ADVERTISEMENT

ತಹಶೀಲ್ದಾರ್‌ರಿಂದ ಶಿಲಾಶಾಸನ ಪರಿಶೀಲನೆ

ಜಿಲ್ಲಾಧಿಕಾರಿ ಸೂಚನೆ ಮೇರೆಗೆ ದೊಮ್ಮಸಂದ್ರ ಗ್ರಾಮಕ್ಕೆ ಭೇಟಿ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2021, 3:20 IST
Last Updated 16 ಮಾರ್ಚ್ 2021, 3:20 IST
ಮುಳಬಾಗಿಲು ತಾಲ್ಲೂಕಿನ ದೊಮ್ಮಸಂದ್ರ ಗ್ರಾಮದಲ್ಲಿ ರಸ್ತೆ ಬದಿಯಲ್ಲಿನ ಕಲ್ಲಿನ ಶಾಸನ‌ ಪರೀಕ್ಷಿಸುತ್ತಿರುವ ಪ್ರೊ. ಕೆ.ಆರ್.ನರಸಿಂಹನ್
ಮುಳಬಾಗಿಲು ತಾಲ್ಲೂಕಿನ ದೊಮ್ಮಸಂದ್ರ ಗ್ರಾಮದಲ್ಲಿ ರಸ್ತೆ ಬದಿಯಲ್ಲಿನ ಕಲ್ಲಿನ ಶಾಸನ‌ ಪರೀಕ್ಷಿಸುತ್ತಿರುವ ಪ್ರೊ. ಕೆ.ಆರ್.ನರಸಿಂಹನ್   

ಮುಳಬಾಗಿಲು: ತಾಲ್ಲೂಕಿನ ದೊಮ್ಮಸಂದ್ರ ಗ್ರಾಮದಲ್ಲಿ ರಸ್ತೆ ಬದಿಯಲ್ಲಿನ ಕಲ್ಲಿನ ಶಾಸನವೊಂದರ ವಿಷಯ ಜಿಲ್ಲಾಡಳಿತದ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಕೆ.ಎನ್.ರಾಜಶೇಖರ್ ಮತ್ತು ಸಿಬ್ಬಂದಿ ಗ್ರಾಮಕ್ಕೆ ತೆರಳಿ ಪರಿಶೀಲಿಸಿದರು.

ಗ್ರಾಮಸ್ಥರ ಕೋರಿಕೆಯ ಮೇರೆಗೆ ಕೋಲಾರ-ಚಿಕ್ಕಬಳ್ಳಾಪುರ ದೇವಾಲಯ ಮತ್ತು ಶಿಲಾಶಾಸನಗಳ ತಜ್ಞರಾದ ಪ್ರೊ. ಕೆ.ಆರ್.ನರಸಿಂಹನ್ ಮತ್ತು ಡಾ.ಅರಿವು ಶಿವಪ್ಪ ಗ್ರಾಮಕ್ಕೆ ಭಾನುವಾರ ಭೇಟಿ ನೀಡಿ ಪರಿಶೀಲಿಸಿದ್ದರು. ಈ ಶಿಲಾಶಾಸನದ 13ನೇ ಶತಮಾನದ್ದಾಗಿದ್ದು, ಗ್ರಾಮದ ತಿಮ್ಮರಾಯಸ್ವಾಮಿ ದೇವಾಲಯದ ಮುಂದಿನ ರಸ್ತೆಯಲ್ಲಿ ಹುದುಗಲಾಗಿದೆ. ಇದು ಲೋಗ ಎಂಬ ನಾಯಿಗಾಗಿ ಹಾಕಿರುವ ಸ್ಮಾರಕವಾಗಿದೆ. ಕುಳ್ಳಯ್ಯನಾಯಕರ್ ಎಂಬುವನ ಮಗ ಹುಲಿಯ ಜೊತೆ ಹೋರಾಟ ಮಾಡಿದ ನಾಯಿಗಾಗಿನಿರ್ಮಿಸಿದ ಸ್ಮಾರಕವಾಗಿರಬಹುದು ಎನ್ನಲಾಗಿದೆ.

ಮೇಲಿನ ಭಾಗದಲ್ಲಿ ಶಿಲ್ಪದ ಚಿತ್ರಣವಿದೆ. ತಮಿಳು ಲಿಪಿಯಲ್ಲಿರುವ ಶಾಸನವನ್ನು ಎಪಿಗ್ರಾಫಿಯ ಕರ್ನಾಟಕ ಶಾಸನ ಸಂಪುಟದಲ್ಲಿ ಡಾಕ್ಟರ್ ಬಿ.ಎಲ್.ರೈಸ್ ಅವರು 1905ರಲ್ಲಿ ದಾಖಲಿಸಿರುವುದು ವಿಶೇಷವಾಗಿದೆ ಎಂದು ನರಸಿಂಹನ್ ಹಾಗೂ ಶಿವಪ್ಪ ವಿವರಿಸಿದ್ದಾರೆ.

ADVERTISEMENT

‘ಇಂತಹ ವಿಶೇಷ ಹಾಗೂ ಅಪರೂಪದ ಶಾಸನಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕುರುದೇನಹಳ್ಳಿ ಮತ್ತು ಮಂಡ್ಯ ಅತಕೂರು ಗ್ರಾಮಗಳಲ್ಲಿ ಕಾಣ ಸಿಗುತ್ತಿವೆ. ಈಗ ಈ ಗ್ರಾಮದಲ್ಲಿ ಸಿಕ್ಕಿರುವ ಶಾಸನಕ್ಕೆ ತನ್ನದೇ ಆದ ಪ್ರಾಮುಖ್ಯವಿದೆ’ ಎಂದು ಅವರು ತಿಳಿಸಿದರು.

‘ಮೇಲಾಗಾಣಿ ಗ್ರಾಮದಲ್ಲಿ 75 ಹಂದಿಗಳನ್ನು ಕೊಂದ ಲೋಗ ಎಂಬ ನಾಯಿಯ ಸ್ಮಾರಕವಿರುವುದನ್ನು ಗ್ರಾಮಸ್ಥರು ನೆನೆಸಿಕೊಳ್ಳುತ್ತಾರೆ. ಈಗ ಸಿಕ್ಕಿರುವ ಶಾಸನವನ್ನು ಶಿಲಾಶಾಸನದ ತಜ್ಞರು ಮಾಹಿತಿ ಸಂಗ್ರಹಿಸಲು ಕೋರಿದಲ್ಲಿ ತಾಲ್ಲೂಕು ಆಡಳಿತ ಮತ್ತು ಗ್ರಾಮಸ್ಥರ ಪರವಾಗಿ ಅವಕಾಶ ಮಾಡಿಕೊಡಲಾಗುವುದು’ ಎಂದು ಗ್ರಾಮಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಕೆ.ಎನ್.ರಾಜಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಂಗಳೂರು ಮೂಲದ ಶಿಲಾಶಾಸನಗಳ ತಜ್ಞ ಸ್ವಾಮಿನಾಥನ್ ಅವರು ಕೋಲಾರ ಜಿಲ್ಲಾಧಿಕಾರಿ ಡಾ.ಸೆಲ್ವಂರವರಿಗೆ ಮನವಿ ಮಾಡಿ, ಅಪರೂಪದ ಶಾಸನ ರಕ್ಷಿಸಬೇಕು ಎಂದಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ತಾಲ್ಲೂಕು ಆಡಳಿತದ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.