ADVERTISEMENT

ಜಮೀನು ಮಂಜೂರಾತಿ ರದ್ದುಪಡಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2019, 12:34 IST
Last Updated 11 ಸೆಪ್ಟೆಂಬರ್ 2019, 12:34 IST

ಕೋಲಾರ: ‘ತಾಲ್ಲೂಕಿನ ಕಾಜಿಕಲ್ಲಹಳ್ಳಿಯಲ್ಲಿ ಸಾರ್ವಜನಿಕ ಉದ್ದೇಶಕ್ಕೆ ಕೋರಿದ್ದ ಜಮೀನನ್ನು ಅಕ್ರಮವಾಗಿ ಮಂಜೂರು ಮಾಡಿ ಖಾತೆ ಮಾಡಿರುವುದನ್ನು ರದ್ದುಪಡಿಸಬೇಕು’ ಎಂದು ದಲಿತ ಸಂಘರ್ಷ ಸಮಿತಿ (ಭೀಮಶಕ್ತಿ) ಜಿಲ್ಲಾ ಘಟಕದ ಅಧ್ಯಕ್ಷ ಎಂ.ಮುನಿಸ್ವಾಮಿ ಒತ್ತಾಯಿಸಿದರು.

ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕಾಜಿಕಲ್ಲಹಳ್ಳಿಯ ಸರ್ವೆ ನಂಬರ್‌ 2/ಪಿಎ-ಪಿ1ರಲ್ಲಿರುವ 5 ಎಕರೆ 7 ಗುಂಟೆ ಗೋಮಾಳದ ಜಮೀನು ಕೃಷಿಗೆ ಯೋಗ್ಯವಾಗಿಲ್ಲ. ಹೀಗಾಗಿ ಈ ಜಮೀನನ್ನು ಸಾರ್ವಜನಿಕರ ಉಪಯೋಗಕ್ಕೆ ಮೀಸಲಿಟ್ಟು 2017ರ ನ.13ರಂದು ನರಸಾಪುರ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು’ ಎಂದರು.

‘ಈ ಜಮೀನನ್ನು ಸರ್ಕಾರಿ ಶಾಲೆಯ ಆಟದ ಮೈದಾನಕ್ಕೆ ನೀಡುವಂತೆ ಎಸ್‌ಡಿಎಂಸಿ ಸದಸ್ಯರು 2018ರ ಜನವರಿಯಲ್ಲಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದರು. ಸ್ವಚ್ಛ ಭಾರತ್ ಯೋಜನೆಯಡಿ ಘನ ಮತ್ತು ದ್ರವ ತ್ಯಾಜ್ಯ ಘಟಕ ಸ್ಥಾಪಿಸಲು ಈ ಜಮೀನು ಮಂಜೂರು ಮಾಡುವಂತೆ ಗ್ರಾಮ ಪಂಚಾಯಿತಿಯು 2018ರ ಡಿಸೆಂಬರ್‌ನಲ್ಲಿ ಕಂದಾಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿತ್ತು. ನಿವೇಶನರಹಿತರಿಗೆ ಈ ಜಮೀನು ಮಂಜೂರು ಮಾಡುವಂತೆ ಸಾರ್ವಜನಿಕರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು’ ಎಂದು ವಿವರಿಸಿದರು.

ADVERTISEMENT

‘ಆದರೆ, ತಹಶೀಲ್ದಾರ್‌ ಈ ಎಲ್ಲಾ ಮನವಿಗಳನ್ನು ಬದಿಗಿಟ್ಟು ನಾರಾಯಣಸ್ವಾಮಿ ಎಂಬುವರಿಗೆ 2019ರ ಆ.5ರಂದು 2 ಎಕರೆ 30 ಗುಂಟೆ ಜಮೀನು ಮಂಜೂರು ಮಾಡಿ ಖಾತೆ ಮಾಡಿದ್ದಾರೆ. ಈ ಖಾತೆ ರದ್ದುಪಡಿಸಿ ಜಮೀನನ್ನು ಸಾರ್ವಜನಿಕ ಉದ್ದೇಶಕ್ಕೆ ಕಾಯ್ದಿರಿಸಬೇಕು. ಇಲ್ಲದಿದ್ದರೆ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಸಮಿತಿಯ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಬಿ.ಶ್ರೀರಂಗ, ಪ್ರಧಾನ ಕಾರ್ಯದರ್ಶಿ ಕೆ.ವಿ.ನಾರಾಯಣಸ್ವಾಮಿ, ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ರಮೇಶ್, ಸದಸ್ಯ ವಿ.ಮುನಿರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.