ADVERTISEMENT

ಹಿಂದೂಗಳ ಶಕ್ತಿ ಕುಗ್ಗಿಸುವುದು ಅಸಾಧ್ಯ: ಕ್ಷೇತ್ರಿಯ ಸಂಘಟನೆ

ಹಿಂದೂ ಜಾಗರಣಾ ವೇದಿಕೆ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ಗುಡುಗು

​ಪ್ರಜಾವಾಣಿ ವಾರ್ತೆ
Published 27 ಜನವರಿ 2020, 11:02 IST
Last Updated 27 ಜನವರಿ 2020, 11:02 IST
ಕೋಲಾರದಲ್ಲಿ ಭಾನುವಾರ ನಡೆದ ಹಿಂದೂ ಜಾಗರಣಾ ವೇದಿಕೆಯ 2ನೇ ತ್ರೈವಾರ್ಷಿಕ ಸಮ್ಮೇಳನದಲ್ಲಿ ವೇದಿಕೆ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ಮಾತನಾಡಿದರು.
ಕೋಲಾರದಲ್ಲಿ ಭಾನುವಾರ ನಡೆದ ಹಿಂದೂ ಜಾಗರಣಾ ವೇದಿಕೆಯ 2ನೇ ತ್ರೈವಾರ್ಷಿಕ ಸಮ್ಮೇಳನದಲ್ಲಿ ವೇದಿಕೆ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ಮಾತನಾಡಿದರು.   

ಕೋಲಾರ: ‘ಹಿಂದೂ ಧರ್ಮದ ಜತೆಗೆ ಇಸ್ಲಾಂ, ಕ್ರೈಸ್ತ ಧರ್ಮಗಳ ಹೋಲಿಕೆಯು ಸಮಾಜವಾದಿಗಳ ಷಡ್ಯಂತ್ರ’ ಎಂದು ಹಿಂದೂ ಜಾಗರಣಾ ವೇದಿಕೆ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ವಾಗ್ದಾಳಿ ನಡೆಸಿದರು.

ಇಲ್ಲಿ ಭಾನುವಾರ ನಡೆದ ಹಿಂದೂ ಜಾಗರಣಾ ವೇದಿಕೆಯ 2ನೇ ತ್ರೈವಾರ್ಷಿಕ ಸಮ್ಮೇಳನದಲ್ಲಿ ಮಾತನಾಡಿ, ‘೧,೪೦೦ ವರ್ಷದ ಹಿಂದೆ ಇಸ್ಲಾಂ ಇರಲಿಲ್ಲ. ಏಸು ಕ್ರಿಸ್ತ ಹುಟ್ಟುವ ಮುನ್ನ ಕ್ರಿಶ್ಚಿಯಾನಿಟಿ ಇರಲಿಲ್ಲ. ಆದರೆ, ಹಿಂದೂ ಧರ್ಮವು ಪುರಾತನ ಮತ್ತು ಸನಾತನ ಧರ್ಮ. ಯಾವ ಧರ್ಮದಿಂದಲೂ ಹಿಂದೂಗಳ ಶಕ್ತಿ ಕುಗ್ಗಿಸುವುದು ಸಾಧ್ಯವಿಲ್ಲ’ ಎಂದು ಗುಡುಗಿದರು.

‘ದೇಶವನ್ನು ೬೦ ವರ್ಷ ಆಳಿದ ಸಮಾಜವಾದಿಗಳು ಹಿಂದೂ ಎಂದರೆ ಮುಜುಗರಕ್ಕೆ ಒಳಗಾಗುವ, ಹೆದರುವ ಪರಿಸ್ಥಿತಿ ಸೃಷ್ಟಿಸಿರುವುದು ದುರಂತ. ಹಿಂದೂ ಎಂದರೆ ಕೋಮುವಾದಿ, ಸಂಕುಚಿತ, ದೇಶ ಛಿದ್ರಗೊಳಿಸುವ ವಿಭಜಕ ಎಂದು ಹಣೆಪಟ್ಟಿ ಕಟ್ಟಿ ಸ್ವಾಭಿಮಾನ ಕೊಲ್ಲುವ ಕುತಂತ್ರದ ಹಿಂದೆ ರಾಜಕೀಯ ದೂರ್ತತನವಿದೆ’ ಎಂದು ಕಿಡಿಕಾರಿದರು.

ADVERTISEMENT

‘ರಾಮಾಯಣ, ಮಹಾಭಾರತಕ್ಕೆ ಯುಗಗಳ ಇತಿಹಾಸವಿದೆ. ರಾಮಾಯಣ ಕಟ್ಟುಕತೆಯಲ್ಲ, ಇಂದಿಗೂ ಅಯೋಧ್ಯೆ ಅಸ್ತಿತ್ವದಲ್ಲಿದೆ. ಮಹಾಭಾರತವು ಬುರುಡೆಯಲ್ಲ, ದ್ವಾರಕ, ಮಥುರಾ, ಕುರುಕ್ಷೇತ್ರ ಪ್ರಸ್ತುತದಲ್ಲಿವೆ. ಹಿಂದೂಗಳು ಸಂಘಟಿತರಾಗಿ ಸಾಮರಸ್ಯ, ಸಮನ್ವಯತೆಯಿಂದ ಇದ್ದರೆ ಮಾತ್ರ ಧರ್ಮ ರಕ್ಷಣೆ ಸಾಧ್ಯ’ ಎಂದು ಕಿವಿಮಾತು ಹೇಳಿದರು.

ವಲಸೆ ಬಂದವರಲ್ಲ: ‘ದೇಶದ ಮೊದಲ ಪ್ರಧಾನಿ ನೆಹರೂ ತನ್ನನ್ನು ಕತ್ತೆ ಎಂದು ಬೇಕಿದ್ದರೂ ಕರೆಯಿರಿ. ಆದರೆ, ಹಿಂದೂ ಎಂದು ಕರೆಯಬೇಡಿ. ತಾನು ಆಕಸ್ಮಿಕವಾಗಿ ಹಿಂದೂವಾಗಿ ಹುಟ್ಟಿದ್ದೇನೆ. ಭಾರತದ ಒಂದಿಂಚು ಜಾಗದಲ್ಲಿ ಹಿಂದೂ ಧ್ವಜ ಹಾರಲು ಬಿಡುವುದಿಲ್ಲ ಎಂದು ಹೇಳಿದ್ದರು. ಆದರೆ, ಭಾರತವು ಇಸ್ಲಾಂ ದೇಶವಾಗಿ ಮಾರ್ಪಟ್ಟಿತೆ?’ ಎಂದು ಪ್ರಶ್ನಿಸಿದರು.

‘ಸನಾತನ ಸಂಸ್ಕೃತಿಯ ವಾರಸುದಾರರಾದ ಹಿಂದೂಗಳು ಮುಸ್ಲಿಮರು, ಕ್ರೈಸ್ತರಂತೆ ಈ ನೆಲಕ್ಕೆ ವಲಸೆ ಬಂದವರಲ್ಲ. ಮುಸ್ಲಿಮರಿಗೆ ಇಲ್ಲಿ ಮಸೀದಿ ಕಟ್ಟಿಕೊಳ್ಳಲು, ಕ್ರೈಸ್ತರಿಗೆ ಚರ್ಚ್ ಕಟ್ಟಿಕೊಳ್ಳಲು ಜಾಗ ಕೊಟ್ಟಿದ್ದೇವೆ. ಇಲ್ಲಿ ಬಂದ ಮೊಗಲರು ಉಂಡ ನೆಲಕ್ಕೆ ದ್ರೋಹ ಬಗೆದ ಪಾಪಿಗಳು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕೋಲಾರ ನಗರದಲ್ಲಿ ಕ್ಲಾಕ್‌ಟವರ್ ಸೇರಿದಂತೆ ಮುಸ್ಲಿಂ ಪ್ರದೇಶಗಳಿಗೆ ಹಿಂದೂಗಳ ಪ್ರವೇಶ ನಿರ್ಬಂಧಿಸಲಾಗಿದೆ. ಕೋಲಾರವನ್ನು ಮುಸ್ಲಿಂ ಜಿಲ್ಲೆಯಾಗಿಸುವ ಹುನ್ನಾರ ನಡೆಯುತ್ತಿದೆ. ಹಿಂದೂ ಸಮುದಾಯ ಎಚ್ಚೆತ್ತು ಈ ಪರಿಸ್ಥಿತಿ ಬದಲಿಸಬೇಕು’ ಎಂದು ಹೇಳಿದರು.

ಅಪಾರ ಕೊಡುಗೆ: ‘ಹಿಂದೂ ಧರ್ಮದ ಬಗ್ಗೆ ಗ್ರಾಮೀಣ ಭಾಗದಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಜಿಲ್ಲೆಯು ಬರಡು ಪ್ರದೇಶವಾಗಿದ್ದರೂ ಇಲ್ಲಿನ ಜನ ದೇಶದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ’ ಎಂದು ನಾಗಲಾಪುರ ಸಂಸ್ಥಾನ ಮಠದ ತೇಜೇಶಲಿಂಗ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಸಮ್ಮೇಳನಕ್ಕೂ ಮುನ್ನ ನಗರದ ಪ್ರಮುಖ ರಸ್ತೆಗಳಲ್ಲಿ ಶೋಭಾಯಾತ್ರೆ ನಡೆಸಲಾಯಿತು. ಶೋಭಾಯಾತ್ರೆ ಹಾಗೂ ಸಮ್ಮೇಳನದ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಸಿ.ಎಂ.ಆರ್.ಶ್ರೀನಾಥ್, ಕಾರ್ಯಾಧ್ಯಕ್ಷ ಡಾ.ಸಿ.ಕೆ.ಶಿವಣ್ಣ, ಸದಸ್ಯ ನಾರಾಯಣಸ್ವಾಮಿ, ಹಿಂದೂ ಜಾಗರಣ ವೇದಿಕೆ ಕಾರ್ಯದರ್ಶಿ ಕೇಶವಮೂರ್ತಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.