ಕೋಲಾರ: ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸುವ ಮೂಲಕ ಜಾತಿರಹಿತ ಸಮಾಜವನ್ನು ಕಟ್ಟಬಹುದು. ಅದು ಕಷ್ಟದ ಕೆಲಸವಾದರೂ ಮಾಡಲೇಬೇಕಾದ ಕೆಲಸ. ಮೇಲುಕೀಳಿನ ತಾರತಮ್ಯ ನಿವಾರಣೆಯಾಗಲು ಅಂತರ್ಜಾತಿ ವಿವಾಹ ದೊಡ್ಡ ದಾರಿ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ತಿಳಿಸಿದರು.
ಅರಿವು ಭಾರತ ಸಂಸ್ಥೆ ಮತ್ತು ಪ್ರಕ್ರಿಯೆ ಸಂಘಟನೆ ಆಶ್ರಯದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ‘ನಮ್ಮ ನಡೆ ಅಸ್ಪೃಶ್ಯತೆ ಮುಕ್ತ ಭಾರತದೆಡೆಗೆ’ ಶೀರ್ಷಿಕೆಯಡಿ ನೆನಮನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಸಹಭೋಜನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ವಾಸ್ಥ್ಯ ಸಮಾಜವನ್ನು ನೆಲೆಗೊಳಿಸಲು ಶ್ರಮಿಸಿದ ಮಹಾತ್ಮ ಗಾಂಧೀಜಿಯನ್ನು ಪೂಜಿಸಿದರೆ ಸಾಲದು, ಅವರ ಆಶಯಗಳನ್ನು ಈಡೇರಿಸುವ ಕೆಲಸ ಮಾಡಬೇಕು ಎಂದರು.
ಗಾಂಧಿ ಪ್ರತಿಪಾದಿಸಿದ ಶಾಂತಿ, ಅಹಿಂಸೆ, ಅಸ್ಪೃಶ್ಯತೆ ನಿವಾರಣೆ, ಆತ್ಮಗೌರವ ಮೊದಲಾದ ಆಶಯಗಳನ್ನು ಈಡೇರಿಸುವ ಕೆಲಸಗಳಾಗಬೇಕು. ಮಾತಿಗಿಂತ ಕೃತಿಯ ಮೂಲಕ ಗಾಂಧೀಜಿಯನ್ನು ಗೌರವಿಸಲು ಅರಿವು ಭಾರತ ಸಹಭೋಜನ ಹಮ್ಮಿಕೊಂಡಿದೆ ಎಂದು ಹೇಳಿದರು.
ನಾಲ್ಕು ಕದ ತಟ್ಟಿದರೆ ಒಂದಾದರೂ ತೆರೆಯುತ್ತದೆ ಎಂಬುದನ್ನು ಅರಿವು ಭಾರತ ಹನ್ನೊಂದು ವರ್ಷಗಳಿಂದ ಸಾಧಿಸಿ ತೋರಿಸಿಕೊಟ್ಟಿದೆ. ಅರಿವು ಭಾರತ ಎಂಬುದು ಬಲಿಷ್ಠ ಕುಟುಂಬವಾಗಿ ಬೆಳೆಯಬೇಕು. ಪ್ರಯತ್ನದಿಂದಷ್ಟೇ ಬದಲಾವಣೆ ಸಾಧ್ಯವಾಗುತ್ತದೆ. ಎಲ್ಲಾ ಸಂಘ ಸಂಸ್ಥೆಗಳು ಈ ಕೆಲಸಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಮಾತನಾಡಿ, ‘ಸಮಾಜ ಸುಧಾರಣೆಯ ಉತ್ತಮ ಕಾರ್ಯಕ್ರಮಗಳನ್ನು ಭಾರತದ ಹಳ್ಳಿಗಳಿಗೆ, ಗಲ್ಲಿಗಳಿಗೆ ತೆಗೆದುಕೊಂಡು ಹೋಗಬೇಕು. ಹಳ್ಳಿಗಳನ್ನು ಬಲಪಡಿಸಿದರೆ ಭಾರತವನ್ನು ಬಲಪಡಿಸಬಹುದು’ ಎಂದರು.
ಸಹಭೋಜನ ಏರ್ಪಡಿಸಿದ ನೆನಮನಹಳ್ಳಿ ಚಂದ್ರಶೇಖರ್ ಅವರಿಗೆ ಜಿಲ್ಲಾಧಿಕಾರಿಯು ‘ಗ್ರಾಮರತ್ನ’ ಪುರಸ್ಕಾರ ನೀಡಿ ಗೌರವಿಸಿದರು. ಅಧಿಕಾರಿಗಳು, ಮುಖಂಡರು, ಗ್ರಾಮಸ್ಥರು ಎಲ್ಲರೂ ಜೊತೆಯಲ್ಲಿ ಕುಳಿತು ಮುದ್ದೆ ಊಟ ಸವಿದರು. ಕಲಾವಿದರು ವಿವಿಧ ಕಲಾ ಪ್ರದರ್ಶನ ನೀಡಿದರು. ಗಣ್ಯರು ಗ್ರಾಮದಲ್ಲಿ ಗಿಡ ನೆಟ್ಟರು, ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೋಪಾಲಗೌಡ, ದಲಿತ ಮುಖಂಡರಾದ ಟಿ.ವಿಜಯಕುಮಾರ್, ಪಂಡಿತ್ ಮುನಿವೆಂಕಟಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮಿ, ಓಲಿವಿಯ ಓಂ ಪ್ರಕಾಶ್, ಅರಿವು ಭಾರತದ ಶಿವಪ್ಪ ಅರಿವು, ವಾರಧಿ ಮಂಜುನಾಥರೆಡ್ಡಿ, ವಕೀಲ ಸೊಣ್ಣಪ್ಪ ಸತೀಶ್, ಹಾಡುಗಾರ ವೆಂಕಟಾಚಲಪತಿ, ನಿರೂಪಕಿ ಕೊಂಡರಾಜನಹಳ್ಳಿ ಮಂಜುಳಾ, ಪ್ರಕ್ರಿಯೆ ಸಂಸ್ಥೆಯ ಸೆಲ್ವನಾಥನ್, ಗ್ರೇಸಿ, ಮಾರ್ಜೇನಹಳ್ಳಿ ಬಾಬು, ಗಮನ ಶಾಂತಮ್ಮ, ಪಿಡಿಒ ಸವಿತಾ, ವಕೀಲ ಬಿ.ವಿ.ಶ್ರೀನಿವಾಸ ರಾವ್, ಸತೀಶ್, ಶಿಕ್ಷಕ ರಾಮಚಂದ್ರ, ಗೋಪಿ ಕರವಿ, ರಾಮಪ್ಪ, ಪಾರೇಹೊಸಹಳ್ಳಿ ನಾರಾಯಣಪ್ಪ, ಗಣೇಶ್, ರಾಧಾಮಣಿ, ನಂಜಾಮರಿ ಭಾಗವಹಿಸಿದ್ದರು.
ಅಸ್ಪೃಶ್ಯತೆ ನಿರ್ಮೂಲನೆಗೆ ಹಳ್ಳಿಯ ಜನರ ಮನಸ್ಸನ್ನು ಗೆಲ್ಲಬೇಕಿದೆ. ಹೆಚ್ಚು ಅಂತರ್ಜಾತಿ ವಿವಾಹಗಳು ನಡೆಯಬೇಕಿದೆ. ಮಾತಿಗಿಂತ ಕೃತಿಯಲ್ಲೂ ಮಾಡಿ ತೋರಿಸಬೇಕಿದೆಎಂ.ಆರ್.ರವಿ ಜಿಲ್ಲಾಧಿಕಾರಿ
ಎಲ್ಲರಿಗೂ ಮನೆಯ ಪ್ರವೇಶ ಕೊಡಿಸುವ ಈ ಕಾರ್ಯಕ್ರಮ ಮೌನ ಚಳವಳಿಯಾಗಿ ಸಾಗುತ್ತಿದೆ. ಒಂದು ದಿನಕ್ಕೆ ಪರಿಣಾಮ ಬೀರುವಂಥದ್ದಲ್ಲ ದೀರ್ಘ ಕಾಲದಲ್ಲಿ ಖಂಡಿತ ಪರಿಣಾಮ ಬೀರುವಂಥದ್ದುನಿಖಿಲ್ ಬಿ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಮನೆ ಮನೆ ಚಳವಳಿ ಆಗಲಿ
ಅರಿವು ಭಾರತ ನಡೆಸುತ್ತಿರುವ ಸಹ ಭೋಜನ ಗೃಹ ಪ್ರವೇಶ ಕಾರ್ಯಕ್ರಮ ಮನೆ ಮನೆ ಚಳವಳಿ ಮನಸ್ಸು ಮನಸ್ಸುಗಳ ಚಳವಳಿ ಆಗಬೇಕು. ಮನಸ್ಸುಗಳ ಪರಿವರ್ತನೆ ರಾತ್ರೋರಾತ್ರಿ ಆಗುವುದಿಲ್ಲ. ಇಲ್ಲಿ ಪಾಲ್ಗೊಂಡವರು ಮನೆಗೆ ಹೋಗಿ ಒಂದಿಷ್ಟು ಜನರ ಮನಸ್ಸು ಬದಲಾಯಿಸಬೇಕು. ಜಾತಿ ಎಂಬ ಪೆಡಂಭೂತವನ್ನು ತೆಗೆದು ಹಾಕಲು ಶ್ರಮಿಸಬೇಕು ಎಂದು ಎಂ.ಆರ್.ರವಿ ನುಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.