ADVERTISEMENT

ಕಾಯಕ ಹಾಗೂ ಬಡವ ಬಂಧು ಯೋಜನೆ ಬಡವರಿಗೆ ಆರ್ಥಿಕ ಶಕ್ತಿ ತುಂಬಲು ಪೂರಕ

ಕಾಯಕ, ಬಡವ ಬಂಧು ಯೋಜನೆ ಅನುಷ್ಟಾನಕ್ಕೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡ ಸೂಚನೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2020, 14:52 IST
Last Updated 2 ಜನವರಿ 2020, 14:52 IST
ಕೋಲಾರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಕಾಯಕ ಹಾಗೂ ಬಡವ ಬಂಧು ಯೋಜನೆ ಅನುಷ್ಟಾನ ಕುರಿತು ಬ್ಯಾಂಕ್ ನಿರ್ದೇಶಕರ ಮತ್ತು ಅಧಿಕಾರಿಗಳ ಸಭೆ ನಡೆಯಿತು.
ಕೋಲಾರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಕಾಯಕ ಹಾಗೂ ಬಡವ ಬಂಧು ಯೋಜನೆ ಅನುಷ್ಟಾನ ಕುರಿತು ಬ್ಯಾಂಕ್ ನಿರ್ದೇಶಕರ ಮತ್ತು ಅಧಿಕಾರಿಗಳ ಸಭೆ ನಡೆಯಿತು.   

ಕೋಲಾರ: ‘ಡಿಸಿಸಿ ಬ್ಯಾಂಕ್ ವತಿಯಿಂದ ಕಾಯಕ ಹಾಗೂ ಬಡವರ ಬಂಧು ಯೋಜನೆಗಳನ್ನು ಸರ್ಮಪಕವಾಗಿ ಅನುಷ್ಟಾನಗೊಳಿಸುವ ಮೂಲಕ ಬಡವರಿಗೆ ಆರ್ಥಿಕ ಶಕ್ತಿ ತುಂಬಬೇಕು’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.

ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಗುರುವಾರ ನಡೆದ ಬ್ಯಾಂಕಿನ ನಿರ್ದೇಶರ ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಸಾಲ ನೀಡುವುದು, ವಸೂಲಿ ಮಾಡುವುದು ಸಹಜವಾಗಿದೆ. ಬ್ಯಾಂಕ್ ಇಷ್ಟಕ್ಕೆ ಸಿಮೀತವಾಗಿಲ್ಲ, ಬಡವರು ಬದುಕು ರೂಪಿಸಿಕೊಳ್ಳಲು ಅವಕಾಶ ಕಲ್ಪಿಸುತ್ತದೆ ಎಂಬ ಭಾವನೆ ಜನರಲ್ಲಿ ಮೂಡಬೇಕು’ ಎಂದರು.

‘ಈ ಎರಡು ಯೋಜನೆಗಳನ್ನು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಡಿಸಿಸಿ ಬ್ಯಾಂಕ್‌ ಮೂಲಕ ಅನುಷ್ಟಾನಗೊಳಿಸಲು ಸರ್ಕಾರ ಅವಕಾಶ ನೀಡಿದೆ. ಇದರಡಿ ಸಾಲ ನೀಡಲು ಹಣ ಕಲ್ಪಿಸಲಾಗುತ್ತದೆ. ಇದಕ್ಕೆ ಅಧಿಕಾರಿಗಳು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

ADVERTISEMENT

ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ರವಿ ಮಾತನಾಡಿ, ‘ಬಡವರ ಬಂಧು ಯೋಜನೆಯಡಿ ಬೀದಿಬದಿ ವ್ಯಾಪಾರಸ್ಥರಿಗೆ ₹2 ಸಾವಿರದಿಂದ ₹10 ಸಾವಿರದತನಕ ಸಾಲ ಕೊಡಬಹುದು, ಫಲಾನುಭವಿಗಳು ಸ್ಥಳೀಯ ಸಂಸ್ಥೆಯಿಂದ ಗುರುತಿನ ಚೀಟಿ ಪಡೆದುಕೊಂಡಿರಬೇಕು’ ಎಂದು ಹೇಳಿದರು.

‘ಕಾಯಕ ಯೋಜನೆಯಡಿ ಗುಡಿ ಕೈಗಾರಿಕೆ ಅಥವಾ ಸ್ವಯಂ ಉದ್ಯೋಗ ನಡೆಸುವವರಿಗೆ ₹5 ಲಕ್ಷದ ತನಕ ಶೂನ್ಯ ಬಡ್ಡಿದರದಲ್ಲಿ ಹಾಗೂ ಅದಕ್ಕೂ ಹೆಚ್ಚಿನ ಸಾಲ ಬೇಕಾದರೆ ವಾರ್ಷಿಕವಾಗಿ ಶೇ.4ರಷ್ಟು ಬಡ್ಡಿದರದಲ್ಲಿ ಸಾಲ ನೀಡಬಹುದು’ ಎಂದು ವಿವವರಿಸಿದರು.

ಜಿಲ್ಲಾ ಪಂಚಾಯಿತಿ ಯೋಜನಾ ಅಧಿಕಾರಿ ಸುಂದರೇಶ್ ಮಾತನಾಡಿ, ‘ಟೆಕ್ಸ್‌ಟೈಲ್ ಉದ್ಯಮ ಮಾಲೂರಿನಲ್ಲಿ ಪ್ರಾರಂಭವಾಗಿದೆ. ಇದಕ್ಕೆ ಪೂರಕವಾಗಿ ಮಹಿಳೆಯರಿಗೆ ಟೈಲರಿಂಗ್ ಉದ್ಯಮ್ಯಕ್ಕೆ ಒತ್ತು ನೀಡಲು ಸರ್ಕಾರ ₹15 ಸಾವಿರ ನೀಡಿದರೆ, ಡಿಸಿಸಿ ಬ್ಯಾಂಕ್‌ನಿಂದ ₹35 ಸಾವಿರದಿಂದ ₹50ಸಾವಿರದವರೆಗೆ ಸಾಲ ಸೌಲಭ್ಯ ಕಲ್ಪಿಸಿದಲ್ಲಿ ಸ್ವಾವಲಂಭಿ ಜೀವನ ನಡೆಸಲು ಅನುವು ಮಾಡಿ ಕೊಡಬಹುದು’ ಎಂದು ಸಲಹೆ ನೀಡಿದರು.

ಬ್ಯಾಂಕ್ ನಿರ್ದೇಶಕ ಸೋಣ್ಣೆಗೌಡ ಮಾತನಾಡಿ, ‘ಮಹಿಳೆಯರು ಕೂಲಿಗೆ ಹೋದರು ದಿನಕ್ಕೆ ₹300 ಗಳಿಸುತ್ತಾರೆ. ಯೋಜನೆಗಳ ಮೂಲಕ ಸಾಲ ನೀಡಿದರೆ ಬಂಡವಾಳ ಹಾಕಿ ಲಾಭಗಳಿಸಬಹುದು. ಇದರ ಜತೆಗೆ ಹಣಕಾಸು ನಿರ್ವಹಣೆ ಕುರಿತು ತರಬೇತಿ ನೀಡಿದರೆ ಸಾಲವೂ ಸಮರ್ಪಕವಾಗಿ ಮರುಪಾವತಿಯಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷ ಗೋವಿಂದಗೌಡ ಮಾತನಾಡಿ, ‘ಎರಡೂ ಜಿಲ್ಲೆಯಲ್ಲಿ ಮಾರ್ಚ್‌ ಅಂತ್ಯದೊಳಗೆ ಕನಿಷ್ಟ ತಲಾ 100 ಸಂಘ ರಚನೆ ಮಾಡಬೇಕು, ಜತೆಗೆ 100 ಸಂಘವಾದರೂ ಗಣಕೀರಣಗೊಳ್ಳಬೇಕು’ ಎಂದು ಸೂಚಿಸಿದರು.

‘ಮಹಿಳೆಯರು, ರೈತರು ಬ್ಯಾಂಕಿನ ಮೇಲೆ ನಂಬಿಕೆ ಇಟ್ಟುಕೊಂಡಿದ್ದಾರೆ. ಬ್ಯಾಂಕ್ ಶಾಖಾ ವ್ಯವಸ್ಥಾಪಕರು ಬೀದಿಬದಿ ವ್ಯಾಪರಸ್ಥರ ದಾಖಲೆ ಪರಿಶೀಲಿಸಿ ಸ್ಥಳದಲ್ಲೇ ಶೂನ್ಯ ಬಡ್ಡಿದರದಲ್ಲಿ ₹10 ಸಾವಿರ ಮಂಜೂರು ಮಾಡಬಹುದು, ಪ್ರತಿದಿನ ವಸೂಲಿ ಮಾಡಿದರೆ ಸಾಲ ಮರುಪಾವತಿಯಾಗುತ್ತದೆ. ಇದಕ್ಕೇನು ಬಡವರು ಮೋಸ ಮಾಡುವುದಿಲ್ಲ’ ಎಂದರು.

ಬ್ಯಾಂಕಿನ ನಿರ್ದೇಶಕರಾದ ಹನುಮಂತರೆಡ್ಡಿ, ನಾಗಿರೆಡ್ಡಿ, ಮೋಹನ್ ರೆಡ್ಡಿ, ಗೋವಿಂದರಾಜು, ಸಹಕಾರ ಇಲಾಖೆಯ ಉಪ ನಿಬಂಧಕ ನಿಲ್ಲಪ್ಪನರ್, ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಎಂ.ಆರ್.ಶಿವಕುಮಾರ್, ಕಲೀಂವುಲ್ಲಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.