ADVERTISEMENT

16ಕ್ಕೆ ಬೆಂಗಳೂರಿನಲ್ಲಿ ಜೆಎಂಎಸ್‌ ಪ್ರತಿಭಟನೆ

ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2019, 9:53 IST
Last Updated 12 ಡಿಸೆಂಬರ್ 2019, 9:53 IST
ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಿರುವ ಪ್ರತಿಭಟನೆ ಮತ್ತು ಬಹಿರಂಗ ಸಭೆಯ ಪೋಸ್ಟರ್‌ಗಳನ್ನು ಜೆಎಂಎಸ್ ಸದಸ್ಯರು ಕೋಲಾರದಲ್ಲಿ ಬುಧವಾರ ಬಿಡುಗಡೆ ಮಾಡಿದರು.
ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಿರುವ ಪ್ರತಿಭಟನೆ ಮತ್ತು ಬಹಿರಂಗ ಸಭೆಯ ಪೋಸ್ಟರ್‌ಗಳನ್ನು ಜೆಎಂಎಸ್ ಸದಸ್ಯರು ಕೋಲಾರದಲ್ಲಿ ಬುಧವಾರ ಬಿಡುಗಡೆ ಮಾಡಿದರು.   

ಕೋಲಾರ: ‘ರೈತರು, ಕೃಷಿ ಕೂಲಿಕಾರರು ಹಾಗೂ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗೆ ಮತ್ತು ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಬೆಂಗಳೂರಿನಲ್ಲಿ ಡಿ.16ರಂದು ರಾಜ್ಯ ಮಟ್ಟದ ಪ್ರತಿಭಟನೆ ಮತ್ತು ಬಹಿರಂಗ ಸಭೆ ಹಮ್ಮಿಕೊಳ್ಳಲಾಗಿದೆ’ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ (ಜೆಎಂಎಸ್‌) ರಾಜ್ಯ ಘಟಕದ ಅಧ್ಯಕ್ಷೆ ದೇವಿ ತಿಳಿಸಿದರು.

ಇಲ್ಲಿ ಬುಧವಾರ ಜೆಎಂಎಸ್ ಸದಸ್ಯರ ಸಭೆಯಲ್ಲಿ ಪ್ರತಿಭಟನೆ ಮತ್ತು ಬಹಿರಂಗ ಸಭೆಯ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿ, ‘ಡಿ.16ರಂದು ಪ್ರತಿಭಟನೆಗೂ ಮುನ್ನ ಬೆಂಗಳೂರು ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಮೆರವಣಿಗೆ ನಡೆಸಲಾಗುತ್ತದೆ. ರಾಜ್ಯದ ವಿವಿಧ ಜಿಲ್ಲೆಗಳ ಮಹಿಳೆಯರು ಮೆರವಣಿಗೆ ಮತ್ತು ಬಹಿರಂಗ ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ’ ಎಂದರು.

‘ದೇಶದಲ್ಲಿ ಜನರ ಸಮಸ್ಯೆಗಳು ಗಂಭೀರವಾಗಿವೆ. ಮಹಿಳೆಯರು ಲಿಂಗಾಧಾರಿತ ದೌರ್ಜನ್ಯ ಎದುರಿಸುತ್ತಿದ್ದಾರೆ. ವಿಕೃತಿಯ ಪರಮಾವಧಿಯಾಗಿ ವಯೋಮಾನದ ಬೇಧವಿಲ್ಲದೆ ಸಂಬಂಧಗಳ ಪರಿವಿಲ್ಲದೆ ನಡೆಯುತ್ತಿರುವ ಅತ್ಯಾಚಾರ, ಹೆಣ್ಣು ಭ್ರೂಣ ಹತ್ಯೆ, ಮಕ್ಕಳ ಕೊಲೆ ಪ್ರಕರಣದಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

‘ರಾಜ್ಯದ ರಾಜಧಾನಿ ಬೆಂಗಳೂರು ನಗರದಲ್ಲಿ ದಿನಕ್ಕೆ ಮಹಿಳೆಯರ ಮೇಲಿನ ದೌರ್ಜನ್ಯ ಸಂಬಂಧ ಸರಾಸರಿ 9 ಪ್ರಕರಣ ದಾಖಲಾಗುತ್ತಿವೆ. ರಾಷ್ಟ್ರೀಯ ಅಪರಾಧ ದಾಖಲಾತಿ ವಿಭಾಗದ ವರದಿ ನೋಡಿದರೆ ಮಹಿಳೆಯರಲ್ಲಿ ಭಯ ಹುಟ್ಟುತ್ತದೆ. ದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ರಕ್ಷಣೆ ಇಲ್ಲವಾಗಿದೆ. ಆಳುವವರಿಗೆ ಅಧಿಕಾರವಷ್ಟೇ ಮುಖ್ಯವಾಗಿದೆ’ ಎಂದು ಕಿಡಿಕಾರಿದರು.

‘ಉದ್ಯಮಿಗಳು ಸಾಲು ಸಾಲಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಉದ್ಯೋಗಾವಕಾಶದಲ್ಲಿ ತೀವ್ರ ಕುಸಿತ ಉಂಟಾಗಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಿದ್ದು, ವಿದ್ಯಾವಂತರು ಕೆಲಸಕ್ಕೆ ಅಲೆಯುವಂತಾಗಿದೆ. ಕೃಷಿ ಬಿಕ್ಕಟ್ಟಿನಿಂದ ರೈತರ ಆತ್ಮಹತ್ಯೆ, ಕೂಲಿ ಕಾರ್ಮಿಕರ ವಲಸೆ ಹೆಚ್ಚಿದೆ. ನೋಟು ಅಮಾನ್ಯೀಕರಣ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಿಂದ ದೇಶದ ಅರ್ಥ ವ್ಯವಸ್ಥೆ ಬುಡ ಮೇಲಾಗಿದೆ’ ಎಂದು ದೂರಿದರು.

ಸರ್ಕಾರ ವಿಫಲ: ‘ಬ್ಯಾಂಕ್ ಸಾಲ, ಕಡಿಮೆ ಬಡ್ಡಿ, ಕೌಶಲ ತರಬೇತಿ, ಮಾರುಕಟ್ಟೆ ಒದಗಿಸಿ ಸಬಲೀಕರಣಕ್ಕೆ ಆದ್ಯತೆ ಕೊಡುವಲ್ಲಿ ಸರ್ಕಾರಗಳು ವಿಫಲವಾಗಿವೆ. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮೂಲಕ ಗ್ರಾಮೀಣ ಪ್ರದೇಶದ ಬಡವರಿಗೆ ಆಸರೆಯಾಗುವ ಮತ್ತು ಬರುಡಾಗುತ್ತಿರುವ ಭೂಮಿಗೆ ಜಲ ಸಂಪತ್ತು ಒದಗಿಸುವ ಬದಲು ಯೋಜನೆಗಳನ್ನೇ ದುರ್ಬಲಗೊಳಿಸಲಾಗಿದೆ. ಇದರಿಂದ ಜನರು ನಗರ ಪ್ರದೇಶಕ್ಕೆ  ವಲಸೆ ಹೋಗುತ್ತಿದ್ದಾರೆ’ ಎಂದರು.

ಜೆಎಂಎಸ್‌ ಜಿಲ್ಲಾ ಸಮಿತಿ ಅಧ್ಯಕ್ಷೆ ಸೌಭಾಗ್ಯಮ್ಮ, ಉಪಾಧ್ಯಕ್ಷೆ ಮಂಜುಳಾ, ಆರ್.ವಿಜಯಕುಮಾರಿ, ಸದಸ್ಯರಾದ ಸುಜಾತಾ, ಶಿಲ್ಪಾ, ಸರಸ್ಪತಿ, ಚಂದ್ರಲೀಲಾ, ಅಂಕಿತಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.