ADVERTISEMENT

ಕಲ್ಲಂಡೂರು: ಜೀರ್ಣೋದ್ಧಾರ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2020, 14:42 IST
Last Updated 3 ಫೆಬ್ರುವರಿ 2020, 14:42 IST

ಕೋಲಾರ: ‘ತಾಲ್ಲೂಕಿನ ಕಲ್ಲಂಡೂರು ಗ್ರಾಮದ ಚಂದ್ರಮೌಳೇಶ್ವರ ಸ್ವಾಮಿ (ಹಾಲುಗುಡಿ) ದೇವಾಲಯದ ಜೀರ್ಣೋದ್ಧಾರ ಮತ್ತು ನೂತನ ಬಿಂಬ ಪ್ರತಿಷ್ಠಾಪನಾ ಮಹೋತ್ಸವ ಫೆ.5ರಂದು ನಡೆಯಲಿದೆ’ ಎಂದು ರಾಜ್ಯ ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕ ನಂಜುಂಡೇಗೌಡ ತಿಳಿಸಿದರು.

ಕಲ್ಲೂಂಡೂರು ಗ್ರಾಮದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಗ್ರಾಮಸ್ಥರು ಮತ್ತು ಸರ್ಕಾರದ ನೆರವಿನಿಂದ ದೇವಸ್ಥಾನದ ಜೀರ್ಣೋದ್ಧಾರ ಮಾಡಲಾಗಿದೆ. ಈ ದೇವಾಲಯ ಸುಮಾರು 1,500 ವರ್ಷಗಳಷ್ಟು ಹಳೆಯದೆಂದು ಅಂದಾಜಿಸಲಾಗಿದೆ’ ಎಂದು ಹೇಳಿದರು.

‘ದೇವಾಲಯದ ಅಭಿವೃದ್ಧಿಗೆ ಪುರತತ್ವ ಇಲಾಖೆ ₹ 80 ಲಕ್ಷ ಮತ್ತು ರಾಜ್ಯ ಸರ್ಕಾರ ₹ 5 ಲಕ್ಷ ನೆರವು ನೀಡಿತ್ತು. ಉಳಿದಂತೆ ಭಕ್ತರು ದೇಣಿಗೆ ಸಂಗ್ರಹಿಸಿ ಸುಮಾರು ₹ 1.50 ಕೋಟಿ ವೆಚ್ಚದಲ್ಲಿ ದೇವಾಲಯದ ಜೀರ್ಣೋದ್ಧಾರ ಮಾಡಲಾಗಿದೆ. ಆಚಾರ್ಯ ವೆಲ್ಲಾಲ ಸತ್ಯನಾರಾಯಣ ಶಾಸ್ತ್ರಿಯವರ ಸಲಹೆಯಂತೆ ಚಂದ್ರಮೌಳೇಶ್ವರ ಸ್ವಾಮಿ ದೇವಾಲಯವೆಂದು ಹೆಸರಿಡಲಾಗಿದೆ’ ಎಂದು ವಿವರಿಸಿದರು.

ADVERTISEMENT

‘ಇತಿಹಾಸ ತಜ್ಞರ ಸಲಹೆಯಂತೆ ದೇವಾಲಯದ ಮೂಲ ಸ್ವರೂಪ ಉಳಿಸಿಕೊಳ್ಳಲಾಗಿದೆ. ದೇವಾಲಯ ಅವರಣದಲ್ಲಿನ ನಂದಿ ವಿಗ್ರಹ ಹಾಗೂ ಕಲ್ಲು ಕಂಬಗಳ ಮೇಲೆ ಲಿಂಗದ ಮೂರ್ತಿಗಳು ಹೆಚ್ಚಾಗಿರುವುದರಿಂದ ಇದು ಶಿವನ ದೇವಾಲಯವೆಂದು ತೀರ್ಮಾನಿಸಲಾಯಿತು. ಮೂಲ ವಿಗ್ರಹ ಪತ್ತೆಯಾಗಿಲ್ಲ. ಹೀಗಾಗಿ ಪ್ರಸನ್ನ ಮಹಾಗಣಪತಿ ಅನ್ನಪೂರ್ಣೇಶ್ವರಿ ಸಮೇತ ಚಂದ್ರಮೌಳೇಶ್ವರ ಸ್ವಾಮಿ ಮೂರ್ತಿ ಪ್ರತಿಷ್ಠಾಪಿಸಲಾಗಿದೆ’ ಎಂದರು.

ಬಿಂಬ ಪ್ರತಿಷ್ಠಾಪನೆ: ‘ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯದಲ್ಲಿ ವೆಲ್ಲಾಲ ಸತ್ಯನಾರಾಯಣ ಶಾಸ್ತ್ರಿಯವರು ಹಾಗೂ ಆಚಾರ್ಯ ವೆಲ್ಲಾಲ ಮಹೇಶ್ ಶಾಸ್ತ್ರಿಯವರು ಫೆ.5ರಂದು ಸಂಜೆ ಬಿಂಬ ಪ್ರತಿಷ್ಠಾಪನೆ ಮಾಡುತ್ತಾರೆ’ ಎಂದು ಮಾಹಿತಿ ನೀಡಿದರು.

‘ಫೆ.6ರಂದು ದ್ವಾದಶಿ, ಫೆ.7ರಂದು ತ್ರಯೋದಳಿ, ನೂತನ ವಿಗ್ರಹಗಳಿಗೆ ಪ್ರಾಣ ಪ್ರತಿಷ್ಠೆ, ಹೋಮ, ಕುಂಬಾಭಿಷೇಕ, ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ. ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಸಚಿವ ಆರ್‌.ಆಶೋಕ್, ಮಾಜಿ ಸಚಿವರಾದ ಕೃಷ್ಣ ಬೈರೇಗೌಡ, ರಾಮಲಿಂಗಾರೆಡ್ಡಿ, ಶಾಸಕ ಕೆ.ಶ್ರೀನಿವಾಸಗೌಡ, ವಿಧಾನ ಪರಿಷತ್‌ ಸದಸ್ಯ ವೈ.ಎ.ನಾರಾಯಣಸ್ವಾಮಿ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಪಾಲ್ಗೊಳ್ಳುತ್ತಾರೆ’ ಎಂದರು.

ವಕೀಲ ಲೋಕೇಶ್, ಕಲ್ಲಂಡೂರು ಗ್ರಾಮದ ಮುಖಂಡರಾದ ನಲ್ಲಪ್ಪಣ್ಣ, ಟಿ.ಶ್ರೀನಿವಾಸ್, ಕೃಷ್ಣಪ್ಪ, ಶ್ರೀನಿವಾಸಪ್ಪ, ಎಂ.ನಾಗರಾಜ್, ಶ್ರೀನಿವಾಸ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.