ADVERTISEMENT

ಒತ್ತುವರಿ ಜಾಗ ತೆರವಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2019, 10:10 IST
Last Updated 28 ಡಿಸೆಂಬರ್ 2019, 10:10 IST
ಸರ್ಕಾರಿ ಜಮೀನು ಒತ್ತುವರಿ ತೆರವು ಮಾಡುವಂತೆ ಒತ್ತಾಯಿಸಿ ದಲಿತ ಪರ ಸಂಘಟನೆಗಳ ಒಕ್ಕೂಟದ ಸದಸ್ಯರು ಕೋಲಾರ ತಾಲ್ಲೂಕು ಕಚೇರಿ ಎದುರು ಶುಕ್ರವಾರ ಧರಣಿ ನಡೆಸಿದರು.
ಸರ್ಕಾರಿ ಜಮೀನು ಒತ್ತುವರಿ ತೆರವು ಮಾಡುವಂತೆ ಒತ್ತಾಯಿಸಿ ದಲಿತ ಪರ ಸಂಘಟನೆಗಳ ಒಕ್ಕೂಟದ ಸದಸ್ಯರು ಕೋಲಾರ ತಾಲ್ಲೂಕು ಕಚೇರಿ ಎದುರು ಶುಕ್ರವಾರ ಧರಣಿ ನಡೆಸಿದರು.   

ಕೋಲಾರ: ಸರ್ಕಾರಿ ಜಮೀನು ಒತ್ತುವರಿ ತೆರವು ಮಾಡುವಂತೆ ಒತ್ತಾಯಿಸಿ ದಲಿತ ಪರ ಸಂಘಟನೆಗಳ ಒಕ್ಕೂಟದ ಸದಸ್ಯರು ಇಲ್ಲಿನ ತಾಲ್ಲೂಕು ಕಚೇರಿ ಎದುರು ಶುಕ್ರವಾರ ಧರಣಿ ನಡಸಿದರು.

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ನಾಗೇಶ್ ಮಾತನಾಡಿ, ‘ಗ್ರಾಮಗಳಲ್ಲಿನ ರಾಜಕಾಲುವೆ, ಸ್ಮಶಾನ, ಗುಂಡುತೋಪು ಜಾಗ ಒತ್ತುವರಿಯಾಗಿದೆ, ಒತ್ತುವರಿದಾರರ ವಿರುದ್ಧ ಕ್ರಮಕೈಗೊಂಡು ಒತ್ತುವರಿ ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಮನವಿ ನೀಡಿದ್ದರೂ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ’ ಎಂದು ದೂರಿದರು.

‘ತಾಲ್ಲೂಕಿನ ಮಲ್ಲಂಡಹಳ್ಳಿಯ ಕೆರೆಯ ರಾಜಕಾಲುವೆ ಮುಚ್ಚಿಸಿ ರಸ್ತೆ ಮಾಡಲಾಗಿದೆ. ಸರ್ವೇಯಲ್ಲಿ ಸರ್ಕಾರಿ ಹದ್ದಿಗಿಡದ ಹಳ್ಳ ಎಂದು ನಮೂದಾಗಿದ್ದರೂ ರಸ್ತೆ ತೆರವುಗೊಳಿಸುವಲ್ಲಿ ತಹಸೀಲ್ದಾರ್ ವಿಫಲರಾಗದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಪುರಹಳ್ಳಿ ಗ್ರಾಮದ ೨೬ ಗುಂಟೆ ಸ್ಮಶಾನ ಜಾಗ ಮಂಜೂರಾಗಿದ್ದು ಪಕ್ಕದ ಜಮೀನಿನ ದೇವರಾಜ್ ೯ ಗುಂಟೆ ಜಮೀನು ಒತ್ತುವರಿ ಮಾಡಿಕೊಂಡಿದ್ದಾರೆ. ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ ಹೂಳಲು ಜಾಗ ಇಲ್ಲ, ಒತ್ತುವರಿ ತೆರವುಗೊಳಿಸದಿದ್ದರೆ ಶವವನ್ನು ತಾಲ್ಲೂಕು ಕಚೇರಿ ಎದುರು ತಂದಿಡುವುದಾಗಿ ಎಚ್ಚರಿಕೆ ನೀಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಶೋಭಿತಾ, ‘ಕೋಲಾರಮ್ಮ ಕೆರೆ ಸ್ವಚ್ಛತಾ ಕಾರ್ಯ ಸೇರಿದಂತೆ ಇನ್ನಿತರೆ ಆದ್ಯತೆ ಕೆಲಸದ ಹಿನ್ನೆಲೆಯಲ್ಲಿ ಒತ್ತುವರಿ ತೆರವು ಇನ್ನಿತರೆ ಕೆಲಸ ಕಾರ್ಯಗಳು ವಿಳಂಭವಾಗಿದೆ. ಆದಷ್ಟು ಬೇಗ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಒಕ್ಕೂಟದ ಸದಸ್ಯರಾದ ಜಿ.ಯಲ್ಲಪ್ಪ, ಹನುಮಂತಪ್ಪ, ಮುನಿ ಆಂಜಪ್ಪ, ರಮೇಶ್, ಮಂಜುನಾಥ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.