ADVERTISEMENT

ಕೋಲಾರ: ವಿವಿಧ ಬೇಡಿಕೆಗಳಿಗೆ ಕದಸಂಸ ಒತ್ತಾಯ

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 13:18 IST
Last Updated 2 ಜೂನ್ 2025, 13:18 IST
ಕೋಲಾರದಲ್ಲಿ ವಿವಿದ ಬೇಡಿಕೆಗಳಿಗೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡರು ಉಪವಿಭಾಗಾಧಿಕಾರಿ ಡಾ.ಮೈತ್ರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಕೋಲಾರದಲ್ಲಿ ವಿವಿದ ಬೇಡಿಕೆಗಳಿಗೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡರು ಉಪವಿಭಾಗಾಧಿಕಾರಿ ಡಾ.ಮೈತ್ರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು    

ಕೋಲಾರ: ತಾಲ್ಲೂಕಿನಾದ್ಯಂತ ದಲಿತರ ಜಮೀನುಗಳಿಗೆ ಕಂದಾಯ ದಾಖಲೆಗಳಿದ್ದು, ಕೂಡಲೇ ಖಾತೆ, ಗಣಕೀಕೃತ ಪಹಣಿ ಹಾಗೂ ಮುಟೇಶನ್ ಮಾಡಿಕೊಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ತಹಶೀಲ್ದಾರ್ ಕಚೇರಿ ಮುಂಭಾಗ ಧರಣಿ ನಡೆಸಲಾಯಿತು.

ಬಲಾಢ್ಯರ ಕುಮ್ಮಕ್ಕಿನಿಂದ ‘ಕೋಲಾರ ತಹಶೀಲ್ದಾರ್‌ ‌ಅಸಂವಿಧಾನಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ’ ಎಂದು ದೂರಿದರು.

‘ತಾಲ್ಲೂಕು ಏಳು ಹೋಬಳಿ ಕೇಂದ್ರಗಳನ್ನು ಹೊಂದಿದ್ದು ದಲಿತ, ಹಿಂದುಳಿದ, ಅಲ್ಪಸಂಖ್ಯಾತರಿಗೆ ಸ್ಮಶಾನ, ಭೂಮಿ, ರಸ್ತೆ ಸೌಲಭ್ಯ ನೀಡಲು ಕಂದಾಯ ಇಲಾಖೆ ವಿಫಲವಾಗಿದೆ. ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಮೂಕ ಪ್ರೇಕ್ಷಕನಂತೆ ವರ್ತಿಸುತ್ತಿರುವುದು ಸರಿಯಲ್ಲ’ ಎಂದರು.

ADVERTISEMENT

‘ಕೆರೆಗಳು, ರಾಜಕಾಲುವೆಗಳು, ಪೋಷಕ ಕಾಲುವೆಗಳ ಒತ್ತುವರಿ ತೆರವುಗೊಳಿಸಬೇಕು. ಸ್ಮಶಾನಗಳ ಒತ್ತುವರಿಯನ್ನು ತೆರವುಗೊಳಿಸಿ ಸ್ಮಶಾನಕ್ಕೆ ಕಾಂಪೌಂಡ್, ರಸ್ತೆ, ನಿರ್ಮಿಸಬೇಕು. ನಕಾಶೆ ರಸ್ತೆಗಳ ಒತ್ತುವರಿ ತೆರವುಗೊಳಿಸಿ ನಕಾಶೆಯಂತೆ ರಸ್ತೆ ಗುರ್ತಿಸಿ ಸರ್ಕಾರದಿಂದಲೇ ನಿರ್ಮಾಣ ಮಾಡಬೇಕು’ ಎಂದು ಆಗ್ರಹಿಸಿದರು.

‘ಸುಗಟೂರು ಹೋಬಳಿ ಮದನಹಳ್ಳಿ ಮತ್ತು ಹೋಳೂರು ಹೋಬಳಿ ಐತರಾಸನಹಳ್ಳಿ ಗ್ರಾಮಗಳ ದಲಿತರ ಜಮೀನುಗಳ ಸಂಬಂಧಪಟ್ಟಂತೆ ಉಪವಿಭಾಗಾಧಿಕಾರಿಗಳ ನ್ಯಾಯಾಲಯದ ಆದೇಶವಿದ್ದರೂ ಪ್ರಕರಣಗಳನ್ನು ಇತ್ಯರ್ಥಪಡಿಸಿಲ್ಲ. ಈ ಕೂಡಲೇ ಇತ್ಯರ್ಥಪಡಿಸಬೇಕು, ವಕ್ಕಲೇರಿ ಹೋಬಳಿಯ ಸೂಲೂರು ಗ್ರಾಮದ ಸ.ನಂ.4 ರಲ್ಲಿ ಐಂ61/1945-46 ರಲ್ಲಿ ಪರಿಶಿಷ್ಟ ಜಾತಿಯವರ ನಿವೇಶನಗಳಿಗಾಗಿ ಜಮೀನು ಮೀಸಲಿರಿಸಿದ್ದು, ಈವರೆಗೆ ಹದ್ದುಬಸ್ತು ಗುರುತಿಸಿಲ್ಲ. ಈ ಕೂಡಲೇ ಹದ್ದುಬಸ್ತು ಗುರುತಿಸಿಕೊಡಬೇಕು’ ಎಂದು ಮನವಿ ಮಾಡಿದರು.

ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ವಿ.ನಾರಾಯಣಸ್ವಾಮಿ ಮಾತನಾಡಿ, ‘10 ದಿನಗಳೊಳಗಾಗಿ ನಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಹೋರಾಟ ನಡೆಸಲಾಗುವುದು’ ಎಂದರು.

ಮನವಿ ಸ್ವೀಕರಿಸಿ ಮಾತನಾಡಿದ ಉಪವಿಭಾಗಾಧಿಕಾರಿ ಡಾ.ಮೈತ್ರಿ, ಸಮಸ್ಯೆಗಳನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದು ಬಗೆಹರಿಸುವ ಭರವಸೆ ನೀಡಿದರು.

ನಿಯೋಗದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕರಾದ ವೇಮಗಲ್ ಸುಧಾಕರ್, ಟಿ.ಜಯರಾಮ್, ಜಿಲ್ಲಾ ಸಂಚಾಲಕಿ ಸೊಣ್ಣೇನಹಳ್ಳಿ ಮಂಜುಳಾ, ತಾಲ್ಲೂಕು ಸಂಚಾಲಕ ಶೆಟ್ಟಿಮಾದಮಂಗಲ ರಾಜಣ್ಣ, ಮಹಿಳಾ ತಾಲ್ಲೂಕು ಸಂಚಾಲಕಿ ಕಮಲಮ್ಮ, ತಾಲ್ಲೂಕು ಸಂಘಟನಾ ಸಂಚಾಲಕರಾದ ಮದನಹಳ್ಳಿ ಹರೀಶ್, ಚನ್ನಪ್ಪನಹಳ್ಳಿ ಚಂದ್ರಶೇಖರ್, ಮೇಡಿಹಾಳ ನಂದೀಶ್, ವೇಮಗಲ್ ಮುನಿರಾಜು, ಕ್ಯಾಲನೂರು ಆರ್.ಆರ್.ರಮೇಶ್, ದಲಿತಮಿತ್ರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ರೈತ ಸಂಘದ ಮಿತ್ರ ಪದಾಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.