ADVERTISEMENT

ಬಿಜಿಎಂಎಲ್‌ ಕಾರ್ಮಿಕರಿಗೆ ಅನ್ಯಾಯ: ಬಾಕಿ ಹಣ ಕೊಡಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 26 ಮೇ 2025, 16:00 IST
Last Updated 26 ಮೇ 2025, 16:00 IST
ಕೆಜಿಎಫ್‌ ಬಿಜಿಎಂಎಲ್‌  ನಿವೃತ್ತ ಕಾರ್ಮಿಕ ಸಂಘದ ನೂತನ ಪದಾಧಿಕಾರಿಗಳು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು
ಕೆಜಿಎಫ್‌ ಬಿಜಿಎಂಎಲ್‌  ನಿವೃತ್ತ ಕಾರ್ಮಿಕ ಸಂಘದ ನೂತನ ಪದಾಧಿಕಾರಿಗಳು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು   

ಕೆಜಿಎಫ್‌: ಬಿಜಿಎಂಎಲ್‌ ಕಂಪನಿಯಿಂದ ಕಾರ್ಮಿಕರಿಗೆ ಬರಬೇಕಾದ ಬಾಕಿ ಹಣವನ್ನು ಕೊಡಿಸುವುದಾಗಿ ಸಂಸದ ಮಲ್ಲೇಶಬಾಬು ಹೇಳುತ್ತಿದ್ದಾರೆ. ಕಾರ್ಮಿಕರು ಸಂಸದರಿಂದ ಇಂತಹ ಬೇಜವಾಬ್ದಾರಿ ಹೇಳಿಕೆಯನ್ನು ನಿರೀಕ್ಷಿಸಿರಲಿಲ್ಲ ಎಂದು ಕಾರ್ಮಿಕ ಮುಖಂಡ ಆರ್.ಮೂರ್ತಿ ದೂರಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜಿಎಂಎಲ್‌ ಮುಚ್ಚಿ 25 ವರ್ಷಗಳಾಗಿವೆ. ಇದುವರೆಗೂ ಕಾರ್ಮಿಕರಿಗೆ ನ್ಯಾಯ ಸಿಕ್ಕಿಲ್ಲ. ಕಾರ್ಮಿಕ ಸಂಘದ ನಿರಂತರ ಕಾನೂನು ಹೋರಾಟದ ಬಳಿಕ ಕಾರ್ಮಿಕರ ಪರವಾಗಿ ತೀರ್ಪು ಬಂದಿದೆ. ಕಾರ್ಮಿಕರಿಗ ಬರಬೇಕಾದ ₹52 ಕೋಟಿ ಹಣ ಮತ್ತು ಅದಕ್ಕೆ ಶೇ 6ರಷ್ಟು ಬಡ್ಡಿ ಸೇರಿಸಿ ಕೊಡಬೇಕು ಎಂದು ನ್ಯಾಯಾಲಯ ತಿಳಿಸಿದೆ. ಈ ಆದೇಶವನ್ನು ಜಾರಿಗೊಳಿಸುವುದನ್ನು ಬಿಟ್ಟು ಸಂಸದ ಅಧಿಕಾರಿಗಳು ಹೇಳುವ ಮಾತನ್ನು ಪುನರುಚ್ಚಾರಣೆ ಮಾಡುತ್ತಿದ್ದಾರೆ. ಕಂಪನಿಯನ್ನು ಮುಂದೆ ನಡೆಸುವ ಸಂಸ್ಥೆ ಕಾರ್ಮಿಕರ ಬಾಕಿ ಹಣವನ್ನು ಕೊಡುತ್ತದೆ ಎಂದು ಹೇಳುತ್ತಿದ್ದಾರೆ. ಇದು ಕಾರ್ಮಿಕರ ಪರವಾದ ನಿಲುವಲ್ಲ ಎಂದು ಹೇಳಿದರು.

ಕಾರ್ಮಿಕರ ಬೇಡಿಕೆ ಬಗ್ಗೆ ಸಂಸದ ಮಲ್ಲೇಶಬಾಬು ಸಹಮತ ವ್ಯಕ್ತಪಡಿಸಿದ್ದಾರೆ. ಕಾರ್ಮಿಕರಿಂದ ಮನವಿ ಸ್ವೀಕರಿಸಿ, ಅದನ್ನು ಆಡಳಿತ ವರ್ಗಕ್ಕೆ ನೀಡಬೇಕು. ನಂತರ ಹಿರಿಯ ಅಧಿಕಾರಿಗಳೊಂದಿಗೆ ತಾವು ಮಾತನಾಡುವುದಾಗಿ ಸಂಸದರು ಹೇಳಿದ್ದಾರೆ. ಆದರೆ, ಇತ್ತ ಸ್ಥಳೀಯ ಜೆಡಿಎಸ್‌ ಮುಖಂಡರೊಬ್ಬರು ಕಾರ್ಮಿಕರಿಂದ ಅನಗತ್ಯ ದಾಖಲೆಗಳನ್ನು ಪಡೆಯುತ್ತಿದ್ದಾರೆ. ಸಂಸದರ ಸೂಚನೆಗೆ ವಿರುದ್ಧವಾಗಿ ನಡೆಯುತ್ತಿದ್ದಾರೆ. ಕಾರ್ಮಿಕ ಸಂಘ ಇಂತಹ ನಡೆಯನ್ನು ಖಂಡಿಸುತ್ತದೆ ಎಂದು ಹೇಳಿದರು.

ADVERTISEMENT

ಕಾರ್ಮಿಕರು ವಾಸ ಮಾಡುತ್ತಿರುವ ಮನೆಗಳನ್ನು ಅವರಿಗೇ ನೀಡಲು ನ್ಯಾಯಾಲಯ ಸೂಚನೆ ಮಾಡಿದ್ದರೂ, ಹಿಂದಿನ ಸಂಸದರಾಗಿದ್ದ ಕೆ.ಎಚ್‌.ಮುನಿಯಪ್ಪ, ಎಸ್‌.ಮುನಿಸ್ವಾಮಿ ಮತ್ತು ಈಗಿನ ಸಂಸದ ಮಲ್ಲೇಶಬಾಬು ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ಇನ್ನೂ ಸಾವಿರಾರು ಕಾರ್ಮಿಕರು ಮನೆಗಳ ಸ್ವಾಧೀನ ಪತ್ರ ಪಡೆಯಲು ಹೆಣಗಾಡುತ್ತಿದ್ದಾರೆ. ರಾಜಕೀಯ ಮುಖಂಡರು ಪ್ರಾಮಾಣಿಕ ಪ್ರಯತ್ನ ಮಾಡದೆ ಇರುವುದರಿಂದ ಕಾರ್ಮಿಕರು ನ್ಯಾಯ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜಿಎಂಎಲ್‌ ನಿವೃತ್ತ ಕಾರ್ಮಿಕರ ಸಂಘ ಅಧಿಕೃತವಾಗಿ ಚಾಲ್ತಿಯಲ್ಲಿ ಇಲ್ಲ. ನಾಲ್ಕು ವರ್ಷದಿಂದ ಅದು ನವೀಕರಣ ಮಾಡದೆ ಇರುವುದರಿಂದ ಸಂಘವನ್ನು ಅಮಾನ್ಯ ಮಾಡಲಾಗಿದೆ. ಆದ್ದರಿಂದ ಹೊಸದಾಗಿ ಬಿಜಿಎಂಎಲ್‌‌ ನಿವೃತ್ತ ಕಾರ್ಮಿಕ ಸಂಘವನ್ನು ನೋಂದಾಯಿಸಲಾಗಿದೆ. ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಆರ್‌.ಮೂರ್ತಿ ಹೇಳಿದರು.

ಈ ನಡುವೆ ಬಿಜಿಎಂಎಲ್‌ ಕಾರ್ಮಿಕರು ಒಂದಕ್ಕಿಂತ ಹೆಚ್ಚು ಮನೆಗಳನ್ನು ಹೊಂದಿದರೆ ಅದನ್ನು ವಾಪಸ್‌ ಕೊಡಬೇಕು ಎಂದು ಆಡಳಿತ ವರ್ಗ ತಾಕೀತು ಮಾಡಿದೆ. ಇದೇ 27 ಕೊನೇ ದಿನಾಂಕ ಎಂದು ನಿಗದಿ ಕೂಡ ಮಾಡಿದೆ. ಗಣಿ ಕಾರ್ಮಿಕರು ಅತ್ಯಂತ ಸಣ್ಣದಾದ ಮನೆಯಲ್ಲಿ ವಾಸ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿದ್ದ ಸಂಗತಿ. ಅದರಿಂದ ಪಕ್ಕದ ಮನೆಯನ್ನು ಹೆಚ್ಚುವರಿಯಾಗಿ ಕಂಪನಿ ಅಧಿಕಾರಿಗಳೇ ನೀಡಿದ್ದರು. ಎರಡನ್ನೂ ಸೇರಿಸಿ ಬಳಸಿಕೊಂಡು ಕಾರ್ಮಿಕರು ವಾಸಮಾಡಿದ್ದಾರೆ. ಈಗ ತಾವು ಇಟ್ಟುಕೊಂಡಿರುವ ಹೆಚ್ಚುವರಿ ಮನೆಯ ಮೌಲ್ಯವನ್ನು ಕಟ್ಟಿಕೊಡಲು ಸಹ ಕಾರ್ಮಿಕರು ಸಿದ್ಧರಿದ್ದಾರೆ. ಸರ್ಕಾರ ನಿಗದಿ ಮಾಡಿರುವ ಮೌಲ್ಯವನ್ನು ಪಡೆದು ಆ ಮನೆಗಳನ್ನು ಅವರಿಗೇ ನೀಡಬೇಕು ಎಂದು ಕಾರ್ಮಿಕ ಸಂಘ ಅಗ್ರಹಿಸಿದೆ. ಅದಕ್ಕೆ ಇಲ್ಲಿನ ಅಧಿಕಾರಿಗಳು ಕೂಡ ಸಮ್ಮತಿ ನೀಡಿದ್ದಾರೆ ಎಂದು ಮೂರ್ತಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.