ADVERTISEMENT

ರಜೆಗೆ ಒತ್ತಾಯ: ಕಾರ್ಮಿಕರ ಧರಣಿ

ಸುರಕ್ಷತೆ ನಿರ್ಲಕ್ಷಿಸಿ ಜೀವದ ಜತೆ ಚೆಲ್ಲಾಟ: ಆಡಳಿತ ಮಂಡಳಿ ವಿರುದ್ಧ ಧರಣಿನಿರತರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2020, 15:42 IST
Last Updated 23 ಮಾರ್ಚ್ 2020, 15:42 IST
ಕೊರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ರಜೆ ನೀಡುವಂತೆ ಒತ್ತಾಯಿಸಿ ಕೋಲಾರ ತಾಲ್ಲೂಕಿನ ಬೆತ್ತನಿ ಗ್ರಾಮದ ಬಳಿಯ ಶಾಹಿ ಸಿದ್ಧ ಉಡುಪು ಕಾರ್ಖಾನೆ ಕಾರ್ಮಿಕರು ಸೋಮವಾರ ಧರಣಿ ನಡೆಸಿದರು.
ಕೊರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ರಜೆ ನೀಡುವಂತೆ ಒತ್ತಾಯಿಸಿ ಕೋಲಾರ ತಾಲ್ಲೂಕಿನ ಬೆತ್ತನಿ ಗ್ರಾಮದ ಬಳಿಯ ಶಾಹಿ ಸಿದ್ಧ ಉಡುಪು ಕಾರ್ಖಾನೆ ಕಾರ್ಮಿಕರು ಸೋಮವಾರ ಧರಣಿ ನಡೆಸಿದರು.   

ಕೋಲಾರ: ಕೊರೊನಾ ಸೋಂಕಿನ (ಕೋವಿಡ್‌–19) ಭೀತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕಾರ್ಖಾನೆಗೆ ರಜೆ ನೀಡಬೇಕೆಂದು ಎಂದು ಒತ್ತಾಯಿಸಿ ತಾಲ್ಲೂಕಿನ ಬೆತ್ತನಿ ಗ್ರಾಮದ ಬಳಿಯ ಶಾಹಿ ಸಿದ್ಧ ಉಡುಪು ಕಾರ್ಖಾನೆ ಕಾರ್ಮಿಕರು ಸೋಮವಾರ ಧರಣಿ ನಡೆಸಿದರು.

‘ದೇಶ ಹಾಗೂ ರಾಜ್ಯದೆಲ್ಲೆಡೆ ಕೊರೊನಾ ಸೋಂಕಿನ ಭೀತಿ ಹೆಚ್ಚಿದೆ. ಜಿಲ್ಲೆಯಲ್ಲಿ ಈವರೆಗೆ ಕೊರೊನಾ ಸೋಂಕಿನ ಪ್ರಕರಣ ಪತ್ತೆಯಾಗಿಲ್ಲ. ಕಾರ್ಖಾನೆ ಆಡಳಿತ ಮಂಡಳಿಯು ಕಾರ್ಮಿಕರ ಸುರಕ್ಷತೆ ನಿರ್ಲಕ್ಷಿಸಿ ಜೀವದೊಂದಿಗೆ ಚೆಲ್ಲಾಟವಾಡುತ್ತಿದೆ’ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

‘ಶಾಹಿ ಸಿದ್ಧ ಉಡುಪು ಕಾರ್ಖಾನೆಗೆ ಬರುವ ಬಹುತೇಕ ಹೆಣ್ಣು ಮಕ್ಕಳು ಬಡವರಾಗಿದ್ದಾರೆ. ಅವರಿಗೆ ಕೊರೊನಾ ಸೋಂಕು ತಗುಲಿದರೆ ಚಿಕಿತ್ಸೆ ಪಡೆಯಲು ಆರ್ಥಿಕವಾಗಿ ಸಶಕ್ತರಾಗಿಲ್ಲ. ಕಾರ್ಖಾನೆ ಆಡಳಿತ ಮಂಡಳಿಗೆ ಕಾರ್ಮಿಕರ ಸುರಕ್ಷತೆಗಿಂತ ಕೆಲಸವೇ ಮುಖ್ಯವಾಗಿದೆ’ ಎಂದು ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕದ ಉಪಾಧ್ಯಕ್ಷೆ ವಿ.ಗೀತಾ ಕಿಡಿಕಾರಿದರು.

ADVERTISEMENT

‘ಸಿದ್ಧ ಉಡುಪು ಕಾರ್ಖಾನೆಗಳಲ್ಲಿನ ಕಾರ್ಮಿಕರಿಗೆ ವೇತನಸಹಿತ ರಜೆ ನೀಡುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ. ಜತೆಗೆ ಕಾರ್ಮಿಕರನ್ನು ಕೆಲಸಕ್ಕೆ ನಿಯೋಜಿಸುವ ಪ್ರಕ್ರಿಯೆಯಲ್ಲಿ ರೋಟೆಷನ್‌ ಪದ್ಧತಿ ಅನುಸರಿಸುವಂತೆ ಸೂಚಿಸಿದೆ. ಆದರೆ, ಕಾರ್ಖಾನೆ ಆಡಳಿತ ಮಂಡಳಿಯು ಸರ್ಕಾರದ ಆದೇಶ ಉಲ್ಲಂಘಿಸಿ ಕಾರ್ಮಿಕರಿಂದ ಕೆಲಸ ಮಾಡಿಸುತ್ತಿದೆ’ ಎಂದು ದೂರಿದರು.

ವೇತನ ಕಡಿತ: ‘ಕಾರ್ಖಾನೆಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರ ಬಳಿ ರಜೆ ಘೋಷಿಸುವಂತೆ ಕೇಳಿದ್ದಕ್ಕೆ ಆಡಳಿತ ಮಂಡಳಿಯಿಂದ ಆದೇಶ ಬರಬೇಕು ಎಂದು ಸಬೂಬು ಹೇಳುತ್ತಾರೆ. ಜಿಲ್ಲೆಯಾದ್ಯಂತ ಕೆಎಸ್‌ಆರ್‌ಟಿಸಿ ಬಸ್‌ ಸೇರಿದಂತೆ ಸಾರಿಗೆ ಸೇವೆ ಸ್ಥಗಿತಗೊಂಡಿರುವುದರಿಂದ ಕೆಲಸಕ್ಕೆ ಬರಲು ಸಮಸ್ಯೆಯಾಗಿದೆ. ಕಾರ್ಖಾನೆಯು ಸಾರಿಗೆ ಸೌಲಭ್ಯ ಸಹ ಕಲ್ಪಿಸಿಲ್ಲ’ ಎಂದು ಧರಣಿನಿರತ ಕಾರ್ಮಿಕರು ಅಳಲು ತೋಡಿಕೊಂಡರು.

‘ಕೆಲಸಕ್ಕೆ ಗೈರಾದರೆ ವೇತನ ಕಡಿತಗೊಳಿಸುವುದಾಗಿ ಕಾರ್ಖಾನೆಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರು ಬೆದರಿಸುತ್ತಾರೆ. ಕೆಲಸ ನಂಬಿ ಬದುಕು ಸಾಗಿಸುತ್ತಿದ್ದೇವೆ. ಆಡಳಿತ ಮಂಡಳಿಯು ಕೊರೊನಾ ಸೋಂಕು ತಡೆಗೆ ಕನಿಷ್ಠ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ. ಮುಖಗವಸು ನೀಡಿಲ್ಲ ಮತ್ತು ಕೈ ತೊಳೆಯಲು ಸ್ಯಾನಿಟೈಸರ್‌ ವ್ಯವಸ್ಥೆ ಮಾಡಿಲ್ಲ. ಕೊರೊನಾ ಸೋಂಕಿನ ಭೀತಿಯಿಂದ ಪ್ರತಿನಿತ್ಯ ಜೀವ ಭಯದಲ್ಲೇ ಕೆಲಸ ಮಾಡುತ್ತಿದ್ದೇವೆ’ ಎಂದು ಅಲವತ್ತುಕೊಂಡರು.

ವೇತನಸಹಿತ ರಜೆ: ‘ಸಮಸ್ಯೆ ತೀವ್ರಗೊಳ್ಳುವ ಮೊದಲು ವೇತನಸಹಿತ ರಜೆ ನೀಡಬೇಕು. ಇಲ್ಲವೇ ಕೇಂದ್ರ ಸರ್ಕಾರದ ಆದೇಶದಂತೆ ರೋಟೆಷನ್‌ ಪದ್ಧತಿಯಲ್ಲಿ ಕಾರ್ಮಿಕರನ್ನು ಕೆಲಸಕ್ಕೆ ನಿಯೋಜಿಸಬೇಕು. ಕೊರೊನಾ ಸೋಂಕು ತಡೆಗೆ ಕಾರ್ಖಾನೆಯಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳಬೇಕು. ಕಾರ್ಮಿಕರಿಗೆ ಗುಣಮಟ್ಟದ ಮುಖಗವಸು ವಿತರಿಸಬೇಕು’ ಎಂದು ಮನವಿ ಮಾಡಿದರು.

ಕಾರ್ಖಾನೆ ಕಾರ್ಮಿಕರಾದ ಯಶೋದಾ, ವೆಂಕಟಮ್ಮ, ಕವಿತಾ, ಮಂಜುಳಾ ಸೇರಿದಂತೆ ಸಾವಿರಕ್ಕೂ ಹೆಚ್ಚು ಕಾರ್ಮಿಕರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.