ADVERTISEMENT

ಸಾಲ ಮಂಜೂರು ಮಾಡಲು ಒತ್ತಾಯ

ರೈತ ಸಂಘದಿಂದ ಲೀಡ್ ಬ್ಯಾಂಕ್ ಎದುರು ಧರಣಿ

​ಪ್ರಜಾವಾಣಿ ವಾರ್ತೆ
Published 27 ಜನವರಿ 2020, 17:30 IST
Last Updated 27 ಜನವರಿ 2020, 17:30 IST
ಕೋಲಾರದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಲೀಡ್ ಬ್ಯಾಂಕ್ ಎದುರು ಸೋಮವಾರ ಧರಣಿ ನಡೆಸಿದರು.
ಕೋಲಾರದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಲೀಡ್ ಬ್ಯಾಂಕ್ ಎದುರು ಸೋಮವಾರ ಧರಣಿ ನಡೆಸಿದರು.   

ಕೋಲಾರ: ಸ್ವ ಉದ್ಯೋಗ ಯೋಜನೆಯಡಿ ಫಲಾನುಭವಿಗಳಿಗೆ ಸಾಲ ಮಂಜೂರು ಮಾಡದ ಬ್ಯಾಂಕ್‌ಗಳ ಕ್ರಮವನ್ನು ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಚಿಲ್ಲರೆ ಹಿಡಿದು ನಗರದ ಲೀಡ್ ಬ್ಯಾಂಕ್ ಎದುರು ಸೋಮವಾರ ಧರಣಿ ನಡೆಸಿದರು.

ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ‘ಕೇಂದ್ರ ಮತ್ತು ರಾಜ್ಯ ಸರ್ಕಾರ ನಿರುದ್ಯೋಗಿಗಳು ಸ್ವ ಉದ್ಯೋಗ ರೂಪಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ವಿವಿಧ ಯೋಜನೆಗಳನ್ನು ಜಾರಿ ಮಾಡಿದ್ದು, ಫಲಾನುಭವಿಗಳಿಗೆ ಸಾಲ ಕೊಡದೆ ಸತ್ತಾಯಿಸುತ್ತಿದ್ದಾರೆ’ ಎಂದು ದೂರಿದರು.

‘ಕೆಲಸಕ್ಕಾಗಿ ಲಂಚ ಕೊಡಲಾಗದೆ. ಬಡ ನಿರುದ್ಯೋಗಿಗಳು ತನ್ನ ಜೀವನಕ್ಕಾಗಿ ಸ್ವ-ಉದ್ಯೋಗದತ್ತ ಮುಖ ಮಾಡುತ್ತಿದ್ದಾನೆ. ಸಾಲಕ್ಕಾಗಿ ಅರ್ಜಿ ಹಾಕಿದರೆ 101 ಮಾನದಂಡಗಳನ್ನು ವಿಧಿಸಿ ಸುತ್ತಾಡಿಸುತ್ತಾರೆ. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಬಡವರಿಗೆ ವಂಚನೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಕೆಡಿಪಿ ಸಭೆ ಹಾಗೂ ಮತ್ತಿತರ ಸಾರ್ವಜನಿಕರ ಸಮಾರಂಭಗಳಲ್ಲಿ ನೆಪಮಾತ್ರಕ್ಕೆ ಬ್ಯಾಂಕ್ ಅಧಿಕಾರಿಗಳಿಗೆ ನಿರುದ್ಯೋಗಿಗಳಿಗೆ ಸಾಲ ನೀಡುವಂತೆ ಎಚ್ಚರಿಕೆ ನೀಡುವ ಆದೇಶ ಪತ್ರಿಕಾ ಮಾದ್ಯಮಗಳಿಗೆ ಸೀಮತಿವಾಗಿದ್ದಾರೆಯೇ’ ಎಂದು ಪ್ರಶ್ನಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ‘ವಿವಿಧ ಯೋಜನೆಗಳಲ್ಲಿ ಆಯ್ಕೆಯಾಗಿರುವ ಫಲಾನುಭವಿಗಳ ಭವಿಷ್ಯವನ್ನು ಕೈಗಾರಿಕಾ ಜಂಟಿ ನಿರ್ದೇಶಕರು, ಜವಳಿ ನಿರ್ದೇಶಕರು ಹಾಗೂ ಬ್ಯಾಂಕ್ ಅಧಿಕಾರಿಗಳು ಆಯ್ಕೆಯಾಗಿರುವ ಫಲಾನುಭವಿಗಳ ಸಾಲ ನೀಡಲು ಸ್ಥಳೀಯ ಬ್ಯಾಂಕ್ ಅಧಿಕಾರಿಗಳು ನೂರೊಂದು ನೆಪ ಹೇಳುತ್ತಾರೆ’ ಎಂದು ಆಕ್ರೋಶವ್ಯಕ್ತಪಡಿಸಿದರು.

‘ಗುತ್ತಿಗೆದಾರರಿಗೆ, ಕಂಪನಿಗಳವರಿಗೆ ಕೇವಲ ೨೪ ಗಂಟೆಯಲ್ಲಿ ಸಾಲ ಮಂಜೂರಾಗುತ್ತದೆ. ಕಮೀಷನ್ ಕೊಡಲು ಆಗದ ಬಡಪಾಯಿಗಳು ಸರ್ಕಾರದ ಯೋಜನೆಗಳನ್ನು ಪಡೆಯಲಾಗದೆ ಮತ್ತೊಂದಡೆ ಕೆಲಸವೂ ಸಿಗದೆ ಅಕ್ರಮ ಚಟುವಟಿಕೆಗಳತ್ತ ಮುಖಮಾಡುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಹೊಸಮಠ್, ಕೂಡಲೇ ಜಿಲ್ಲೆಯ ಎಲ್ಲಾ ಬ್ಯಾಂಕ್ ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಬಗೆಹರಿಸಿ ಪಲಾನುಭವಿಗಳಿಗೆ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದರು.

ಸಂಘದ ಜಿಲ್ಲಾ ಘಟಕದ ಸಂಚಾಲಕ ಕೆ.ಶ್ರೀನಿವಾಸಗೌಡ, ಮಹಿಳಾ ಅಧ್ಯಕ್ಷೆ ಎ.ನಳಿನಿ, ಗೌರವಾಧ್ಯಕ್ಷ ತಿಮ್ಮಣ್ಣ, ಸದಸ್ಯರಾದ ವೆಂಕಟೇಶಪ್ಪ, ನಾಗೇಶ್, ಮಂಜುನಾಥ, ಕೇಶವ, ವೇಣು, ರಾಜು, ವೆಂಕಟೇಶಪ್ಪ, ಸಹದೇವಣ್ಣ, ವೆಂಕಟೇಶ್, ಗಣೇಶ್, ಪ್ರತಾಪ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.