ADVERTISEMENT

ಕಂದಾಯ ಅದಾಲತ್‌: ‘ಕಚೇರಿಗೆ ಜನರ ಅಲೆದಾಟ ತಪ್ಪಿಸಿ’

ನಲ್ಲಿ ಅಧಿಕಾರಿಗಳಿಗೆ ಡಿ.ಸಿ ಸತ್ಯಭಾಮ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2021, 15:31 IST
Last Updated 8 ಫೆಬ್ರುವರಿ 2021, 15:31 IST
ಕೋಲಾರ ತಾಲ್ಲೂಕಿನ ವೇಮಗಲ್‌ನಲ್ಲಿ ಸೋಮವಾರ ನಡೆದ ಕಂದಾಯ ಅದಾಲತ್‌ನಲ್ಲಿ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಮಾತನಾಡಿದರು.
ಕೋಲಾರ ತಾಲ್ಲೂಕಿನ ವೇಮಗಲ್‌ನಲ್ಲಿ ಸೋಮವಾರ ನಡೆದ ಕಂದಾಯ ಅದಾಲತ್‌ನಲ್ಲಿ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಮಾತನಾಡಿದರು.   

ಕೋಲಾರ: ‘ಕಚೇರಿಗಳಿಗೆ ಜನರ ಅಲೆದಾಟ ತಪ್ಪಿಸಲು ಹೋಬಳಿ ಮಟ್ಟದಲ್ಲಿ ಕಂದಾಯ ಆದಾಲತ್ ನಡೆಸಬೇಕು. ಇದರಿಂದ ಗ್ರಾಮೀಣ ಜನರ ಶೇ 90ರಷ್ಟು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸಿಗಲಿದೆ’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅಭಿಪ್ರಾಯಪಟ್ಟರು.

ತಾಲ್ಲೂಕಿನ ವೇಮಗಲ್‌ ಗ್ರಾಮದಲ್ಲಿ ಸೋಮವಾರ ಕಂದಾಯ ಅದಾಲತ್‌ನಲ್ಲಿ ಮಾತನಾಡಿ, ‘ಸಾರ್ವಜನಿಕರ ಅನುಕೂಲಕ್ಕಾಗಿ ಕಂದಾಯ ಅದಾಲತ್‌ ನಡೆಸಲಾಗುತ್ತಿದೆ. ಜನರು ಇದರ ಸದುಪಯೋಗ ಪಡೆಯಬೇಕು’ ಎಂದು ಕಿವಿಮಾತು ಹೇಳಿದರು.

‘ಹೋಬಳಿ ಮಟ್ಟದಲ್ಲಿ ಕಂದಾಯ ಅದಾಲತ್ ನಡೆಯುತ್ತಿರುವುದರಿಂದ ಈ ಭಾಗದ ಜನರ ಸಮಸ್ಯೆಗಳಿಗೆ ಇಲ್ಲೇ ಪರಿಹಾರ ಸಿಗುತ್ತದೆ. ನ್ಯಾಯಾಲಯದಲ್ಲಿ ಇರುವ ಪ್ರಕರಣಗಳು ಮತ್ತು ಒಂದೆರಡು ದಿನದಲ್ಲಿ ಇತ್ಯರ್ಥವಾಗದ ಸಮಸ್ಯೆಗಳ ಪರಿಹಾರಕ್ಕೆ ಕಾಲಾವಕಾಶ ಬೇಕು’ ಎಂದು ವಿವರಿಸಿದರು.

ADVERTISEMENT

ಹಿಂದಿನ ಅದಾಲತ್‌ನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಪರಿಶೀಲಿಸಿ ಸಮಯಕ್ಕೆ ಸರಿಯಾಗಿ ವಿಲೇವಾರಿ ಮಾಡಿರುವುದಕ್ಕೆ ಕಂದಾಯ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ ಜಿಲ್ಲಾಧಿಕಾರಿಯು, ‘ಮುಂದೆಯೂ ಇದೇ ರೀತಿ ಜನಪರವಾಗಿ ಕೆಲಸ ಮಾಡಿ’ ಎಂದು ಸಲಹೆ ನೀಡಿದರು.

ವಾರದ ಗಡುವು: ‘ಅದಾಲತ್‌ನಲ್ಲಿ ಸಾಮಾಜಿಕ ಭದ್ರತೆ ಯೋಜನೆಯ ಎಲ್ಲಾ ಬಗೆಯ ಪಿಂಚಣಿಗಳು, ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಪರಿಶೀಲಿಸಿ ಶೀಘ್ರವೇ ಸಮಸ್ಯೆ ಪರಿಹರಿಸುತ್ತೇವೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ವಾರದೊಳಗೆ ಕಾರ್ಯರೂಪಕ್ಕೆ ತರಬೇಕು’ ಎಂದು ತಾಕೀತು ಮಾಡಿದರು.

‘ಅದಾಲತ್‌ನಲ್ಲಿ ಭಾಗವಹಿಸದಿರುವ ವ್ಯಕ್ತಿಗಳ ಮನೆ ಬಾಗಿಲಿಗೆ ಅವರ ಮನವಿಯಂತೆ ಸಂಬಂಧಿಸಿದ ದಾಖಲೆಪತ್ರಗಳನ್ನು ತಲುಪಿಸಬೇಕು. ಜನರು ಸರ್ಕಾರಿ ಸೇವೆಗಾಗಿ ಕಚೇರಿಗೆ ಅಲೆದಾಡಬಾರದು. ಎಲ್ಲರೂ ಒಟ್ಟಾಗಿ ಜನರ ಕೆಲಸ ಮಾಡೋಣ’ ಎಂದು ಗ್ರಾಮ ಲೆಕ್ಕಾಧಿಕಾರಿಗಳಿಗೆ ತಿಳಿಸಿದರು.

ಪ್ರಮಾಣಪತ್ರ ವಿತರಣೆ: ಹಿಂದಿನ ಪವತಿ ವಾರಸ್ಸುದಾರಿಕೆ ಪಹಣಿ ಅದಾಲತ್‌ನಲ್ಲಿ ಸಾರ್ವಜನಿಕರಿಂದ ಸಲ್ಲಿಕೆಯಾಗಿದ್ದ 223 ಅರ್ಜಿಗಳಲ್ಲಿ 123 ಅರ್ಜಿಗಳ ದಾಖಲೆಪತ್ರಗಳ ಸರಿಯಾಗಿದ್ದ ಹಿನ್ನೆಲೆಯಲ್ಲಿ ಅದಾಲತ್‌ನಲ್ಲಿ ಪ್ರಮಾಣಪತ್ರ ವಿತರಿಸಲಾಯಿತು. 23 ಅರ್ಜಿಗಳ ಸಂಬಂಧ ತಕರಾರು ಇದ್ದ ಕಾರಣ ಅವುಗಳನ್ನು ಬಾಕಿ ಉಳಿಸಿಕೊಳ್ಳಲಾಯಿತು.

ಸಾರ್ವಜನಿಕರು, ವಿವಿಧ ಸಂಘಟೆನೆಗಳ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ವಿಧಾನ ಪರಿತಷ್‌ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಉಪ ವಿಭಾಗಾಧಿಕಾರಿ ವಿ.ಸೋಮಶೇಖರ್, ತಹಶೀಲ್ದಾರ್ ಶೋಭಿತಾ, ಉಪ ತಹಶೀಲ್ದಾರ್ ಹೇಮಲತಾ, ರಾಜಸ್ವ ನಿರೀಕ್ಷಕ ರಮೇಶ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.