ADVERTISEMENT

ಆಮಂತ್ರಣ ನೀಡಿ ಮತದಾನಕ್ಕೆ ಆಹ್ವಾನ

ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ ಸಿಇಒ ಜಗದೀಶ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2019, 14:46 IST
Last Updated 16 ಮಾರ್ಚ್ 2019, 14:46 IST
ಜಿ.ಪಂ ಸಿಇಒ ಜಿ.ಜಗದೀಶ್ ಕೋಲಾರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಲೋಕಸಭಾ ಚುನಾವಣೆ ಸಂಬಂಧ ಮಾಹಿತಿ ನೀಡಿದರು.
ಜಿ.ಪಂ ಸಿಇಒ ಜಿ.ಜಗದೀಶ್ ಕೋಲಾರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಲೋಕಸಭಾ ಚುನಾವಣೆ ಸಂಬಂಧ ಮಾಹಿತಿ ನೀಡಿದರು.   

ಅಂಕಿ ಅಂಶ.....
* 3.33 ಲಕ್ಷ ಕುಟುಂಬಗಳು ಜಿಲ್ಲೆಯಲ್ಲಿವೆ
* 26 ಸಾವಿರ ಚೊಚ್ಚಲ ಮತದಾರರು
* 15,933 ಮಂದಿ ಅಂಗವಿಕಲ ಮತದಾರರು
* 8 ಲಕ್ಷ ಮಂದಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯ

ಕೋಲಾರ: ‘ಜಿಲ್ಲೆಯಲ್ಲಿ 3.33 ಲಕ್ಷ ಕುಟುಂಬಗಳಿದ್ದು, ಮತದಾರರೆಲ್ಲರೂ ಕಡ್ಡಾಯವಾಗಿ ಮತದಾನ ಮಾಡುವಂತೆ ಪ್ರತಿ ಕುಟುಂಬಕ್ಕೂ ಆಮಂತ್ರಣ ನೀಡಿ ಆಹ್ವಾನಿಸುತ್ತೇವೆ’ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಮತದಾನ ಆಮಂತ್ರಣ ಪತ್ರದಲ್ಲಿ ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರ ಸಹಿ ಇರುತ್ತದೆ’ ಎಂದು ಹೇಳಿದರು.

ADVERTISEMENT

‘ಜಿಲ್ಲೆಯಲ್ಲಿ ಸಾಮಾಜಿಕ ಜಾಲತಾಣ ತಂಡ ರಚಿಸಲಾಗಿದೆ. ಜಿಲ್ಲೆಯಲ್ಲಿ ಸುಮಾರು 8 ಲಕ್ಷ ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದು, ಇವರೆಲ್ಲರಿಗೂ ಕಡ್ಡಾಯ ಮತದಾನ ಕುರಿತು ಜಾಗೃತಿ ಮೂಡಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಶೇ 74ರಷ್ಟು ಮತದಾನವಾಗಿತ್ತು. ಈ ಬಾರಿ ಮತದಾನ ಪ್ರಮಾಣ ಹೆಚ್ಚಿಸುವತ್ತ ಗಮನ ಹರಿಸಿದ್ದೇವೆ. ಅರ್ಹ ಮತದಾರರನ್ನು ಈಗಾಗಲೇ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗಿದ್ದು, ವಿದಾನಸಭಾ ಚುನಾವಣೆಯಲ್ಲಿ 12 ಸಾವಿರ ಚೊಚ್ಚಲ ಮತದಾರರಿದ್ದರು. ಈ ಬಾರಿ ಹಲವು ಕಾರ್ಯಕ್ರಮ ಹಮ್ಮಿಕೊಂಡ ಕಾರಣ 26 ಸಾವಿರ ಚೊಚ್ಚಲ ಮತದಾರರನ್ನು ಗುರುತಿಸಿ ಪಟ್ಟಿಗೆ ಸೇರಿಸಲಾಗಿದೆ’ ಎಂದು ವಿವರಿಸಿದರು.

ಹೆಚ್ಚಿನ ಆದ್ಯತೆ: ‘ಅಂಗವಿಕಲ ಮತದಾರರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ವಿಧಾನಸಭಾ ಚುನಾವಣೆಯಲ್ಲಿ 8,054 ಅಂಗವಿಕಲ ಮತದಾರರನ್ನು ಗುರುತಿಸಲಾಗಿತ್ತು. ಈ ಬಾರಿ 15,933 ಮಂದಿ ಅಂಗವಿಕಲ ಮತದಾರರನ್ನು ಗುರುತಿಸಲಾಗಿದೆ. ಇವರಿಗೆ ಮತದಾನ ಮಾಡಲು ವಾಹನ ವ್ಯವಸ್ಥೆ ಕಲ್ಪಿಸಲಾಗುವುದು. ಎಲ್ಲಾ ಮತಗಟ್ಟೆಗಳಲ್ಲಿ ವ್ಹೀಲ್‌ ಚೇರ್‌ ಮತ್ತು ರ್‌್ಯಾಂಪ್‌ ಸೌಲಭ್ಯ ಕಲ್ಪಿಸಲಾಗುವುದು’ ಎಂದರು.

‘ಬ್ಯಾಲೆಟ್ ಯುನಿಟ್‌ನಲ್ಲಿ ಬ್ರೈಲ್ ಲಿಪಿ ಅಳವಡಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಂದರಂತೆ ಅಂಗವಿಕಲರ ಮತಗಟ್ಟೆ ಸ್ಥಾಪಿಸಲಾಗುವುದು. ಇಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಸಹ ಅಂಗವಿಕಲರಾಗುತ್ತಾರೆ’ ಎಂದು ಸ್ಪಷ್ಟಪಡಿಸಿದರು.

ಸಹಾಯ ಘಟಕ: ‘ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಶೇ 10ರಷ್ಟು ಕಡಿಮೆ ಮತದಾನವಾಗಿರುವ ಮತಗಟ್ಟೆಗಳನ್ನು ಗುರುತಿಸಿ ಅಲ್ಲಿ ಮತದಾನ ಹೆಚ್ಚಳಕ್ಕೆ ಜಾಗೃತಿ ಮೂಡಿಸಲಾಗುವುದು. ಎಲ್ಲಾ ತಾಲ್ಲೂಕುಗಳಲ್ಲಿ ಮತಗಟ್ಟೆ ಅಧಿಕಾರಿಗಳ ಸಭೆ ನಡೆಸಲಾಗುತ್ತಿದೆ. ಪ್ರತಿ ಮತಗಟ್ಟೆಯಲ್ಲಿ ಮತದಾನದ ದಿನ ಸಹಾಯ ಘಟಕ ಸ್ಥಾಪಿಸಲಾಗುವುದು’ ಎಂದು ತಿಳಿಸಿದರು.

‘ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ಮತದಾರರ ಜಾಗೃತಿ ವೇದಿಕೆ ಸ್ಥಾಪಿಸಿ. ಕಚೇರಿಗೆ ಬರುವ ಸಾರ್ವಜನಿಕರಿಗೆ ಚುನಾವಣಾ ಜಾಗೃತಿ ಹಾಗೂ ನೈತಿಕ ಮತದಾನ ಕುರಿತು ಮಾಹಿತಿ ನೀಡಲಾಗುವುದು. ಎಲ್ಲಾ ಗ್ರಾಮಗಳಲ್ಲಿ ಪಂಜಿನ ಮೆರವಣಿಗೆ ಮೂಲಕ ಮತದಾನದ ಬಗ್ಗೆ ಅರಿವು ಮೂಡಿಸುತ್ತೇವೆ’ ಎಂದು ಹೇಳಿದರು.

ಜಿಲ್ಲಾ ಸ್ವೀಪ್ ಸಮಿತಿ ಸದಸ್ಯ ಕಾರ್ಯದರ್ಶಿಯಾದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಸೌಮ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.