ಶ್ರೀನಿವಾಸಪುರ: ರಾಜ್ಯ ಸರ್ಕಾರವು ಜಾರಿ ಮಾಡಿರುವ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೇರುತ್ತಿವೆಯೋ ಇಲ್ಲವೋ ಎಂಬುದನ್ನು ತಿಳಿಯಲು ಸಮೀಕ್ಷೆ ನಡೆಸುತ್ತಿದ್ದು, ಶ್ಲಾಘನೀಯ ಹೆಜ್ಜೆ ಎಂದು ವಿಧಾನಸಭೆ ಮಾಜಿ ಅಧ್ಯಕ್ಷ, ಮಾಜಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ತಾಲ್ಲೂಕಿನ ಅಡ್ಡಗಲ್‌ನ ತಮ್ಮ ನಿವಾಸದಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ಈ ಸಮೀಕ್ಷೆಯು ಸಮಾಜದ ಅಭಿವೃದ್ಧಿಯ ಸಂಕೇತವಾಗಿದೆ. ಸಮಾಜದಲ್ಲಿನ ಅಸಮತೋಲನವನ್ನು ದೂರಮಾಡಲು, ಮುಂದಿನ ಸರ್ಕಾರಗಳಿಗೆ ಹೊಸದಾದ ರೀತಿ, ನೀತಿಗಳನ್ನ ರೂಪಿಸಲು ಸಹಾಯವಾಗುತ್ತದೆ. ಕೆಲ ಕುಟುಂಬಗಳಿಗೆ ಸರ್ಕಾರದ ಯೋಜನೆಗಳು ಸಿಗದೆ ಇರಬಹುದು. ಅಂತಹವರನ್ನ ಪತ್ತೆ ಹಚ್ಚುವುದೇ ಸರ್ಕಾರದ ಉದ್ದೇಶ. ಸಮೀಕ್ಷೆಯಿಂದ ಕುಟುಂಬದ ಆರ್ಥಿಕ ಸ್ಥಿತಿ, ಸಾಮಾಜಿಕ ಹಾಗು ಶೈಕ್ಷಣಿಕ ಪರಿಸ್ಥಿತಿ ಪತ್ತೆ ಹಚ್ಚಬಹುದಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಯಾವ ರೀತಿಯಲ್ಲಿ ಯೋಜನೆಗಳನ್ನು ಹಮ್ಮಿಕೊಳ್ಳಬಹುದೆಂಬ ಚಿಂತನೆ ನಡೆಸಬಹುದಾಗಿದೆ’ ಎಂದರು
ರಾಜ್ಯ ಅಭಿವೃದ್ಧಿಯ ಪಥದಲ್ಲಿ ಇಡಬೇಕಾದ ಹೆಜ್ಜೆಗಳನ್ನು ಈ ಸಮೀಕ್ಷೆಯಿಂದ ಗುರುತಿಸಬಹುದು. ಒಟ್ಟಿನಲ್ಲಿ ರಾಜ್ಯದ ಮುಂದಿನ ಪೀಳಿಗೆಗೆ ಅನುಕೂಲಕರವಾದ ಈ ಸಮೀಕ್ಷೆಯನ್ನು ಎಲ್ಲಾ ಜನರು ಸ್ವಾಗತಿಸಿ ಸಮೀಕ್ಷೆಯ ಯಶಸ್ವಿಗೆ ಸಹಕಾರ ನೀಡಬೇಕು. ಇದು ಎಲ್ಲರ ಜವಾಬ್ದಾರಿಯಾಗಿದೆ. ಆದ್ದರಿಂದ ಪ್ರತಿಯೊಬ್ಬ ನಾಗರಿಕರು ಸಹ ಸಮೀಕ್ಷೆಯಲ್ಲಿ ಪಾಲ್ಗೊಂಡು ಗಣತಿದಾರರಿಗೆ ನಿಖರವಾದ ಮಾಹಿತಿ ನೀಡಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಆರ್‌ಪಿ ವೆಂಕಟಾಚಲಪತಿ, ಸಿಆರ್‌ಪಿ ವೇಣುಗೋಪಾಲ್, ಮುಖ್ಯ ಶಿಕ್ಷಕ ಸಿ.ಈರಪ್ಪ, ಶಿಕ್ಷಕ ವೆಂಕಟಶಿವ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.