ADVERTISEMENT

ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯ: ಧರಣಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2020, 13:18 IST
Last Updated 13 ಫೆಬ್ರುವರಿ 2020, 13:18 IST
ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆ ಸದಸ್ಯರು ಕೋಲಾರದಲ್ಲಿ ಗುರುವಾರ ಧರಣಿ ನಡೆಸಿದರು.
ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆ ಸದಸ್ಯರು ಕೋಲಾರದಲ್ಲಿ ಗುರುವಾರ ಧರಣಿ ನಡೆಸಿದರು.   

ಕೋಲಾರ: ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆ ಸದಸ್ಯರು ಇಲ್ಲಿ ಗುರುವಾರ ಧರಣಿ ನಡೆಸಿದರು.

‘ರಾಜ್ಯದಲ್ಲಿ ಆಡಳಿತ ನಡೆಸಿದ ಎಲ್ಲಾ ರಾಜಕೀಯ ಪಕ್ಷಗಳು ಸರೋಜಿ ಮಹಿಷಿ ವರದಿ ನಿರ್ಲಕ್ಷಿಸಿವೆ. ಪಕ್ಷಗಳಿಗೆ ಕನ್ನಡಿಗರ ಬಗ್ಗೆ ಕಾಳಜಿಯಿಲ್ಲ’ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

‘1986ರಲ್ಲೇ ಸರೋಜಿನಿ ಮಹಿಷಿ ವರದಿ ಸರ್ಕಾರದ ಕೈಸೇರಿದೆ. ಆ ನಂತರ ರಾಜ್ಯದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಸರ್ಕಾರಗಳು ವರದಿ ಜಾರಿಗೊಳಿಸುವಲ್ಲಿ ವಿಫಲವಾಗಿದ್ದು, ಕನ್ನಡಿಗರಿಗೆ ಅನ್ಯಾಯ ಎಸಗಿವೆ. ರಾಜ್ಯದ ಐಟಿ–ಬಿಟಿ ಕಂಪನಿಗಳಲ್ಲಿನ ಉದ್ಯೋಗ ಅವಕಾಶಗಳು ಹೊರಗಿನವರ ಪಾಲಾಗುತ್ತಿವೆ’ ಎಂದು ಸಂಘಟನೆಯ ರಾಜ್ಯ ಘಟಕದ ಸಂಸ್ಥಾಪಕ ಅಧ್ಯಕ್ಷ ಜಯದೇವ ಪ್ರಸನ್ನ ದೂರಿದರು.

ADVERTISEMENT

‘ಈ ಹಿಂದೆ ಲಾಲೂ ಪ್ರಸಾದ್ ಯಾದವ್ ಅವರು ರೈಲ್ವೆ ಸಚಿವರಾಗಿದ್ದಾಗ ಬಿಹಾರ ರಾಜ್ಯದವರಿಗೆ ಇಲಾಖೆಯಲ್ಲಿ ಉದ್ಯೋಗ ಕಲ್ಪಿಸುವ ಇಚ್ಛಾಶಕ್ತಿ ತೋರಿದ್ದರು. ಆದರೆ, ರಾಜ್ಯದ ಜನಪ್ರತಿನಿಧಿಗಳಿಗೆ ಕನ್ನಡಿಗರ ಉದ್ಯೋಗದ ವಿಚಾರದಲ್ಲಿ ಆ ಇಚ್ಛಾಶಕ್ತಿ ಇಲ್ಲ. ಪಕ್ಷಗಳು ರಾಜಕೀಯ ಕಾರಣಕ್ಕೆ ಕರ್ನಾಟಕ ಬಂದ್‌ಗೆ ಬೆಂಬಲ ಕೊಟ್ಟಿಲ್ಲ’ ಎಂದು ಕಿಡಿಕಾರಿದರು.

ಆಂಧ್ರ ಮಾದರಿ: ‘ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್‌ಮೋಹನ್‌ ರೆಡ್ಡಿ ಅವರು ಅಧಿಕಾರಕ್ಕೆ ಬಂದ ತಕ್ಷಣ ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿ ಕಾಯ್ದೆ ಜಾರಿಗೆ ತಂದರು. ರಾಜ್ಯದಲ್ಲೂ ಅದೇ ಮಾದರಿ ಅನುಸರಿಸಬೇಕು. ಖಾಸಗಿ ವಲಯದಲ್ಲಿ ಶೇ 75ರಷ್ಟು ಉದ್ಯೋಗವನ್ನು ಕನ್ನಡಿಗರಿಗೆ ಮೀಸಲಿಡಬೇಕು. ಈ ಬೇಡಿಕೆ ಈಡೀರಿಸದಿದ್ದರೆ ತೀವ್ರ ಹೋರಾಟ ನಡೆಸುತ್ತೇವೆ’ ಎಂದು ಧರಣಿ ನಿರತರು ಎಚ್ಚರಿಕೆ ನೀಡಿದರು.

ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಸಿ.ರಮೇಶ್, ಖಜಾಂಚಿ ಆಲ್ಬರ್ಟ್, ಬೆಂಗಳೂರು ನಗರ ಘಟಕದ ಅಧ್ಯಕ್ಷೆ ಸ್ನೇಹ, ಸದಸ್ಯರಾದ ಮಂಜು ಭಾರ್ಗವಿ, ಸುನಿತಾ, ಮಂಜುಳಾ, ಅಸ್ಲಂ, ಆನಂದ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.