ಹೇಳುತ್ತಾರೆ. ಪ್ರತಿಯೊಬ್ಬರು ನಿರ್ದಿಷ್ಟ ಗುರಿ ಇಟ್ಟುಕೊಂಡು ಪ್ರಯತ್ನಪಟ್ಟರೆ, ಅಧ್ಯಯನಶೀಲರಾದರೆ, ಛಲವಿದ್ದರೆ ಯಶಸ್ಸು ಸಾಧಿಸಬಹುದು. ವ್ಯಕ್ತಿ ಜಾತಿ ಅಥವಾ ಧರ್ಮದಿಂದ ಎತ್ತರಕ್ಕೆ ಬೆಳೆಯುವುದಿಲ್ಲ. ಬದಲಿಗೆ ಶ್ರಮದಿಂದ ಎತ್ತರಕ್ಕೆ ಬೆಳೆಯುತ್ತಾನೆ’ ಎಂದು ತಿಳಿಸಿದರು.

‘ಗ್ರಾಮೀಣ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಆಡಳಿತಾತ್ಮಕ ಸೇವೆಗೆ ಹೋಗಿ ಜನಸೇವೆ ಮಾಡಬೇಕು. ಸರ್ಕಾರಿ ನೌಕರಿಯಷ್ಟೇ ಜನಸೇವೆಯಲ್ಲ. ಜನಸೇವೆ ಮಾಡಲು ಸಾಕಷ್ಟು ಕ್ಷೇತ್ರಗಳಿವೆ. ಸರ್ಕಾರಿ ಕೆಲಸಕ್ಕೆ ಸೇರುವವರಿಗೆ ಬದ್ಧತೆ ಇರಬೇಕು. ಸಾಮಾಜಿಕ ಬದಲಾವಣೆ ತರುವ ಬದ್ಧತೆ ತೋರಿದರೆ ಮಾತ್ರ ಸರ್ಕಾರಿ ಸೇವೆಗೆ ಸೇರಿದ್ದಕ್ಕೆ ಸಾರ್ಥಕವಾಗುತ್ತದೆ’ ಎಂದರು.

ಕಾಳಜಿ ವಹಿಸಬೇಕು: ‘ಸ್ಥಿತಿವಂತರ ಮಕ್ಕಳು ಹೆಚ್ಚಿನ ವಂತಿಗೆ ಕೊಟ್ಟು ಖಾಸಗಿ ಶಾಲೆಗೆ ಹೋಗುತ್ತಾರೆ. ರೈತರು, ಬಡವರು ಮತ್ತು ಸಾಮಾನ್ಯ ವರ್ಗದ ಜನರ ಮಕ್ಕಳು ಸರ್ಕಾರಿ ಶಾಲಾ ಕಾಲೇಜುಗಳಿಗೆ ಬರುತ್ತಾರೆ. ಹೀಗಾಗಿ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಈ ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ನಾನು ಸಹ ಸರ್ಕಾರಿ ಶಾಲೆಯಲ್ಲಿ ಓದಿದವನು. ಹೀಗಾಗಿ ಸರ್ಕಾರಿ ಶಾಲೆಗಳ ಬಗ್ಗೆ ನನಗೆ ಹೆಚ್ಚು ಕಾಳಜಿಯಿದೆ’ ಎಂದು ಶಾಸಕ ಹಾಗೂ ಕೋಚಿಮುಲ್‌ ಅಧ್ಯಕ್ಷ ಕೆ.ವೈ.ನಂಜೇಗೌಡ ಹೇಳಿದರು.

‘ನಾನು ಶಾಸಕನಾದ ನಂತರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಮೊದಲ ಬಾರಿ ಭೇಟಿ ನೀಡಿದಾಗ ಮೂಲಸೌಕರ್ಯ ಸಮಸ್ಯೆಯಿಂದ ವಿದ್ಯಾರ್ಥಿಗಳು ತುಂಬಾ ತೊಂದರೆ ಅನುಭವಿಸುತ್ತಿರುವುದನ್ನು ಗಮನಿಸಿದೆ. ಬಳಿಕ ಕಾಲೇಜಿಗೆ ರಸ್ತೆ, ವಿದ್ಯುತ್ ದೀಪ ಅಳವಡಿಕೆ, ನೂತನ ಕಟ್ಟಡ, ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಸೇರಿದಂತೆ ಮೂಲಸೌರ್ಕಯ ಕಲ್ಪಿಸಿದೆ’ ಎಂದು ವಿವರಿಸಿದರು.

‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಪ್ರಸರಣ ವಿಭಾಗದ ಪ್ರಧಾನ ವ್ಯವಸ್ಥಾಪಕ ಆಲಿವರ್‌ ಲೆಸ್ಲಿ, ಪ್ರಜಾವಾಣಿ ಡೆಪ್ಯೂಟಿ ಎಡಿಟರ್ ಎಂ.ನಾಗರಾಜ್, ಹಿರಿಯ ಜಿಲ್ಲಾ ವರದಿಗಾರ ಜೆ.ಆರ್‌.ಗಿರೀಶ್‌, ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ವೆಂಕಟೇಶ್‌, ಪುರಸಭೆ ಅಧ್ಯಕ್ಷ ಮುರಳೀಧರ್‌, ಉಪಾಧ್ಯಕ್ಷೆ ಭಾರತಮ್ಮ, ಸದಸ್ಯರಾದ ಮಂಜುನಾಥ್‌, ಚೈತ್ರಾ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.