ADVERTISEMENT

ಕರೆದಲ್ಲಿಗೆ ಬರುವ ಕನ್ನಡದ ತೇರು

ಅಸಹಾಯಕರಿಗೆ ಆಸರೆಯಾಗುವ ಮಾಲೂರಿನ ಮಂಜು

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2019, 15:43 IST
Last Updated 1 ನವೆಂಬರ್ 2019, 15:43 IST
ತಮ್ಮ ಆಟೊ ಜತೆ ಮಾಲೂರು ತಾಲ್ಲೂಕಿನ ದೊಡ್ಡ ಕಡತೂರು ಗ್ರಾಮದ ಮಂಜು. (ಎಡ ಚಿತ್ರ) ಆಟೊ ಮೇಲೆ ಕನ್ನಡದ ಹಿರಿಯ ಸಾಧಕರ ಚಿತ್ರಗಳು
ತಮ್ಮ ಆಟೊ ಜತೆ ಮಾಲೂರು ತಾಲ್ಲೂಕಿನ ದೊಡ್ಡ ಕಡತೂರು ಗ್ರಾಮದ ಮಂಜು. (ಎಡ ಚಿತ್ರ) ಆಟೊ ಮೇಲೆ ಕನ್ನಡದ ಹಿರಿಯ ಸಾಧಕರ ಚಿತ್ರಗಳು   

ಮಾಲೂರು: ಅಸಹಾಯಕರಿಗೆ, ಅಂಗವಿಕಲರಿಗೆ, ಗರ್ಭಿಣಿಯರಿಗೆ, ವಯೋವೃದ್ಧರಿಗೆ, ರೋಗಿಗಳಿಗೆ ಆಟೊ ಸೌಲಭ್ಯ ಬೇಕು ಎಂದು ಯಾರಾದರೂ ಕೇಳಿದರೆ ತಟ್ಟನೆ ನೆನಪಾಗುವುದು ಆಟೊ ಮಂಜು.ಬರೀ ಆಟೊ ಮಂಜು ಎಂದರೆ ಪಟ್ಟಣದಲ್ಲಿ ಯಾರಿಗೂ ತಿಳಿಯುವುದಿಲ್ಲ ಕನ್ನಡ ಪರ ಹೋರಾಟಗಾರ ಮಂಜು ಎಂದರೆ ಥಟ್ಟನೆ ಅವರಿರುವ ದಾರಿ ತೋರಿಸುತ್ತಾರೆ.

ತಾಲ್ಲೂಕಿನ ದೊಡ್ಡ ಕಡತೂರು ಮಂಜು ಹುಟ್ಟೂರು. ಅವರ ತಂದೆ ಹುಲಿ ವೇಷದ ಕಲಾವಿದರು. ತಂದೆಯ ಕಲೆಯನ್ನು ಕೈ ಬಿಡದೆ ಇವರೂ ಸಹ ಹುಲಿ ವೇಷ ಹಾಕಿ ಕುಣಿಯುವುದೂ ಉಂಟು. ಬಡ ಕುಟುಂಬದಿಂದ ಬಂದಿ
ರುವ ಮಂಜು ಓದಿದ್ದು ಬರಿ ಏಳನೇ ತರಗತಿವರೆಗೆ. ಇಂಗ್ಲಿಷ್ ಭಯ ಶಾಲೆ
ಯನ್ನು ಅರ್ಧಕ್ಕೆ ಬಿಡುವಂತೆ ಮಾಡಿತು. 18ರ ಹರೆಯದಲ್ಲೆ ತನ್ನ ಕಾಲ ಮೇಲೆ ನಿಲ್ಲಲು ಪ್ರಯತ್ನಪಟ್ಟು ಯಶಸ್ವಿಯಾದರು.

‘ಹೊಟ್ಟೆಪಾಡಿನ ವೃತ್ತಿ ಆಟೊ ಚಾಲನೆ. ಕನ್ನಡ ಭಾಷೆ ಎಂದರೆ ಪ್ರಾಣ. ರಾಜ್ಯದ ಯಾವುದೇ ಜಿಲ್ಲೆಯಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನನ್ನ ಆಟೊದಲ್ಲಿಯೆ ಸ್ನೇಹಿತರನ್ನು ಕರೆದುಕೊಂಡು ಹೋಗುವುದು ನನ್ನ ಹವ್ಯಾಸ. ಜೀವನದಲ್ಲಿ ಇತರರಿಗೆ ಸಹಾಯ ಮಾಡುವುದರಲ್ಲಿ ಸಿಗುವ ಸುಖ ಬೇರೆಲ್ಲೂ ಸಿಗುವುದಿಲ್ಲ ಎನ್ನುತ್ತಾರೆ ಮಂಜು.

ADVERTISEMENT

ಪಟ್ಟಣ ಸೇರಿದಂತೆ ಕಸಬ ಹೋಬಳಿ ವ್ಯಾಪ್ತಿಯಲ್ಲಿರುವ ಅಂಗವಿಕಲರು, ಗರ್ಭಿಣಿಯರು ಮತ್ತು ವಯೋವೃದ್ಧರು ದೂರವಾಣಿ ಕರೆ ಮಾಡಿ ವಿಳಾಸ ತಿಳಿಸಿದರೆ ಸಾಕು ಅವರ ಮುಂದೆ ಮಂಜು ಹಾಜರು. ಹೀಗೆ ಸತತ 15 ವರ್ಷಗಳಿಂದ ಈ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

‘ನನ್ನಲ್ಲಿ ಕನ್ನಡ ಭಾಷೆಯ ಬಗ್ಗೆ ಆಸಕ್ತಿ ಹುಟ್ಟಿಸುವಂತೆ ಮಾಡಿದ್ದೆ ಮಂಜು. ಕನ್ನಡ ಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಇವರು ಯಾವುದೇ ಸಂಘಟನೆಯ ಹೋರಾಟವಿರಲಿ ತಮ್ಮ ಹಿತೈಷಿಗಳೊಂದಿಗೆ ಅಲ್ಲಿ ಹಾಜರಾಗುತ್ತಾರೆ’ ಎನ್ನುವುದು ಸ್ನೇಹಿತ ಮುರುಗನ್ ಅವರ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.