ADVERTISEMENT

ಕೋಲಾರ: ಸೋಂಕಿತ ಸಾವು, 75ಕ್ಕೇರಿದ ಸಾವಿನ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2020, 15:52 IST
Last Updated 15 ಸೆಪ್ಟೆಂಬರ್ 2020, 15:52 IST

ಕೋಲಾರ: ಜಿಲ್ಲೆಯಲ್ಲಿ ಮಂಗಳವಾರ ಕೊರೊನಾ ಸೋಂಕಿತರೊಬ್ಬರು ಮೃತಪಟ್ಟಿದ್ದು, ಒಟ್ಟಾರೆ ಸೋಂಕಿತರ ಸಾವಿನ ಸಂಖ್ಯೆ 75ಕ್ಕೆ ಏರಿಕೆಯಾಗಿದೆ.

ಜಿಲ್ಲಾ ಕೇಂದ್ರದ ಕೋವಿಡ್‌ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸೋಂಕಿತರ ಪೈಕಿ ಶ್ರೀನಿವಾಸಪುರ ತಾಲ್ಲೂಕಿನ ಸೋಂಕಿತರೊಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ. ಇದರ ಬೆನ್ನಲ್ಲೇ ಹೊಸದಾಗಿ 72 ಮಂದಿಗೆ ಸೋಂಕು ಹರಡಿರುವುದು ದೃಢಪಟ್ಟಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 747ಕ್ಕೆ ಜಿಗಿದಿದೆ.

ವಿಷಮ ಶೀತ ಜ್ವರದಿಂದ ಬಳಲುತ್ತಿರುವವರಲ್ಲಿ ಹೆಚ್ಚಾಗಿ ಸೋಂಕು ಕಾಣಿಸಿಕೊಂಡಿದೆ. ವಿಷಮ ಶೀತ ಜ್ವರವಿರುವ 52 ಮಂದಿಗೆ, ಸೋಂಕಿತರ ಸಂಪರ್ಕದಿಂದ 13 ಮಂದಿಗೆ ಹಾಗೂ ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ 5 ಮಂದಿಗೆ ಸೋಂಕು ಹರಡಿರುವುದು ಖಚಿತವಾಗಿದೆ.

ADVERTISEMENT

ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಅತಿ ಹೆಚ್ಚು 18 ಮಂದಿಗೆ ಸೋಂಕು ತಗುಲಿದೆ. ವಿಷಮ ಶೀತ ಜ್ವರಪೀಡಿತ 16 ಮಂದಿ, ಸೋಂಕಿತರ ಸಂಪರ್ಕದಿಂದ ಒಬ್ಬರಿಗೆ ಮತ್ತು ಆರೋಗ್ಯ ಕಾರ್ಯಕರ್ತರೊಬ್ಬರಿಗೆ ಸೋಂಕು ಬಂದಿದೆ. ಕೋಲಾರ ತಾಲ್ಲೂಕಿನಲ್ಲಿ ವಿಷಮ ಶೀತ ಜ್ವರಕ್ಕೆ ತುತ್ತಾಗಿರುವ 9 ಮಂದಿಗೆ, ಸೋಂಕಿತರ ಸಂಪರ್ಕದಿಂದ 4 ಮಂದಿಗೆ, ಒಬ್ಬರು ಆರೋಗ್ಯ ಕಾರ್ಯಕರ್ತರಿಗೆ ಹಾಗೂ ತೀವ್ರ ಉಸಿರಾಟ ಸಮಸ್ಯೆಯಿರುವ ಒಬ್ಬರಿಗೆ ಸೋಂಕು ತಗುಲಿದೆ.

ಮಾಲೂರು ತಾಲ್ಲೂಕಿನಲ್ಲಿ ವಿಷಮ ಶೀತ ಜ್ವರಕ್ಕೆ ತುತ್ತಾಗಿರುವ 10 ಮಂದಿಗೆ, ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ ಇಬ್ಬರಿಗೆ ಮತ್ತು ಸೋಂಕಿತರ ಸಂಪರ್ಕದಿಂದ ಒಬ್ಬರಿಗೆ, ಬಂಗಾರಪೇಟೆ ತಾಲ್ಲೂಕಿನಲ್ಲಿ ವಿಷಮ ಶೀತ ಜ್ವರವಿರುವ ಇಬ್ಬರಿಗೆ, ಸೋಂಕಿತರ ಸಂಪರ್ಕದಿಂದ ಇಬ್ಬರಿಗೆ ಮತ್ತು ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ ಇಬ್ಬರಿಗೆ, ಕೆಜಿಎಫ್‌ ತಾಲ್ಲೂಕಿನಲ್ಲಿ ಸೋಂಕಿತರ ಸಂಪರ್ಕದಿಂದ 5 ಮಂದಿಗೆ ಮತ್ತು ವಿಷಮ ಶೀತ ಜ್ವರವಿರುವ ಒಬ್ಬರಿಗೆ ಸೋಂಕು ಬಂದಿದೆ.

ಮುಳಬಾಗಿಲು ತಾಲ್ಲೂಕಿನಲ್ಲಿ 14 ಮಂದಿಗೆ ಸೋಂಕು ಹರಡಿರುವುದು ದೃಢಪಟ್ಟಿದ್ದು, ಇವರೆಲ್ಲರೂ ವಿಷಮ ಶೀತ ಜ್ವರದಿಂದ ಬಳಲುತ್ತಿದ್ದಾರೆ. ಸೋಂಕಿತರ ಮನೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿದೆ. ಸೋಂಕಿತರ ಸಂಪರ್ಕಕ್ಕೆ ಬಂದ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕ್ವಾರಂಟೈನ್‌ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.